Karnataka Sanga ಕನ್ನಡದ ಬಗ್ಗೆ ಹೆಚ್ಚು ಅರಿತುಕೊಳ್ಳಲು ರಸಪ್ರಶ್ನೆ ಕಾರ್ಯಕ್ರಮಗಳು ಸಹಕಾರಿ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಂ.ಎನ್. ಸುಂದರರಾಜ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ ಮಹಡಿಯಲ್ಲಿನ ಹೊಸೂಡಿ ದತ್ತಾತ್ರೇಯ ಶಾಸ್ತ್ರಿ ಸ್ಮಾರಕ ಗ್ರಂಥ ಭಂಡಾರದ ಕಿರು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೇಡಿಯೋ ಶಿವಮೊಗ್ಗ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಸಲಾಗಿದ್ದ ಕನ್ನಡ ರಸಪ್ರಶ್ನೆ 2023ರ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಸಪ್ರಶ್ನೆ ಕಾರ್ಯಕ್ರಮಗಳು ಭಾಷೆಯ ಸಮಗ್ರ ತಿಳಿವಳಿಕೆಗೆ ಸಹಕಾರಿಯಾಗಿವೆ. ಇವು ಹೆಚ್ಚು ಸಾರ್ವಜನಿಕರನ್ನು ತಲುಪಬೇಕಿದೆ. ಇದರ ಜೊತೆಯಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೂ ವಿಭಾಗವಿದಿದ್ದು, ಇದು ಸಂತಸ ತಂದಿದೆ. ಕನ್ನಡ ಭಾಷೆಯ ಹಿರಿಮೆ, ಗರಿಮೆ ಯುವ ಸಮೂಹದಲ್ಲಿ ಹೆಮ್ಮೆಯುಂಟು ಮಾಡಲು ಇದು ಅನುಕೂಲಕರ ಎಂದರು.
ಆಯೋಜಕ ಸಂಸ್ಥೆಗಳ ಪದಾಧಿಕಾರಿ, ವಿಶ್ರಾಂತ ತಹಸೀಲ್ದಾರ್ ಸಿ.ಎಸ್. ಚಂದ್ರಶೇಖರ್ ಮಾತನಾಡಿ ಇದೊಂದು ಆತ್ಮೀಯ ಸಮಾರಂಭವಾಗಿದ್ದು, ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ ಕನ್ನಡದ ಪ್ರೌಢಿಮೆಗಳನ್ನು ಎಲ್ಲರಿಗೂ ತಲುಪಿಸಬೇಕು ಎಂದ ಅವರು, ಕನ್ನಡದ ವಿವಿಧ ಪದಗಳನ್ನು ಒಡೆದರೆ ಉಂಟಾಗುವ ಅರ್ಥ ವ್ಯತ್ಯಾಸವನ್ನು ವಿಶದವಾಗಿ ವಿವರಿಸಿದರು.
ರಸಪ್ರಶ್ನೆಯ ನಿರೂಪಕ, ಸಾಂದೀಪನಿ ಶಾಲೆಯ ಕನ್ನಡ ಶಿಕ್ಷಕ ಚೇತನ್ ರಾಯನಹಳ್ಳಿ ಮಾತನಾಡಿ ಕನ್ನಡವನ್ನು ಬೆಳೆಸುವುದಕ್ಕಿಂತ, ಕನ್ನಡವನ್ನು ಬಳಸಿ, ನಾವು ಬೆಳೆಯಬೇಕಿದೆ, ಉಳಿಯಬೇಕಿದೆ ಎಂದ ಅವರು, ಕನ್ನಡದ ವಿವಿಧ ಕವಿಗಳು ಬರೆದಿರುವ ಚಿತ್ರ ಕವಿತ್ವದ ವಿಶೇಷತೆಗಳನ್ನು ಪರಿಚಯ ಮಾಡಿಕೊಟ್ಟರು.
ಬಹುಮಾನ ವಿಜೇತರಿಗೆ ನಗದು ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಪುಸ್ತಕಗಳನ್ನು ಕರ್ನಾಟಕ ಸಂಘ ಕೊಡುಗೆಯಾಗಿ ನೀಡಿತು.
ಆರ್‌ಜೆ ಅರ್ಪಿತಾ, ನಿಲಯದ ಸಂಯೋಜಕ ಗುರುಪ್ರಸಾದ್, ಕರ್ನಾಟಕ ಸಂಘದ ವ್ಯವಸ್ಥಾಪಕ ದಿನೇಶ್, ಕಚೇರಿ ಸಹಾಯಕ ಪ್ರಶಾಂತ್ ಉಪಸ್ಥಿತರಿದ್ದರು.
Karnataka Sanga ಯಶೋದಾ ಶೇಖರ್ ಪ್ರಾರ್ಥಿಸಿದರು. ನಿಲಯದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ನಿರೂಪಿಸಿದರು.
ಬಹುಮಾನ ವಿಜೇತರ ವಿವರ
ಸಾರ್ವಜನಿಕರ ವಿಭಾಗ: ಪ್ರಥಮ ಬಹುಮಾನ – ಯಶೋದಾ ಶೇಖರ್ ಹಾಗೂ ಬಿ.ಜಿ. ಗೀತಾ), ದ್ವಿತೀಯ ಬಹುಮಾನ- ಬಿ.ವಿ. ನಂದಿನಿ ಹಾಗೂ ಹೆಚ್. ಕಿರಣ್ ಕುಮಾರ್, ತೃತೀಯ ಬಹುಮಾನ ಶೈಲಜಾ ಹಾಗೂ ಭಾರತಿ ಎನ್. ರಾವ್
ವಿದ್ಯಾರ್ಥಿ ವಿಭಾಗ: ಪ್ರಥಮ ಬಹುಮಾನ – ಎನ್. ನಿಸರ್ಗ ಹಾಗೂ ಬಿ.ವೈ. ಅಕ್ಷತಾ, ಕಸ್ತೂರ ಬಾ ಪಿಯು ಕಾಲೇಜು , ದ್ವಿತೀಯ ಬಹುಮಾನ ಚಿಂತನ್ ಎ. ಕಲ್ಲಜ್ಜಿ ಹಾಗೂ ರಜತ್ ಕೃಷ್ಣ ಆರ್ ಹತ್ವಾರ್ – ಸಾಂದೀಪನಿ ಶಾಲೆ, ತೃತೀಯ ಬಹುಮಾನ – ಶರಣ್ಯಾ ಶರ್ಮ ಹಾಗೂ ಎಸ್.ಎಸ್. ಸುಮೇಧಾ ರಾವ್ – ಮಹಾವೀರ ಶಾಲೆ