Purandara Dasaru “ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್/
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾ
ನಿಧಿಮ್//
ಹರಿದಾಸ ಸಾಹಿತ್ಯವೆಂಬೊ ಆಕಾಶದಲ್ಲಿ ಮಿನುಗುತ್ತಿರುವ ಸುವರ್ಣಕಾಂತಿಯ ನಕ್ಷತ್ರ ಶ್ರೀಪುರಂದರದಾಸರು.ಹರಿದಾಸರಲ್ಲಿ ಅಗ್ರಗಣ್ಯರಾಗಿರುವ ಪುರಂದರದಾಸರು ಕನ್ನಡನಾಡಿನಲ್ಲಿ ಎಲ್ಲರಿಗೂ ಜನಪ್ರಿಯವಾದ ಹೆಸರು,ಇವರ ಕೀರ್ತನೆಗಳನ್ನು ಕೇಳದ ಕನ್ನಡಿಗನು ಇಲ್ಲವೇಇಲ್ಲ ಎಂದು ಹೇಳಬಹುದು.
ಪುರಂದರದಾಸರ ಮೊದಲಿನ ಹೆಸರು ಶ್ರೀನಿವಾಸ ನಾಯಕ ಎಂದು. ಅತ್ಯಂತ ಲೋಭಿಯೂ,ಜಿಪುಣಾಗ್ರೇಸರನಾಗಿದ್ದ
ಶ್ರೀನಿವಾಸನಾಯಕರು ಸಂಪತ್ತು ಗಳಿಸುವುದೇ ಸರ್ವಸ್ವ ಎಂದು ತಿಳಿದಿದ್ದರು.
ಐಶ್ವರ್ಯದಲ್ಲಿ ನವಕೋಟಿನಾರಾಯಣ ಎಂದೇ ಹೆಸರು ಗಳಿಸಿದ್ದವರು ಅಂತಸ್ತಿನಲ್ಲಿ ಉಪ್ಪರಿಗೆ ಮನೆ ಕೊಪ್ಪರಿಗೆ ಹಣ ಹೊಂದಿದ್ದವರು.
ಧರ್ಮ ಸ್ವಭಾವದವಳು,ಸನ್ನಡತೆಯ ಪತ್ನಿಯಿಂದ ಭಗವಂತನ ಕಡೆಗೆ ಭಕ್ತಿಯಸಂಪತ್ತನ್ನು ಖರ್ಚು ಮಾಡಿ ಧನ ಸಂಪತ್ತನ್ನು ತ್ಯಜಿಸಿ ಯೋಗಿಯಾಗಿ ದಾಸರಾದರು.
ಕೃಪಣತ್ವ,ಜಿಪುಣತ್ವದಲ್ಲಿ ನಿಪುಣತ್ವ ಸಾಧಿಸಿದವರು ಶ್ರೀನಿವಾಸನಾಯಕರು.ಭಗವಂತನು ಇವರಿಗೆ ತಮ್ಮ ಹೆಂಡತಿಯ ಮೂಗುತಿಯನ್ನು ದಾಳವಾಗಿಟ್ಟುಕೊಂಡು ವೈರಾಗ್ಯದ ಕಡಗೆ ತಿರುಗುವಂತೆ ಮಾಡಿದನು.
ಇವರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆಕೊಟ್ಟಿರುವ ಕೊಡುಗೆ ಅಪಾರ.ಸಂಗೀತ ವಿದ್ಯಾರ್ಥಿಗಳಿಗೆ ಪ್ರಾರಂಭಿಕಅಭ್ಯಾಸಗಳನ್ನೂ,ಪಿಳ್ಳಾರಿಗೀತೆಗಳು
,ಉಗಾಭೋಗಗಳು,ಸುಮಾರು ನಾಲ್ಕುಲಕ್ಷ ಎಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿ ಕರ್ನಾಟಕ ಸಂಗೀತ ಪಿತಾಮಹರೆನಿಸಿದ್ದಾರೆ.
ಪುರಂದರದಾಸರು ಸಾಮಾನ್ಯ ಜನರಿಗೂ ಅರ್ಥವಾಗುವ ಸರಳವಾದ ಕನ್ನಡ ಭಾಷೆಯಲ್ಲಿ ಕೃತಿಗಳನ್ನು ರಚಿಸಿರುವುದೇ ಅಲ್ಲದೆ,ಅವುಗಳಲ್ಲಿ ಭಕ್ತಿಪರವಶತೆಯನ್ನುಹೊಂದಿವೆ.ಆಡುಮಾತುಗಳಲ್ಲಿ ಬುದ್ಧಿಮಾತನ್ನು ಹೇಳಿ ಎಚ್ಚರಿಸಿದ್ದಾರೆ.
Purandara Dasaru ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಡಾಂಭಿಕ ಆಚರಣೆಗಳನ್ನು ಧಿಕ್ಕರಿಸುವ, ಸ್ವಾರ್ಥಲೋಭಗಳನ್ನು ಖಂಡಿಸುವ ವಿಚಾರಗಳನ್ನು ಅವರ ಕೀರ್ತನೆಗಳು ಹೊಂದಿವೆ.
