Amul vs Nandini: ರಾಜ್ಯದಲ್ಲಿ ಅಮುಲ್ ಮತ್ತು ನಂದಿನಿ ಹಾಲಿನ ವಿವಾದದ ಬೆನ್ನಲ್ಲೇ, ಬೆಂಗಳೂರು ಹೊಟೇಲ್ ಅಸೋಸಿಯೇಷನ್, ನಂದಿನಿ ಹಾಲನ್ನು ಪ್ರೋತ್ಸಾಹಿಸಿ ಮತ್ತು ರಾಜ್ಯದ ಹೈನುಗಾರಿಕೆ ರೈತರಿಗೆ ಬೆಂಬಲಿಸುವುದಾಗಿ ಘೋಷಿಸಿದೆ.
ಗುಜರಾತಿನ ಅಮುಲ್ ರಾಜ್ಯ ಪ್ರವೇಶಿಸುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ನಡುವೆ ಪರಸ್ಪರ ರಾಜಕೀಯ ಕೆಸರೆರೆಚಾಟಗಳು ಉಂಟಾಗಿದೆ. ಇವುಗಳ ನಡುವೆ ಈ ಬಗ್ಗೆ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ತನ್ನ ಅಭಿಪ್ರಾಯವನ್ನು ಬಿಡುಗಡೆ ಮಾಡಿದೆ. ಅಮುಲ್ ಅನ್ನು ಹೆಸರಿಸದೆ ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಬೆಂಬಲಿಸಬೇಕೆಂದು ಕರೆ ನೀಡಿದೆ.
Amul vs Nandini: ರಾಜ್ಯದ ರೈತಾಪಿವರ್ಗ ಉತ್ಪಾದಿಸುವ ನಂದಿನಿ ಹಾಲಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ನಾವೆಲ್ಲರೂ ನಂದಿನಿ ಹಾಲನ್ನೇ ಪ್ರೋತ್ಸಾಹಿಸಬೇಕು. ನಗರ ಪ್ರದೇಶದಲ್ಲಿ ಶುದ್ಧ ಮತ್ತು ರುಚಿಕರವಾದ ಕಾಫಿ ತಿಂಡಿಗಳಿಗೆ ನಂದಿನಿ ಹಾಲೇ ಕಾರಣ. ನಾವು ಅದನ್ನು ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ. ಇತ್ತೀಚೆಗೆ ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಹಾಲು ರವಾನೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾವೆಲ್ಲರೂ ನಂದಿನಿಯನ್ನೇ ಉಪಯೋಗಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಸೋಸಿಯೇಷನ್‍ತಿಳಿಸಿದೆ.
