Gummadi Vithal Rao ಗುಮ್ಮಡಿ ವಿಠಲ್ ರಾವ್ ( ಗದ್ದರ್ )ಬಹುಶಃ ಬಲಪಂಥೀಯ ಚಿಂತನೆಯ ಕಟ್ಟಾ ಅನುಯಾಯಿಗಳು ಇವರನ್ನು ಒಬ್ಬ ನಕ್ಸಲೈಟ್ – ಕಮ್ಯುನಿಸ್ಟ್ ಎಂದು ಭಾವಿಸಿ ಅವರನ್ನು ತೀವ್ರವಾಗಿ ವಿರೋಧಿಸಬಹುದು. ಕೊನೆಯ ಕೆಲವು ವರ್ಷಗಳಲ್ಲಿ ಅವರ ನಿಲುವುಗಳಲ್ಲಿ ಒಂದಷ್ಟು ಬದಲಾವಣೆಗಳಾದವು ಎಂಬ ಪಕ್ಕಾ ನಕ್ಸಲರ ಆರೋಪವೂ ಇದೆ. ಹಿಂಸಾ ಪ್ರಚೋದನೆ ಎಂಬ ಕಾರಣದಿಂದ ಅವರನ್ನು ತಟಸ್ಥ ಮನೋಭಾವದ ಶಾಂತಿ ಪ್ರಿಯರು ಒಪ್ಪದೇ ಇರಬಹುದು. ಆದರೆ….
ಸುಮಾರು ಎಪ್ಪತ್ತು ಎಂಬತ್ತು ತೊಂಬತ್ತರ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅದರಲ್ಲೂ ದಕ್ಷಿಣ ಭಾರತದ ಒಟ್ಟು ಜನ ಜೀವನದ ಆಗುಹೋಗುಗಳನ್ನು ಗಮನಿಸಿದವರಿಗೆ ಗದ್ದರ್ ಒಬ್ಬ ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ. ಸಮಾನತೆ – ಮಾನವೀಯತೆ – ಶೋಷಣೆ ಮತ್ತು ಶೋಷಿತರು ಎಂಬ ಪದಗಳ ಅರ್ಥವನ್ನು ಹುಡುಕಾಡುವವರ ಎದೆಯಲ್ಲಿ ಖಂಡಿತ ಗದ್ದರ್ ಒಬ್ಬ ಕ್ರಾಂತಿಕಾರಿ ಎಂದೆನಿಸದೇ ಇರದು..
70/80 ರ ದಶಕದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಎರಡು ಮೂರು ಪ್ರಬಲ ಜಾತಿಗಳು ಕೆಳ ಸಮುದಾಯಗಳನ್ನು ಬಹುತೇಕ ಎರಡನೆಯ ದರ್ಜೆಯ ಪ್ರಜೆಗಳಂತೆಯೇ ಭಾವಿಸಿ ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಜೀತಪದ್ದತಿ ಕ್ರಿಯಾಶೀಲವಾಗಿತ್ತು. ಕೆಲವೇ ಜನರು ವಿಸ್ತಾರವಾದ ಕೃಷಿ ಭೂಮಿಯ ಒಡೆಯರಾಗಿ ಜಮೀನ್ದಾರಿ ವ್ಯವಸ್ಥೆ ಪ್ರಬಲವಾಗಿ ಅಸ್ತಿತ್ವದಲ್ಲಿತ್ತು. ಪೋಲೀಸ್, ನ್ಯಾಯಾಂಗ ಮತ್ತು ರಾಜಕೀಯ ವ್ಯವಸ್ಥೆ ಕೆಲವೇ ಜನರ ಸ್ವತ್ತಾಗಿತ್ತು. ಮಾಧ್ಯಮಗಳು