Bapuji Institute of Hi-Tech Education ಜಾಗತೀಕರಣದ ನಂತರ ಸಾಮಾನ್ಯ ಮನುಷ್ಯನ ಅಭಿ ರುಚಿಯೂ ವಿಶ್ವಮಟ್ಟಕ್ಕೇರಿದ್ದು ದಶಕಗಳ ಹಿಂದೆ ಭೋಗ ವಸ್ತುಗಳು ಎನಿಸಿಕೊಂಡಿದ್ದವು ಈಗ ಅಗತ್ಯ ವಸ್ತುಗಳೆಂಬ ಸಾಲಿಗೆ ಬಂದಿವೆ, ಹಣವನ್ನು ನೀರಿನಂತೆ ಬಳಸಬೇಕೆಂಬುದೇ ಈಗಿನ ವಾಣಿಜ್ಯ ಕ್ಷೇತ್ರದ ಧೋರಣೆಯಾಗಿದೆ, ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಿದ್ದು ದೇಶಕ್ಕೆ ಮಾಸಿಕ 1 ಲಕ್ಷ 65,000 ಕೋಟಿ ರೂಪಾಯಿಯಷ್ಟು ಜಿಎಸ್‌ಟಿಯಿಂದಲೇ ಬರುತ್ತಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಸಂಶೋಧನಾ ವಿಭಾಗದ ಚೇರ್ಮನ್ ಡಾ. ಪಿ. ಪರಮಶಿವಯ್ಯ ಹೇಳಿದರು.
ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ವತಿಯಿಂದ ಏರ್ಪಾಡಾಗಿದ್ದ “ವಾಣಿಜ್ಯ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರ ದಲ್ಲಿ ಗೋಚರಿಸುತ್ತಿರುವ ಹೊಸ ಪ್ರವೃತ್ತಿಗಳು” ಎಂಬ ವಿಷಯವಾಗಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧ ಮಂಡನೆ ಹಾಗೂ ವಾದಾನುವಾದ ಕಾರ್ಯಕ್ರಮ ‘ಪ್ರಜ್ಞಾ-2’ರ ಉದ್ಘಾಟನೆ ನೆರವೇರಿಸಿ ಪ್ರಧಾನ ಭಾಷಣ ಮಾಡುತ್ತಾ ಪ್ರಸ್ತುತ ಡಿಜಿಟಲ್ ತಂತ್ರಜ್ಞಾನ ಕ್ರಾಂತಿ ಯುಗ ಆರಂಭವಾಗಿದ್ದು ಇದರಿಂದ ಭೌತಿಕ ಉದ್ಯೋಗಗಳು ನಶಿಸುತ್ತವೆ ಎಂಬ ಆತಂಕವಿದ್ದರೂ ಸೇವಾ ರಂಗದಲ್ಲಿ ಬೌದ್ಧಿಕ ಉದ್ಯೋಗಗಳು ಹೇರಳವಾಗಿ ಸೃಷ್ಟಿಯಾಗಲಿದ್ದು ಕೇವಲ ಪಾರ್ಟ್ ಟೈಮ್ ಉದ್ಯೋಗಿಗಳೇ ದೇಶಕ್ಕೆ ದೊಡ್ಡ ಮೊತ್ತದ ಸೇವಾ ತೆರಿಗೆ ಕೊಡುವಂತಾಗುವ ಸಂದರ್ಭ ದೂರವಿಲ್ಲ, ಇದನ್ನು ಬಳಸಿಕೊಳ್ಳುವ ಕೌಶಲ್ಯ ಯುವ ವಿದ್ಯಾರ್ಥಿ ಸಮೂಹಕ್ಕೆ ಬೇಕಿದೆ, ನೂತನ ಶಿಕ್ಷಣ ನೀತಿಯು ಇದಕ್ಕೆ ಪೂರಕವಾಗಿದೆ ಎಂದರು.