ಕಲಿಯುಗದಲ್ಲಿ ಭಕ್ತಿಯ ಪ್ರಾಧಾನ್ಯತೆಯನ್ನು ಪ್ರತಿ
ಪಾದಿಸುತ್ತ ,ವೇದಾಂತ ಸಾರವನ್ನು ತಿಳಿಸುತ್ತಾ ಪ್ರತಿ
ವ್ಯಕ್ತಿಗೂ ಅನುಭವಕ್ಕೆ ನಿಲುಕುವ ವಾಸ್ತವ ಸಂಗತಿ
ಗಳನ್ನು ತಲುಪಿಸುತ್ತಾ ಸಾಹಿತ್ಯದ ಸ್ವಾರಸ್ಯಕ್ಕೆ ಸಂಗೀತದ ಸಾಮರಸ್ಯ ಕೊಟ್ಟು ತಾಳ ಮೇಳ ನಾದಗಳನ್ನು ಒಳಗೊಂಡ ಅವರ ಹಾಡುಗಳ ಕೊಡುಗೆ ಅನನ್ಯ,
ಅಪೂರ್ವ ಮತ್ತು ಅವಿಸ್ಮರಣೀಯ. ಪುರಂದರ
ದಾಸರ ಗುರುಗಳಾದ ಶ್ರೀವ್ಯಾಸರಾಯರು ತಮ್ಮ ಶಿಷ್ಯನ ಬಗ್ಗೆ“ದಾಸರೆಂದರೆ ಪುರಂದರದಾಸರಯ್ಯ”ಎಂದು ಕೊಂಡಾಡಿದ್ದಾರೆ. ಶ್ರೀವಿಜಯದಾಸರು “ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲ ನಂಬಿದೆ” ಎಂದು ಹಾಡಿ ತಮ್ಮ ಗುರುಗಳಿಗೆ ವಂದಿಸಿದ್ದಾರೆ. ಶ್ರೀಪುರಂದರದಾಸರ ಕೀರ್ತನೆ
ಗಳೆಲ್ಲವೂ “ಪುರಂದರವಿಠಲ” ಎಂಬ ಅಂಕಿತದಿಂದ ಕೊನೆಗೊಳ್ಳುತ್ತವೆ. ಎಲ್ಲಕೀರ್ತನೆಗಳೂ ವಿಠಲನ ಸ್ಮರಣೆಯೊಂದಿಗೆಮುಕ್ತಾಯಗೊಳ್ಳುತ್ತವೆ. ಪುರಂದರ ವಿಠಲ ಎಂಬ ಅಂಕಿತದಿಂದ ಸಂಚಾರ ಮಾಡುತ್ತಾ ಅವರ ಬಾಯಿಂದ ಹೊರಹೊಮ್ಮಿದ ಗೀತೆಗಳೆಲ್ಲ ಅನರ್ಘ್ಯ ಮುತ್ತು ರತ್ನಗಳಾಗಿವೆ.
ಪುರಂದರದಾಸರ ಹೆಸರು ಇಂದಿಗೂ ನೆನಪಿನಲ್ಲಿ ಉಳಿದಿದೆ ಎಂದರೆ ನವಕೋಟಿ ಸಂಪತ್ತನ್ನು ತ್ಯಜಿಸಿ ನಾರಾಯಣನ ಪಾದವನ್ನು ಹಿಡಿದವರು. ಧನದಲ್ಲಿ ಜಿಪುಣತನವಿದ್ದರೂ ಜ್ಞಾನ ಸಂಪತ್ತು ಹಂಚುವಲ್ಲಿ ಧಾರಾಳತನ ತೋರಿದವರು ಪುರಂದರದಾಸರು. ಊರಿಂದೂರಿಗೆ ಹೋಗಿ ಜ್ಞಾನ ಪ್ರಸಾರವನ್ನು ಮಾಡಿದಂತಹ ಗುರುಗಳು ಪುರಂದರ ದಾಸರು. ಬದುಕಿನ ಜಂಜಾಟಗಳನ್ನು ಮೆಟ್ಟಿ ಸಾರ್ಥಕಬಾಳ್ವೆಯನ್ನು ನಡೆಸಲು ಮತ್ತು ಭಕ್ತಿಯ ಮಾರ್ಗದ ಹಾದಿಯಲ್ಲಿ ಸಾಗಲುಸರ್ವರಿಗೂ ಅವರ ಕೀರ್ತನೆಗಳು ಮಾರ್ಗದರ್ಶನದ ದೀವಿಗೆಗಳಾಗಿವೆ.
ರಕ್ತಾಕ್ಷಿ ಸಂವತ್ಸರದ ಪುಷ್ಯಮಾಸದ ಬಹುಳ ಅಮಾವಾಸ್ಯೆಯಂದು ಹರಿಪಾದ ಸೇರಿದರು.
ಇಂತಹ ಸಂಗೀತ ಪಿತಾಮಹರಾದ ಶ್ರೀಪುರಂದರದಾಸರ ಆರಾಧನೆಯನ್ನು ಪುಶ್ಯಮಾಸದ ಬಹುಳ ಅಮಾವಾಸ್ಯೆಯಂದು ನೆರವೇರುತ್ತದೆ.ದಾಸವರೇಣ್ಯರ ಆರಾಧನೆಯ ದಿನವಾದ ಇಂದು ನಾವೂ ಭಕ್ತಿಯ ನಮನಗಳನ್ನರ್ಪಿಸಿ ಅವರ ಅನುಗ್ರಹ ಪಡೆಯೋಣ.
ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
