ಬೀದರ್ ನ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಂಬೇಡ್ಕರ್ ಅವರ ಪ್ರತಿಮೆಗೆ ಹೂಮಾಲೆಯನ್ನು ಹಾಕಿ ನಮಿಸಿದರು.
ನಮ್ಮ ಸಂವಿಧಾನದಲ್ಲಿ ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಇದು ಎಲ್ಲ ಕಾಲಕ್ಕೂ ಸಲ್ಲುತ್ತದೆ. ನಮ್ಮದು ಶ್ರೇಷ್ಠ ಸಂವಿಧಾನ. ಅಂಬೇಡ್ಕರ್ ಅವರು ಎಲ್ಲರಿಗೂ ಸಂವಿಧಾನದ ಮೂಲಕ ಸಮಾನತೆಯ ಹಕ್ಕು ನೀಡಿದ್ದಾರೆ. ಅವರು ಆಧುನಿಕ ಭಾರತದ ಪಿತಾಮಹ. ಬದುಕಿನಲ್ಲಿ ನೋವು, ಶೋಷಣೆ ಅನುಭವಿಸಿ, ತಮ್ಮಂತೆಯೇ ಮತ್ತೊಬ್ಬರಿಗೂ ನೋವಾಗಬಾರದು. ಶೋಷಣೆಯಲ್ಲಿ ಸಿಲುಕಬಾರದು ಎಂಬ ಕಾರಣಕ್ಕೆ ಕೆಳ ಸಮುದಾಯದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅವರು ಪ್ರಯತ್ನಿಸಿದರು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ನಾವುಗಳು ಈಡೇರಿಸೋಣ. ಬಾಬಾಸಾಹೇಬರ ತತ್ವಾದರ್ಶಗಳನ್ನು ಪಾಲನೆ ಮಾಡೋಣ. ಆ ಮೂಲಕ ಅವರಿಗೆ ನಾವು ನಿಜವಾದ ಗೌರವ ಸಲ್ಲಿಸೋಣ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ, ದಲಿತ ಸಂಘಟನೆಗಳ ಒಕ್ಕೂಟ ಹೀಗೆ ಹಲವಾರು ಸಂಘಟನೆಗಳು ಸೇರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.