Railway Facility ರೈಲ್ವೇ ಸೇವೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೀರೂರು-ಶಿವಮೊಗ್ಗ ನಡುವಿನ ಡಬ್ಲಿಂಗ್ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಶಿವಮೊಗ್ಗ-ಭುವನೇಶ್ವರ್ ರೈಲು ಸಂಚಾರಕ್ಕೆ ಅನುಮತಿ ಇದ್ದರೂ ಇನ್ನೂ ಕಾರ್ಯ ಆರಂಭ ಮಾಡಿಲ್ಲ. ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಅತಿ ಹೆಚ್ಚು ಬೇಡಿಕೆ ಇರುವ ಶಿವಮೊಗ್ಗ-ಕಾಚಿಗೊಡ ( ಚಿತ್ರದುರ್ಗದ ಮೂಲಕ ) ಸಂಚಾರ ಮಾರ್ಗ ಆರಂಭಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ರೈಲ್ವೇ ಮುಖ್ಯ ನಿಲ್ದಾಣದಲ್ಲಿ ಎಸ್ಕಲೇಟರ್, ಅಂಡರ್‌ಪಾಸ್ ವ್ಯವಸ್ಥೆ ಅವಶ್ಯಕತೆ ಇದೆ. ಸಮರ್ಪಕ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶೆಲ್ಟರ್ ಕಲ್ಪಿಸಬೇಕು. ಪ್ರೀಪೇಯ್ಡ್ ಆಟೋ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು. ಕೋಟೆಗಂಗೂರು ಕೋಚ್ ಸೆಂಟರ್ ಕೆಲಸವನ್ನು ವೇಗಗೊಳಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಶಿವಮೊಗ್ಗ ಚೆನ್ನೈ ರೈಲು ಸಂಚಾರವನ್ನು ಬೆಂಗಳೂರಿನ ಮೂಲಕ ತೆರಳುವಂತೆ ರೈಲಿನ ವ್ಯವಸ್ಥೆ ಕಲ್ಪಿಸಬೇಕು. ತಾಳಗುಪ್ಪ-ಹುಬ್ಬಳ್ಳಿ ರೈಲ್ವೇ ಮಾರ್ಗದ ಬಗ್ಗೆಯು ಸೂಕ್ತ ಕ್ರಮ ವಹಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಅಗತ್ಯವಿರುವ ರೈಲ್ವೇ ಸೇವೆ ಹಾಗೂ ಸೌಕರ್ಯಗಳನ್ನು ಶೀಘ್ರದಲ್ಲಿ ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
Railway Facility ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ರೈಲ್ವೆ ಸಮಿತಿ ಅಧ್ಯಕ್ಷ ಉದಯ್‌ಕುಮಾರ್, ಗಣೇಶ್ ಅಂಗಡಿ, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಚಂದ್ರಶೇಖರ್, ಜಯಶ್ರೀ ದತ್ತಾತ್ರಿ, ಶಶಿಧರ್ ಭೂಪಾಳಂ ಮತ್ತಿತರರು ಉಪಸ್ಥಿತರಿದ್ದರು.