Bapuji Institute of Hi-Tech Education ಭವಿಷ್ಯದ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಮೂಲಕ ದಿನದ 24 ಗಂಟೆಯೂ ಚಟುವಟಿಕೆ ನಿರಂತರ ನಡೆಯುವಂತಾಗಲಿದ್ದು ವಿನೂತನತೆ ಇಲ್ಲವೇ ವಿನಾಶ ಎಂಬುದು ಘೋಷವಾಕ್ಯವಾಗಲಿದೆ, ಇಂತಹ ಸಂದಿಗ್ಧದಲ್ಲಿ ಭಾರತದ ಜನಸಂಖ್ಯೆಯ ಶೇಕಡಾ 61ಕ್ಕೂ ಹೆಚ್ಚಿರುವ ಯುವಶಕ್ತಿಯು ದಿನದ 24 ಗಂಟೆಯಲ್ಲಿ 11 ಗಂಟೆಗಳ ಕಾಲ ಬರಿ ಸೋಶಿಯಲ್ ಮೀಡಿಯಾ ವೀಕ್ಷಣೆಯಲ್ಲಿ ಕಳೆಯುತ್ತಿದ್ದರೆ ಹೇಗೆ ಎಂಬ ಆತಂಕ ವ್ಯಕ್ತಪಡಿಸಿದರಲ್ಲದೆ ‘6ಜಿ’ ಯಾವಾಗ ಬರುತ್ತದೆ ಎಂದು ಕಾಯುವುದಲ್ಲ, ಹೊಸ ಡಿಜಿಟಲ್ ಕ್ರಾಂತಿಯ ಸವಾಲೆದುರಿಸಿ ಸಫಲವಾಗುವುದರ ಬಗ್ಗೆ ಯೋಚಿಸಬೇಕು ಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಎಸ್ಎಚ್ ಅವರು ವಾಣಿಜ್ಯ, ತಂತ್ರಜ್ಞಾನ ಹಾಗೂ ಶಿಕ್ಷಣ ಮೂರೂ ವಿಭಾಗಗಳು ಕೂಡಿಸಾಗಬೇಕಾದ ಅನಿವಾರ್ಯತೆ ಇದೆ, ದಶಕದ ಹಿಂದೆ ಬ್ಯಾಂಕಿಂಗ್ ಬಗ್ಗೆ ಗೊತ್ತಿಲ್ಲದವರು ದೇಶದಲ್ಲಿದ್ದರು, ಈಗ ರಸ್ತೆ ಬದಿಯ ಸಾಮಾನ್ಯ ವ್ಯಾಪಾರ ಯೂ ಫೋನ್ ಪೇ ವಿಧಾನ ಬಳಸುವಂತಾಗಿದೆ, ವಿದೇಶದ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರುವಕಾಲ ದೂರವಿಲ್ಲ, ಜ್ಞಾನದ ನವೀಕರಣ ಹಾಗೂ ಕಾರ್ಯದಲ್ಲಿ ನೈಪುಣ್ಯತೆ ಅವಶ್ಯ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಪ್ರಾಂಶುಪಾಲ ಡಾ ನವೀನ್ ನಾಗರಾಜ್ ಮಾತನಾಡಿ ಅವಕಾಶಗಳ ಸದುಪಯೋಗದ ಮಹತ್ವ ಅರಿತಲ್ಲಿ ಮಾತ್ರ ಸಾಧನೆ ಸಾಧ್ಯ ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ರವರು ಈ ‘ಪ್ರಜ್ಞಾ’ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತದಿಂದ ಬಂದ ಸುಮಾರು 80 ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡನೆ ಮಾಡಲಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವ್ಯಕ್ತಿಗೆ ಇದು ಸಫಲ ವೇದಿಕೆಯಾಗಿದೆ ಎಂದರು.
ರೂಪಾ ಡಿ. ಮತ್ತು ಸಂಜನಾ ವಿ.ಎನ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಹರ್ಷಿತ ಕೋರಿದರೆ ವೈಷ್ಣವೀ, ಅಫ್ರೀನ್, ಮೆಹತಾಜ್ ಅತಿಥಿಗಳ ಪರಿಚಯ ಮಾಡಿದರು ಪವನ್ ವಂದನೆಗಳನ್ನು ಸಮರ್ಪಿಸಿದರು.
-ಚಿತ್ರ ಹಾಗೂ ವರದಿ: ಎಚ್.ಬಿ.ಮಂಜುನಾಥ-