ಪೌಷ್ಟಿಕಾಂಶಯುಕ್ತ ಹಾಗೂ ಹಸಿವು ಮುಕ್ತ ರಾಷ್ಟ್ರ ನಿರ್ಮಾಣ ಇಂದಿನ ತುರ್ತು ಅಗತ್ಯ ಎಂದು ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ.ಆರ್.ಸಿ. ಅಗರ್ವಾಲ್ ಅವರು ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ 6ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ ಲಭಿಸಬೇಕು. ದೇಶದಲ್ಲಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಬೇಕು. ಆ ಗ ಮೂಲಕ ಜಾಗತಿಕವಾಗಿ ದೇಶವನ್ನು ಗುರುತಿಸಿಕೊಳ್ಳುವ ಸ್ಥಾನಕ್ಕೆ ಕೊಂಡೊಯ್ಯುಬೇಕು. ಈ ಜವಾಬ್ದಾರಿ ಪ್ರತಿಯೊಬ್ಬರದ್ದು ಆಗಿದೆ ಎಂದರು.
ದೇಶದಲ್ಲಿ ಲಭಿಸುತ್ತಿರುವ ನೀರಿನಲ್ಲಿ ಶೇ.25ರಷ್ಟು ನೀರನ್ನು ಮಾತ್ರ ಬಳಸಲಾಗುತ್ತಿದೆ. ಶೇಕಡ 75ರಷ್ಟು ನೀರನ್ನು ವ್ಯರ್ಥವಾಗಿ ಸಮುದ್ರಗಳಿಗೆ ಹರಿಸಲಾಗುತ್ತಿದೆ. ಈ ನೀರನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಇಳುವರಿಯನ್ನು ಪಡೆದು, ಆಹಾರ ಉತ್ಪಾದನೆಯಲ್ಲಿ ಹಾಗೂ ಆಹಾರ ಸಂಸ್ಕರಣೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕೆಂದರು.
ಬಹು ಸಂಖ್ಯೆಯ ಜನರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿಮುಖರಾಗಿರುವ ಯುವಕರು ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ-ಸವಾಲುಗಳನ್ನು ಎದುರಿಸಿ, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಬೇಕು. ಅಲ್ಲದೆ ತಂತ್ರಜ್ಞಾನದ ಅಳವಡಿಕೆಯಿಲ್ಲದೇ ಕೃಷಿಯಲ್ಲಿ ನಿರೀಕ್ಷಿತ ಪ್ರಗತಿ ಕಷ್ಟಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆವಿಷ್ಕಾರಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುವಂತೆ ಸಲಹೆ ನೀಡಿದರು.

ಈ ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯದ ವತಿಯಿಂದ ಹೈದರಾಬಾದ್ ನ ಭಾರತ ಬಯೋಟಿಕ್ ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಎಲ್ಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿವಿಯ ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಹಾಗೂ ವಿವಿಧ ನಿಕಾಯಗಳ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು. ಈ ಶಿಕ್ಷಣ ನೀತಿಯನ್ನು ಬೈಬಲ್ ನಂತೆ ಜತನದಿಂದ ಕಾಪಾಡಿಕೊಳ್ಳುವ ಜೊತೆಗೆ ಅಧ್ಯಯನ ಮಾಡಬೇಕು. ಈ ನೀತಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದರಿಂದಾಗಿ ಯುವಸಮೂಹಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿದೆ ಎಂದು ಅಗರ್ವಾಲ್ ರವರು ತಿಳಿಸಿದರು.
ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವಿಲೆಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಘಟಿಕೋತ್ಸವ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ.ಎಂ.ಕೆ.ನಾಯ್ಕ್., ಕುಲಸಚಿವ ಡಾ. ಆರ್. ಲೋಕೇಶ್ ಸೇರಿದಂತೆ ವ್ಯವಸ್ಥಾಪನ ಮಂಡಳಿಯ ಸದಸ್ಯರು, ವಿಶ್ವವಿದ್ಯಾಲಯದ ಉಪನ್ಯಾಸಕರು, ಪದಕದ ದಾನಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.