Toll gate ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಟೋಲ್ ಗೇಟ್ ಸ್ಥಾಪಿಸಲಾಗಿದೆ. ಇನ್ನುಮುಂದೆ ಟೋಲ್ ಪಾವತಿಸಿ ಜನರು ಸಂಚರಿಸಬೇಕಾಗಿದೆ. ಈ ಮೊದಲಿನಿಂದಲು ಇದ್ದ ರಸ್ತೆಯಲ್ಲೇ ರಾಜ್ಯ ಸರ್ಕಾರ ಟೋಲ್ ಸ್ಥಾಪಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸವಳಂಗ ನಡುವೆ ಒಂದು ಟೋಲ್ ಗೇಟ್ ಸ್ಥಾಪಿಸಲಾಗಿದೆ. ಶಿಕಾರಿಪುರ – ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್ ನಿರ್ಮಿಸಲಾಗಿದೆ.
ಶಿವಮೊಗ್ಗ – ಹಾನಗಲ್ ರಾಜ್ಯ ಹೆದ್ದಾರಿಯ ಸವಳಂಗ ಮತ್ತು ಸೀಗೆಕಣಿವೆಯಲ್ಲಿ ಟೋಲ್‌ಗಳನ್ನು ಸ್ಥಾಪಿಸಲಾಗಿದೆ. ಟೋಲ್‌ನಲ್ಲಿ ನಾಲ್ಕು ಪ್ರತ್ಯೇಕ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗು ತಲಾ ಎರಡು ಗೇಟ್ ಇರಲಿದೆ. ಟೋಲ್ ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್ ನಿರ್ಮಿಸಲಾಗಿದೆ. ಟೋಲ್ ಪ್ಲಾಜಾದಲ್ಲಿ ಬೆಳಕಿಗೆ ಲೈಟ್‌ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ. ಟೋಲ್ ಗೇಟ್‌ನಲ್ಲಿ ಮಾತ್ರ ರಸ್ತೆ ಅಗಲ ಮಾಡಲಾಗಿದೆ.
ರಸ್ತೆ ನಿರ್ವಹಣೆಗೆ ಟೋಲ್ ನಿರ್ಮಿಸಬೇಕು ಎಂಬ ಪ್ರಸ್ತಾವನೆಗೆ ರಾಜ್ಯ ಸರ್ಕಾರ 2017ರಲ್ಲಿ ಒಪ್ಪಿಗೆ ನೀಡಿತ್ತು. ರಾಜ್ಯದ ಒಟ್ಟು 19 ರಸ್ತೆಯಲ್ಲಿ 43 ಕಡೆ ಟೋಲ್ ನಿರ್ಮಿಸಲು ಸರ್ಕಾರ ಅಸ್ತು ಎಂದಿತ್ತು. ಅಂತೆಯೇ ಶಿವಮೊಗ್ಗ – ಹಾನಗಲ್ ರಾಜ್ಯ ಹೆದ್ದಾರಿ 57ರಲ್ಲಿ ಕೆಶಿಪ್ ವತಿಯಿಂದ ಎರಡು ಕಡೆ ಟೋಲ್ ನಿರ್ಮಿಸಲಾಗಿದೆ. ಹಾಗಾಗಿ ಇನ್ಮುಂದೆ ಶಿವಮೊಗ್ಗ – ಸವಳಂಗ – ಶಿಕಾರಿಪುರ ಮಾರ್ಗದಲ್ಲಿ ಸಂಚರಿಸುವವರು, ಶಿರಾಳಕೊಪ್ಪ – ಶಿಕಾರಿಪುರ ನಡುವಿನ ಸಂಚರಿಸುವ ವಾಹನ ಸವಾರರು ಟೋಲ್ ಪಾವತಿಸುವುದು ಅನಿವಾರ್ಯ.
ಟೋಲ್ ವಿರುದ್ಧ ಸಿಡಿದೆದ್ದ ಜನ
ರಾಜ್ಯ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸದೆ ಈ ಹಿಂದಿನಿಂದಲು ಇದ್ದ ರಸ್ತೆಗೆ ಟೋಲ್ ಕಟ್ಟಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ದರ, ಬಾಡಿಗೆ ಹೆಚ್ಚಳದ ಆತಂಕ
Toll gate ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ ಮಧ್ಯೆ ಹತ್ತಾರು ಬಸ್ಸುಗಳು ನಿತ್ಯ ಸಂಚರಿಸುತ್ತಿವೆ. ಡಿಸೇಲ್ ದರ ಹೆಚ್ಚಳ, ಶಕ್ತಿ ಯೋಜನೆಯ ಪರಿಣಾಮ, ಟ್ಯಾಕ್ಸ್, ಬಸ್ಸುಗಳ ನಿರ್ವಹಣೆ ಖರ್ಚು ನಿಭಾಯಿಸಲು ಮಾಲೀಕರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ನಿತ್ಯ ಪ್ರತಿ ಟ್ರಿಪ್‌ಗು ಟೋಲ್ ಕಟ್ಟುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆಯೆ ಎಂದು ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಇನ್ನು, ಗೂಡ್ಸ್ ವಾಹನಗಳು ಕೂಡ ಟೋಲ್ ದರ ನಿಭಾಯಿಸಲು ಬಾಡಿಗೆ ಹೆಚ್ಚಳ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯು ಇದೆ.
ತೀವ್ರ ವಿರೋಧದ ನಡುವೆ ಜಿಲ್ಲೆಯಲ್ಲಿ ಎರಡು ಟೋಲ್ ಸ್ಥಾಪನೆಯಾಗಿವೆ. ರಸ್ತೆ ನಿರ್ಮಾಣಕ್ಕೆ ಪಡೆದ ಸಾಲ ತೀರಿಸಲು ಸುಂಕ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವಿದೆ. ಕೋವಿಡ್ ಕಾರಣಕ್ಕೆ ಟೋಲ್ ಗೇಟ್ ಸ್ಥಾಪನೆ ವಿಳಂಬವಾಗಿತ್ತು. ಈಗ ಜಿಲ್ಲೆಯಲ್ಲಿ ಮೊದಲ ಬಾರಿ ಟೋಲ್ ಗೇಟ್‌ಗಳನ್ನು ಸ್ಥಾಪಿಸಲಾಗಿದ್ದು ದುಬಾರಿ ದುನಿಯಾದಲ್ಲಿ ಜಿಲ್ಲೆಯ ವಾಹನ ಸವಾರರಿಗೂ ಟೋಲ್ ಬರೆ ಬೀಳಲಿದೆ.