ಸಹ ಈಗಿನಷ್ಟು ಸ್ವಾತಂತ್ರ್ಯ ಮತ್ತು ವಿಸ್ತಾರ ಹೊಂದಿರಲಿಲ್ಲ. ನ್ಯಾಯ ಪರವಾದ ಬಂಡಾಯದ ಧ್ವನಿಗಳನ್ನು ಕೊಂದು ವ್ಯಕ್ತಿಗಳೇ ಪತ್ತೆ ಇಲ್ಲದ ಹಾಗೆ ಮಾಡುತ್ತಿದ್ದರು. ಎಷ್ಟೋ ತನಿಖಾಧಿಕಾರಿಗಳೇ ಕೊಲೆಯಾಗುತ್ತಿದ್ದರು. ಅನೇಕ ಊರುಗಳಿಗೆ ಪೋಲೀಸರ ಪ್ರವೇಶವೇ ಅಸಾಧ್ಯವಾಗಿತ್ತು. ನ್ಯಾಯಾಲಯದ ಸಾಕ್ಷಿಗಳನ್ನು ಕೊಲ್ಲುತ್ತಿದ್ದರು. ಚುನಾವಣೆಯಲ್ಲಿ ಮತಗಟ್ಟೆಗಳನ್ನೇ ವಶಪಡಿಸಿಕೊಂಡು ತಾವೇ ಮುದ್ರೆ ಒತ್ತುತ್ತಿದ್ದರು. ಕೆಲವು ಮನೆತನಗಳು ಪಾಳೇಗಾರರಂತೆ ಇಡೀ ಪ್ರದೇಶದ ಅನಧಿಕೃತ ಸಾಮ್ರಾಟರಾಗಿದ್ದರು……
ಅಂತಹ ಸನ್ನಿವೇಶದಲ್ಲಿ ಮಹಾರಾಷ್ಟ್ರದ ಅಸ್ಪೃಶ್ಯ ಜನಾಂಗವಾದ ಮಹರ್ ಜಾತಿ ಮೂಲದವರಾದ ಅವಿಭಜಿತ ಆಂದ್ರಪ್ರದೇಶದ ಮೇಡಕ್ ಜಿಲ್ಲೆಯ ನಿವಾಸಿಯಾದ ತೆಲುಗು ಭಾಷೆಯ ಗದ್ದರ್ ಸ್ವತಃ ಕವಿಯಾಗಿ ಸಾಹಿತ್ಯ ರಚಿಸಿ ಜಾನಪದ ಶೈಲಿಯಲ್ಲಿ, ಕಂಚಿನ ಕಂಠದಲ್ಲಿ ಹಾಡಿದರೆಂದರೆ ಮನಸ್ಸುಗಳಲ್ಲಿ ರೋಮಾಂಚನವಾಗಿ ರಕ್ತ ಬಿಸಿಯಾಗಿ ಆಕ್ರೋಶ ಕುದಿಯುತ್ತಿತ್ತು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪ್ರತಿ ಮನುಷ್ಯನು ಆಳದಲ್ಲಿ ನಕ್ಸಲೀಯನೇ. ತನಗೆ ಮತ್ತು ತನ್ನವರಿಗೆ ಮೋಸವಾದಾಗ ಯಾರಿಗೇ ಆದರೂ ಕೋಪದ ಪ್ರತಿಕ್ರಿಯೆ ಬಂದೇ ಬರುತ್ತದೆ. ಆದರೆ ಅದನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದು ಮಾತ್ರ ನಮ್ಮ ವಿವೇಚನೆಗಳಿಗೆ ಒಳಪಟ್ಟಿರುತ್ತದೆ. ಶಾಂತಿಯೋ, ಕ್ರಾಂತಿಯೋ, ಶರಣಾಗತಿಯೋ, ಹಿಂಸೆಯೋ, ಪ್ರತಿಭಟನೆಯೋ, ಅಸಹಕಾರವೋ, ಪಲಾಯನವೋ,
ಮೌನವೋ ಏನೇ ಆಗಲಿ ಅದು ಒಂದೊಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ…..
