Saturday, May 16, 2026
Saturday, May 16, 2026

ವಾದಿರಾಜರ ತೀರ್ಥಪ್ರಬಂಧ ದ ವಿಶೇಷ ಮೌಲ್ಯಗಳು

Date:

ವಿವಿಧ ಮತ -ಧರ್ಮಗಳ ಜನರು ವಾಸಮಾಡುವ ಭಾರತದಂತಹ ದೇಶದಲ್ಲಿ ಏಕತೆಯನ್ನು ಸಾಧಿಸುವಲ್ಲಿ ಪ್ರವಾಸ ಕಥನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಶ್ರೇಷ್ಠ ಯತಿಗಳಾದ ಶ್ರಿವಾದಿರಾಜರು ಭಾರತೀಯ ಸಂಸ್ಕೃತ ವಾಗ್ಮಯದಲ್ಲಿಯೇ ಮೊಟ್ಟಮೋದಲನೆಯದಾದ ಪ್ರವಾಸ ಕಥನವನ್ನು ತಮ್ಮ ತೀರ್ಥಪ್ರಬಂಧದ ಮೂಲಕ ಜಗತ್ತಿಗೆ ನೀಡಿದ್ದಾರೆ. ಎಲ್ಲ ತೀರ್ಥಕ್ಷೇತ್ರಗಳು ಅವುಗಳ ಮಹತ್ವ, ದೇವತೆಗಳ ವಿಶೇಷತೆ ಮತ್ತು ಪುರಾಣ, ಧಾರ್ಮಿಕ ಮಹತ್ವವನ್ನು ನೀಡಿರುವ ಅತ್ಯುತ್ಕೃಷ್ಟ ಕೃತಿ ಇದಾಗಿದೆ. ಶ್ರೀವಾದಿರಾಜರು ದೇಶದ ಉದ್ದಗಲಕ್ಕೂ ತಮ್ಮ ಕಾಲ್ನಡಿಗೆಯಲ್ಲೇ ಸಂಚರಿಸಿ, ಎಲ್ಲ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ತಮ್ಮ ಗಾಢವಾದ, ಆಗಾಧವಾದ ಅನುಭವವನ್ನು ತೀರ್ಥಪ್ರಬಂಧದಲ್ಲಿ ನೀಡಿದ್ದಾರೆ.


ತೀರ್ಥಪ್ರಬಂಧವು ಕ್ರಮವಾಗಿ ಪಶ್ಚಿಮ, ಉತ್ತರ, ಪೂರ್ವ, ದಕ್ಷಿಣ ಎಂಬ ಹೆಸರನ್ನು ಹೊಂದಿದ ನಾಲ್ಕು ಭಾಗಗಳನ್ನು ಒಳಗೊಂಡಿರುವ ಒಂದು ಅಪೂರ್ವ ಕಾವ್ಯ. ಈ ಪುಟ್ಟ ಖಂಡ ಕಾವ್ಯದಲ್ಲಿ ಅನೇಕ ರಸಗಳು, ಭಾವಗಳು, ಅಲಂಕಾರಗಳು ತಾವಾಗಿಯೇ ಬಂದು ಸೇರಿಕೊಂಡಿವೆ. ಶಬ್ದಾಲಂಕಾರ, ಅರ್ಥಾಲಂಕಾರಗಳಿಂದ ಕೂಡಿರುವ ಈ ಕೃತಿ ವಾದಿರಾಜರ ವರ್ಣನಾ ವೈಖರಿಗೆ ಹಿಡಿದ ಕನ್ನಡಿ. ಅವರ ಜನ್ಮಭೂಮಿಯಾದ ತುಳುನಾಡಿನಿಂದ ಆರಂಭವಾಗುತ್ತದೆ.

