ಕೇಂದ್ರ ಸರ್ಕಾರವು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂಪಡೆದಿದೆ. ಚಳಿಗಾಲದ ಮೊದಲ ದಿನದ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ವಾಪಸ್ ವಿಧೇಯಕ-2021 ಮಂಡಿಸಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಚಳಿಗಾಲದ ಮೊದಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ನಾಯಕರು ಉಭಯ ಸದನಗಳಲ್ಲಿ ಗದ್ದಲ ಮಾಡಿದರು. ಆದರೆ ಗದ್ದಲದ ನಡುವೆಯೂ ಕೂಡ ಕೃಷಿ ಸಚಿವ ನರೇಂದ್ರ ತೋಮರ್ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದರು. ರಾಜ್ಯಸಭೆಯಲ್ಲಿ ಮಧ್ಯಾಹ್ನದ ವೇಳೆಗೆ ವಿಧೇಯಕ ಅಂಗೀಕಾರಕ್ಕೆ ಮುನ್ನ ಉಪಸಭಾಪತಿ ಹರಿವಂಶ್ ಅವರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2 ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಿದ್ದರು.
ಕೇಂದ್ರಸರ್ಕಾರ ಕೃಷಿ ಕಾಯ್ದೆ ಹಿಂಪಡೆಯುವ ವಿಧೇಯಕಕ್ಕೆ ಪ್ರತಿಪಕ್ಷಗಳು ಆಕ್ರೋಶಗೊಂಡು ಸದನದಲ್ಲಿ ಗದ್ದಲಕ್ಕೆ ಮುಂದಾಗಿದ್ದವು. ಹೀಗಾಗಿ ಅಧಿವೇಶನದ ಮೊದಲ ಎರಡು ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ.
“ಚರ್ಚೆಗೆ ಸರಕಾರ ಸಿದ್ಧ ಇದೆ. ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಆದರೆ ಸದಸ್ಯರು ಸಮಾಧಾನದಿಂದ ವರ್ತಿಸಬೇಕು. ಸದನದ ಘನತೆ ಬಲಿಕೊಟ್ಟು ಸಾಧಿಸುವುದಾದರೂ ಏನಿದೆ? ಸಭ್ಯತೆ ಮೀರುವುದು ಬೇಡ. ಸರ್ಕಾರಕ್ಕೆ ದೇಶದ ಅಭಿವೃದ್ಧಿಯೇ ಮುಖ್ಯ” ಎಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
“ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧೇಯಕವನ್ನು ಸಂಸತ್ತು ಅಂಗೀಕರಿಸಿಬಹುದು. ಆದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನು ಖಾತರಿ ಸೇರಿದಂತೆ ನಮ್ಮ ಉಳಿದ ಬೇಡಿಕೆಗಳ ಕುರಿತಾಗಿ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು. ಕೇಂದ್ರ ಮಾತುಕತೆಗೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ” ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಯನ್ನು ಅಧಿಕೃತವಾಗಿ ಹಿಂಪಡೆದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿದೆ. “ಇನ್ನಾದರೂ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಳ ಬಗ್ಗೆ ನಿರ್ಧಾರದ ವೇಳೆ ಮಾನವಹಕ್ಕುಗಳನ್ನು ಗೌರವಿಸಲಿದೆ ಮತ್ತು ಕೃಷಿಕರು, ಜನಸಮುದಾಯ, ಸಂಘಟನೆಗಳ ಜೊತೆ ಅರ್ಥಪೂರ್ಣ ಚರ್ಚೆ ಬಳಿಕ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂಬ ಭರವಸೆಯಿದೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಹಾಗೂ ಆಹಾರ ಹಕ್ಕು ತಜ್ಞ ಮೈಕೆಲ್ ಫಖ್ರಿ ತಿಳಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನ ಪ್ರತಿಪಕ್ಷಗಳ 12 ಸಂಸದರ ಅನುಚಿತ ವರ್ತನೆಯಿಂದ ಸಂಸತ್ ಕಲಾಪದ ಘನತೆಗೆ ಧಕ್ಕೆ ತಂದ ಆಪಾದನೆಯಡಿ 12 ಸಂಸದರನ್ನು ಈ ಅಧಿವೇಶನದ ಪೂರ್ಣ ಸದನಕ್ಕೆ ಅವರ ಪ್ರವೇಶ ನಿಷೇಧಿಸಲಾಗಿದೆ.
12 ಸಂಸದರ ಸಸ್ಪೆಂಡ್ ಶಿಕ್ಷೆ ಕುರಿತಂತೆ “ಮುಂಗಾರು ಅಧಿವೇಶನದ ಕೊನೆಯ ದಿನ ಅನುಚಿತ ವರ್ತನೆ ತೋರಿದ್ದರಿಂದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗಲೂ ತಮ್ಮ ವರ್ತನೆಗೆ ಕ್ಷಮೆ ಕೋರುವಂತೆ ಆ ಸದಸ್ಯರನ್ನು ಕೋರಲಾಯಿತು. ಅದಕ್ಕೆ ನಿರಾಕರಿಸಿದ್ದರಿಂದ ಅಮಾನತು ನಿರ್ಧಾರ ಅನಿವಾರ್ಯವಾಯಿತು. ತಪ್ಪು ತಿದ್ದಿಕೊಂಡು ತಮ್ಮ ವರ್ತನೆಗೆ ಸಭಾಪತಿಯವರ ಕ್ಷಮೆ ಕೋರಿದರೆ ಸರ್ಕಾರವೂ ಮುಕ್ತ ಮನಸ್ಸು ಹೊಂದಲಿದೆ” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.