Gummadi Vithal Rao ಗದ್ದರ್ ಇಲ್ಲದವರ ಪರವಾಗಿ ಇದ್ದವರ ವಿರುದ್ಧ ಆಗಿನ ಕಾಲದಲ್ಲಿ ಮೊಳಗಿಸಿದ ಹಾಡಿನ ರೂಪದ ಬಂಡಾಯದ ಧ್ವನಿ ನಿಧಾನವಾಗಿ ತೀವ್ರತೆ ಕಳೆದುಕೊಳ್ಳುತ್ತಿದೆ ನಿಜ. ಹಾಗೆಯೇ ಆಗಿನ ಶೋಷಣೆಯ ತೀವ್ರತೆಯೂ ದಿಕ್ಕು ಬದಲಿಸುತ್ತಿದೆ. ಅರಿವಿಗೇ ಬಾರದ ಪರೋಕ್ಷ ನಯವಂಚಕ ಕಾರ್ಪೊರೇಟ್ ಸಂಸ್ಕೃತಿ ಶೋಷಣೆಯ ಹೊಸ ರೂಪದಲ್ಲಿ ಆವರಿಸಿದೆ. ಜಮೀನ್ದಾರಿ ಪದ್ಧತಿ ಕೇವಲ ಮನುಷ್ಯರನ್ನು ಮಾತ್ರ ಶೋಷಿಸಿದರೆ ಈ ಕಾರ್ಪೊರೇಟ್ ಸಂಸ್ಕೃತಿ ಹೆಚ್ಚುವರಿಯಾಗಿ ನಮ್ಮ ಪರಿಸರ, ಮಾನವೀಯ ಮೌಲ್ಯಗಳು, ಸಾಂಸ್ಕೃತಿಕ ವಾತಾವರಣ, ಸ್ವತಂತ್ರ ಚಿಂತನೆಯನ್ನೇ ನಿಯಂತ್ರಿಸಿ ಅದನ್ನು ನಿಧಾನವಾಗಿ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದೆ. ಕೊಳ್ಳುಬಾಕ ಸಂಸ್ಕೃತಿ ಮತ್ತು ಉದ್ಯೋಗದ ನೆಪದಲ್ಲಿ ಅಭಿವೃದ್ಧಿಯ ಭ್ರಮೆ ಸೃಷ್ಟಿಸಿ ಮತ್ತೆ ಈ ಸಮಾಜವನ್ನು ಉಳ್ಳವರ ಪರವಾಗಿಸಿ ಇಲ್ಲದವರನ್ನು ಗುಲಾಮಿ ಸಂಸ್ಕೃತಿಗೆ ಒಗ್ಗಿಸುತ್ತಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಬಡವ ಶ್ರೀಮಂತರ ನಡುವಿನ ವ್ಯತ್ಯಾಸ ಹೆಚ್ಚಾಗುತ್ತಿದೆ….
ಇಂತಹ ಸಂದರ್ಭದಲ್ಲಿ ಗದ್ದರ್ ರೀತಿಯ ಧ್ವನಿ ಎಡ ಬಲಪಂಥಗಳನ್ನು ಮೀರಿ ಜೀವಪರವಾಗಿ ಹೊಮ್ಮಬೇಕಿದೆ. ಗದ್ದರ್ ಶ್ರೀಮಂತರ ವಿರುದ್ಧ ವ್ಯಕ್ತಪಡಿಸುತ್ತಿದ್ದ ಆಕ್ರೋಶಕ್ಕೆ ಪರ್ಯಾಯವಾಗಿ ಈಗ ಕಾರ್ಪೊರೇಟ್ ಸಂಸ್ಕೃತಿಯ ವಿರುದ್ಧ ಮತ್ತು ಮಾನವೀಯ ಮೌಲ್ಯಗಳ ಪರವಾಗಿ ಧ್ವನಿ ಮೊಳಗಿಸಬೇಕಿದೆ. ಇಲ್ಲದಿದ್ದರೆ ನಮ್ಮ ಮನಸ್ಥಿತಿಯೇ ಗುಲಾಮಿತನವಾಗಿ ಶಾಶ್ವತವಾಗಿ ನೆಲೆಗೊಳ್ಳುವ ಸಾಧ್ಯತೆ ಇದೆ….