ರಜತಪೀಠ ಪುರವೆಂಬ ಹೆಸರಿನ ಉಡುಪಿಯಿಂದ ಆರಂಭಿಸಿ ಪಶ್ಚಿಮದ ಪುಷ್ಕರದವರೆಗೆ, ಕೃಷ್ಣಾ ನದಿಯಿಂದ ಆರಂಭಿಸಿ ಉತ್ತರದ ತುದಿಯ ಬದರೀ ಕ್ಷೇತ್ರದವರೆಗೆ, ಪೂರ್ವದಲ್ಲಿ ಪುರಿ ಜಗನ್ನಾಥದಿಂದ ಆರಂಭಿಸಿ ಕುಂಭಕೋಣದವರೆಗೆ, ದಕ್ಷಿಣದಲ್ಲಿ ಶ್ರೀರಂಗ ಕ್ಷೇತ್ರದಿಂದ ಆರಂಭಿಸಿ ದಕ್ಷಿಣದ ಕೊನೆಯ ಅನಂತಶಯನದವರೆಗೆ ಹೀಗೆ ಪಶ್ಚಿಮ ಉತ್ತರ ಪೂರ್ವ ಹಾಗೂ ದಕ್ಷಿಣ ಪ್ರಬಂಧಗಳೆಂಬ 4 ವಿಭಾಗಗಳಿಂದ ಈ ತೀರ್ಥ ಪ್ರಬಂಧವನ್ನು ಶ್ರೀ ವಾದಿರಾಜರು ರಚಿಸಿದ್ದಾರೆ.


ಶ್ರೀ ವಾದಿರಾಜರ ಚರಿತ್ರೆಯನ್ನು ನಿರೂಪಿಸುವ ‘ವೃತ್ತರತ್ನ ಸಂಗ್ರಹ’ ಎಂಬ ಗ್ರಂಥದಲ್ಲಿ ಈ ತೀರ್ಥ ಪ್ರಬಂಧದ ಉಲ್ಲೇಖವನ್ನು – ಅಟನ್ ಸ್ವಯಂ ತೀರ್ಥ ಸಮೂಹ ಮುರವ್ಯಾಮ್ ತೀರ್ಥ ಪ್ರಬಂಧಂ ಕೃತವಾನ್ ದಯಾಲುಃl ಜನಾನ್ ತದಾವರ್ತನ ಶೀಲಿನಶ್ಚ ಚಕಾರ ತೀರ್ಥಾಟನ ಪುಣ್ಯಭಾಜಃ ll, ಸ್ವತಹ ವಾದಿರಾಜರೇ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಈ ಅತ್ಯುತ್ತಮವಾದ ಕೃತಿಯನ್ನು ರಚಿಸಿ ತೀರ್ಥಕ್ಷೇತ್ರಗಳನ್ನು ಸಂಚರಿಸುವ ಸಾಧಕ ಭಕ್ತ ವರ್ಗಕ್ಕೆ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಕೇವಲ ತೀರ್ಥಕ್ಷೇತ್ರಗಳಲ್ಲಿ ಸಂಚರಿಸಿ ಮುಂದೇಳುವುದಕ್ಕಿಂತ ಅಲ್ಲಿಯ ತೀರ್ಥ ಅಭಿಮಾನಿ ಹಾಗೂ ಕ್ಷೇತ್ರ ಅಭಿಮಾನಿ ದೇವತೆಗಳ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆಯನ್ನರಿತಾಗ ಅಧಿಕವಾದ ಪುಣ್ಯವನ್ನು ಸಂಪಾದಿಸಬಹುದಾಗಿದೆ.

