D S Arun ಬದಲಾವಣೆಗೆ ಎಲ್ಲರೂ ಸಹಕರಿಸಬೇಕು. ಜನ ಬದಲಾದರೆ ಸಮಾಜ ಬದಲಾಗಲು ಸಾಧ್ಯ. ಮತದಾನದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಮತದಾನ ಮಾಡಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಉತ್ತಮ ಆಡಳಿತ ಸಾಧ್ಯ ಎಂದು ಎಂಎಲ್ ಸಿ ಡಿ ಎಸ್ ಅರುಣ್ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಜಿಲ್ಲಾ ಮತದಾರರ ಜಾಗೃತ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಚುನಾವಣೆ ಸುಧಾರಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 97 ಕೋಟಿ ಮತದಾರರು ಮತಚಲಾವಣೆ ಮಾಡಲಿದ್ದಾರೆ. ಜನ ಮತ ಹಾಕುವ ಮನಸ್ಸು ಮಾಡಬೇಕು, ಮತದಾನದ ದಿನ ಮನೆ ಬಿಟ್ಟು ಹೊರಬರದಿದ್ದರೆ ಏನು ಮಾಡಲು ಸಾಧ್ಯ, ಇಂತಹವರನ್ನು ಎಂದಿಗೂ ಜಾಗೃತಗೊಳಿಸಲಾಗದು.
ಮತದಾರ ಸದಾ ಜಾಗೃತನಾಗಿರಬೇಕೇ ಹೊರತು ಆತನನ್ನು ಜಾಗೃತಗೊಳಿಸುವ ಕೆಲಸ ನಡೆಯಬಾರದು ಎಂದರು.
ಆಯುಷ್ ವೈದ್ಯೆ ಡಾ. ರಂಜಿನಿ ಬಿದರಹಳ್ಳಿ ಮಾತನಾಡಿ, ಶಿವಮೊಗ್ಗ ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ಪಡೆದಿದೆ. ಆದರೆ ಇಲ್ಲಿಯೇ ಮತದಾನ ಕಡಿಮೆಯಾಗುತ್ತಿದೆ. ಮತದಾನ ಜಾಗೃತಿ ಎನ್ನುವುದು ಮುಜುಗುರ ತರುವ ಕೆಲಸವಾಗಿದೆ. ಮತದಾರ ಏಕೆ ಮತದಾನ ಮಾಡುವುದಿಲ್ಲ ಎನ್ನುವ ಪ್ರಶ್ನೆ ಸದಾ ಎದುರಾಗುತ್ತದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ಸಭೆಗೆ ಸತತ ಹಾಜರಾಗದಿದ್ದರೆ ಅಂತಹವರನ್ನು ನಿರ್ದೇಶಕ ಸ್ಥಾನದಿಂದ ಅಮಾನತು ಮಾಡುವ ಕಾಯ್ದೆ ಇದೆ. ಆ ಕಾಯ್ದೆ ಇಲ್ಲಿಯೂ ಜಾರಿಯಾಗಬೇಕಿದೆ. ಮತದಾನ ಮಾಡದವರಿಗೆ ಶಿಕ್ಷೆ ಕೊಡುವಂತಾಗಬೇಕು. ಅವರನ್ನು ಎಲ್ಲರೂ ಪ್ರಶ್ನಿಸಬೇಕು. ಇಲ್ಲಿಯವರೆಗೆ ಸತತ ಜಾಗೃತಿ ಮಾಡಿ ಸಾಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜಾಗೃತಿ ಮಾಡುತ್ತಿರುವುದು ಸರಿಯಲ್ಲ ಎಂದರು.
ರೈತ ಮುಖಂಡ ಕೆ ಟಿ ಗಂಗಧರ ಮಾತನಾಡಿ, ರಾಜಕೀಯ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯುವುದು, ಅವರ ಅಪವಿತ್ರ ಮೈತ್ರಿ, ತಳಬುಡವಿಲ್ಲದ ಸಿದ್ಧಾಂತಗಳು, ಅಪಮೌಲ್ಯಗೊಳಿಸಿದ ಆಡಳಿತ ಇವೆಲ್ಲವೂ ಮತದಾರರನನ್ನು ಭ್ರಮನಿರಸನಗೊಳಿಸಿವೆ. ಆದಕಾರಣ ಎಷ್ಟೋ ಮತದಾರರು ಬೇಸರಗೊಂಡು ಮತ ಹಾಕುತ್ತಿಲ್ಲ. ಹಳ್ಳಿಗಳಲ್ಲಿ ಜನರು ಸಂಪೂರ್ಣವಾಗಿ ಮತ ಚಲಾಯಿಸುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಮತ ಹಾಕಲು ಬರುತ್ತಿಲ್ಲ. ಇದನ್ನು ಸರಿಪಡಿಸುವವರಾರು ಎನ್ನುವ ಪ್ರಶ್ನೆ ಸದಾ ನಮ್ಮ ಎದುರಿದೆ. ಮತದಾನವನ್ನು ತಪ್ಪದೇ ಮಾಡಬೇಕೆನ್ನುವುದು ಪ್ರಜಾಪ್ರಭುತ್ವದ ಸದಾಶಯ, ಆದರೆ ಅದು ಹಾಗೆ ಉಳಿದಿಲ್ಲ. ಎಲ್ಲರೂ ಸಂವಿಧಾನದ ಉಳಿವಿಗೆ ಕೆಲಸ ಮಾಡುತ್ತೇವೆ ಎನ್ನುವ ನಂಬಿಕೆ ಬರಬೇಕು ಎಂದರು.
D S Arun ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಶೇಖರ್ ಗೌಳೇರ್ ವಹಿಸಿದ್ದರು.
ವೇದಿಕೆಯಲ್ಲಿ ಎಂಎಲ್‌ಸಿ ರುದ್ರೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಜಿ ಶಿವಮೂರ್ತಿ, ಡಯಾಬಿಟಿಕ್ ತಜ್ಞ ಡಾ. ಪ್ರೀತಮ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ರೋಟರಿ ವಿಜಯಕುಮಾರ್, ಬಸವರಾಜ್ ಮೊದಲಾದವರಿದ್ದರು.