ಮಾಧ್ಯಮಗಳು ಸಿನಿಮಾ ನಟರ, ರಾಜಕಾರಣಿಗಳ, ದುಷ್ಟ ಶಕ್ತಿಗಳ ವಿಷಯಗಳನ್ನೇ ಭ್ರಮಾತ್ಮಕ ಗೊಳಿಸಿ ಪ್ರಸಾರ ಮಾಡುತ್ತವೆ. ಸಮಗ್ರ ಚಿಂತನೆಯ ವಿಷಯಗಳನ್ನು ಮರೆಮಾಚಲಾಗುತ್ತದೆ. ಇತಿಹಾಸದ ಪ್ರಮುಖ ಘಟನೆಗಳನ್ನು ಮತ್ತು ವ್ಯಕ್ತಿಗಳನ್ನು ಇಂದಿನ ಪೀಳಿಗೆಗೆ ಸರಿಯಾಗಿ ಪರಿಚಯಿಸದೆ ಕೇವಲ ಈ ಕ್ಷಣದ ಬ್ರೇಕಿಂಗ್ ನ್ಯೂಸ್ ಗಳೇ ಇವರ ಆದ್ಯತೆ. ಸಂವೇದನಾ ಶೀಲತೆ ಇಲ್ಲದ ಸುದ್ದಿಗಳು ಮಾಧ್ಯಮಗಳ ನೈತಿಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ……
ಕಳೆದ ಕೆಲವು ದಿನಗಳ ಹಿಂದೆ ನಿಧನರಾದ ಗದ್ದರ್ ಬಗ್ಗೆ ಈಗಿನ ಯುವ ಪೀಳಿಗೆ ಕನಿಷ್ಠ ಕುತೂಹಲಕ್ಕಾಗಿಯಾದರು ತಿಳಿದುಕೊಳ್ಳಬೇಕಿದೆ. ಇತಿಹಾಸ ಅರಿಯದ ವರ್ತಮಾನ ನೀರಸ ಹಾಗೆಯೇ ಭವಿಷ್ಯ ಕತ್ತಲು. ಅನ್ಯಾಯದ ವಿರುದ್ಧದ ಧ್ವನಿಗೆ ಯಾವುದೇ ಸೈದ್ದಾಂತಿಕತೆಯ ಹಂಗು ಬೇಡ…..
ಖಂಡಿತ ಇಂದಿನ ಜನರ ಜೀವನಶೈಲಿ ಬದುಕನ್ನು ತೀವ್ರವಾಗಿ ಅನುಭವಿಸದೆ ಮೇಲ್ಮಟ್ಟದಲ್ಲಿ ಮಾತ್ರ ಜೀವಿಸುತ್ತಿದೆ. ಸ್ವಾತಂತ್ರ್ಯ ಕಾಲದ ತ್ಯಾಗ ಬಲಿದಾನಗಳ ಮಹತ್ವ ಅಥವಾ ನಂತರದ ಹೋರಾಟಗಳು ಅವರಿಗೆ ಅರ್ಥವಾಗುತ್ತಿಲ್ಲ. ಕೇವಲ ಹಣವೇ ಪ್ರಧಾನ ಗುರಿಯಾಗಿದೆ. ಇದು ಭವಿಷ್ಯದಲ್ಲಿ ಅತ್ಯಂತ ಅಪಾಯಕಾರಿ. ಆದ್ದರಿಂದ ನಾವುಗಳು ಆಗಾಗ ಇತಿಹಾಸವನ್ನು ಮೆಲುಕು ಹಾಕುತ್ತಿರೋಣ. ಅದರಿಂದ ಒಳ್ಳೆಯ ಭವಿಷ್ಯ ನಿರ್ಮಿಸಲು ಸಾಧ್ಯ.
ಗದ್ದರ್ ಸಾವಿನ ಸಂದರ್ಭದಲ್ಲಿ ಎದೆಯೊಳಗೆ ಬಂದೂಕಿನ ಗುಂಡಿನೊಂದಿಗೆ ಅನೇಕ ವರ್ಷ ಬದುಕಿದ ಅವರ ಹೋರಾಟದ ಕಿಚ್ಚನ್ನು ನೆನಪಿಸುತ್ತಾ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..