ಕೇವಲ ಇಷ್ಟಕ್ಕೆ ಸೀಮಿತವಾಗದೆ ಯಾರು ಅಶಕ್ತರು ಅಂಥವರು ಈ ಕೃತಿಯ ಪಠಣ ಮಾತ್ರದಿಂದ ತೀರ್ಥಕ್ಷೇತ್ರಗಳ ಸಂಚಾರದ ಪುಣ್ಯವನ್ನು ಸಂಪಾದಿಸಬಹುದೆಂದು ಸಜ್ಜನ ಸಮೂಹದ ಮೇಲೆ ಅಪಾರವಾದ ಕರುಣೆಯನ್ನು ತೋರಿದವರು ಭಾವಿಸಮೀರ ವಾದಿರಾಜ ಗುರು ಸಾರ್ವಭೌಮರು.
ಒಬ್ಬ ಮನುಷ್ಯ ಭೌತಿಕವಾಗಿ ಒಮ್ಮೆಯಾತ್ರೆ ಹೋದರೆ ಮುಂದೆ ದಿನ ನಿತ್ಯವೂ ಮಾನಸಿಕವಾಗಿ ಕ್ಷಣಮಾತ್ರದಲ್ಲಿ ಯಾತ್ರೆ ಹೋಗಲು ಸಾಧ್ಯ. ಹಾಗಾಗಿ ಪ್ರತಿನಿತ್ಯವೂ ಈ ಮಾನಸ ಯಾತ್ರೆಯನ್ನು ಮಾಡಲು ಈ ಗ್ರಂಥ ಪೂರಕವಾಗಿದೆ. ಗುರುಗಳು ಇದನ್ನು ಕೇವಲ ಮನೋರಂಜನೆಗಾಗಿರದೆ ಆಧ್ಯಾತ್ಮಿಕವಾದ ಮಹತ್ವವನ್ನು ಹೇಳುವುದರ ಮೂಲಕ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮನುಷ್ಯ ತನ್ನ ಜೀವನದಲ್ಲಿ ಯಾತ್ರೆಯನ್ನು ಹೇಗೆ ಸಫಲಗೊಳಿಸುವುದು ಎಂದು ತಿಳಿಸಲು ಉದಾಹರಣೆಯಾಗಿ ಇರುವಂತದ್ದು ಈ ತೀರ್ಥಪ್ರಬಂಧ. ‘ ಭರತವರ್ಷದ’ ನಿಜವಾದ ಪರಿಕಲ್ಪನೆಯನ್ನು ನೀಡುವಲ್ಲಿ ಅತಿ ಸಮಗ್ರವಾದ ಗ್ರಂಥ ಇದು ಎನ್ನಬಹುದು.


ತೀರ್ಥ ಪ್ರಬಂಧದಲ್ಲಿ ಪುರಾಣ ಪ್ರಸಿದ್ಧವಾದ ಗಂಗೆಯೇ ಮೊದಲಾದ ನದಿಗಳು ಹಾಗೂ ಶ್ರೀಮನ್ನಾರಾಯಣನ ಕೀರ್ತಿಯ ವರ್ಣನೆಯಿಂದ ಕೂಡಿದ ಮನೋಹರವಾದ ಪದ್ಯಗಳು ಇದರಲ್ಲಿ ಇವೆ. ಇವುಗಳು ಅಶ್ವಮೇಧಾದಿ ಯಜ್ಞಗಳಿಂದ ಲಭಿಸುವ ಪುಣ್ಯಕ್ಕಿಂತಲೂ ಮಿಗಿಲಾದ ಪುಣ್ಯವನ್ನು ತಂದುಕೊಡುತ್ತವೆ. ಆದ್ದರಿಂದ ಇದನ್ನು ಭಕ್ತಿಪೂರಕವಾಗಿ ಪಟಿಸುವ ಮತ್ತು ಆಲಿಸುವ ಪುರುಷನು ಸಕಾಲ ಐಹಿಕ ಮತ್ತು ಪಾರಲೌಕಿಕ ಸಂಪತ್ತುಗಳಿಗೆ ನೆಲೆಯೇ ಆಗಿಬಿಡುತ್ತಾನೆ. ಇಂತಹ ತೀರ್ಥಕ್ಷೇತ್ರಗಳಿಂದ ಮನಸ್ಸು ನಿರ್ಮಲವಾಗಿ ಇದರ ಪಠಣೆಯಿಂದ ಸಕಲ ಸಂಪತ್ತುಗಳು ಸಹ ಲಭಿಸುವುದೆಂಬ ಫಲಶ್ರುತಿಯೇ ಅದರ ಮಹತ್ವ ತಿಳಿಸುತ್ತದೆ.


ಇದರಲ್ಲಿ ಮುಖ್ಯವಾಗಿ ದೇವತೆಗಳನ್ನು ಯಾವ ಬೇದವು ಇಲ್ಲದಂತೆ ಎಲ್ಲರನ್ನೂ ಎಲ್ಲ ಕ್ಷೇತ್ರಗಳನ್ನು ಮತ್ತು ಅವುಗಳ ಕ್ಷೇತ್ರ ದೇವತೆಗಳನ್ನು ಸಹ ವರ್ಣಿಸುತ್ತಾ ಬಂದಿದ್ದಾರೆ ಶ್ರೀ ವಾದಿರಾಜರು. ಹಾಗಾಗಿ ಅವರು ಶ್ರೇಷ್ಠ ಯತಿ ಎನಿಸಿಕೊಂಡಿದ್ದಾರೆ. ಏಕೆಂದರೆ, ಇದರ ಅಧ್ಯಯನ, ಪಠಣ, ಶ್ರವಣ ಕೇವಲ ಮಾಧ್ವರಿಗೇ ಅಲ್ಲದೆ ಸಕಲರಿಗೂ ಪುಣ್ಯದ ಫಲ ನೀಡುತ್ತದೆ ಎಂಬ ಅಂಶವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.


ಸಮಾಜದ ಸುಶಿಕ್ಷಿತ ವರ್ಗದಲ್ಲಿ ಹಾಗೂ ಅಧ್ಯಾತ್ಮ ಕ್ಷೇತ್ರದಲ್ಲಿರುವ ಓರೆ ಕೋರೆಗಳನ್ನು ತಿದ್ದಿ ಪರಿಶುದ್ಧವಾದ ವ್ಯಕ್ತಿತ್ವ ವಿಕಸನಕ್ಕೆ ವಾದಿರಾಜರು ನೀಡುವ ಮಾರ್ಗದರ್ಶನ ಬೋಧ ಪ್ರದವಾದು. ಶ್ಲೋಕ ಪಠಣೆಯಿಂದಲೇ ಮನಸ್ಸು ಪ್ರಫುಲ್ಲಗೊಂಡು ಇಷ್ಟಾರ್ಥಗಳು ಸಿಗುತ್ತವೆ ಎಂಬ ರಮಣೀಯ ಅರ್ಥವಂತಿಕೆಯ ಕಾವ್ಯವೇ ಈ ತೀರ್ಥ ಪ್ರಬಂಧ. ಇದು ಪಾಪಗಳಿಂದ ಮುಕ್ತಿ ದೊರಕಿಸಿ ಸಮನ್ವಯ ಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಎಲ್ಲರನ್ನೂ ಪ್ರೇರೇಪಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.


ಪ್ರಸ್ತುತ ಭಾರತೀಯ ಪರಿಸ್ಥಿತಿಯಲ್ಲಿ ತೀರ್ಥ ಪ್ರಬಂಧವು ಶೈವ, ವೈಷ್ಣವ,ಶಾಕ್ತ, ಗಾಣಪತ್ಯವೇ ಮೊದಲಾದ ಭೇದಗಳಿಲ್ಲದೆ ಸಮನ್ವಯವನ್ನು ಸಾರುತ್ತದೆ. ಇದನ್ನು ಅರ್ಥೈಸಿಕೊಂಡು ಸಾಮರಸ್ಯ ಸಮನ್ವಯತೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಸಾಮಾಜಿಕ ಅವಶ್ಯಕತೆ ಎನ್ನುವುದನ್ನು ಪರೋಕ್ಷವಾಗಿ ತೀರ್ಥ ಪ್ರಬಂಧವು ನೀಡುತ್ತದೆ.

-ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಪೇಸ್ ಪಿ. ಯು. ಕಾಲೇಜ್ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga Postal Department ಅಂಚೆ ಇಲಾಖೆ ಜೀವವಿಮಾ ಏಜೆಂಟ್ ಆಗ ಬಯಸುವಿರ? ಈ ಮಾಹಿತಿ ನಿಮಗಾಗಿ

Shimoga Postal Department ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ...

Karnataka Forest Department ವಾಹನ ಸಂಚಾರದ ಹೆಚ್ಚಳ: ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಯಾಗಿ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ- ಕುಮಾರ್ ಪುಷ್ಕರ್

Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ...