ಶಿವಮೊಗ್ಗ : ನಗರದ ಹೊರ ವಲಯದ ತ್ಯಾವರೆ ಚಟ್ನಹಳ್ಳಿಯ ಪೇಸ್ ಕಾಲೇಜಿನ ಜಯ ಲಕ್ಷ್ಮಮ್ಮ ಈಶ್ವರಪ್ಪ ಸಭಾಭವನದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರ ನೇತೃತ್ವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಸೇರಿದಂತೆ ಪೇಸ್ ಕಾಲೇಜಿನ ಆಡಳಿತ ಮಂಡಳಿ ಪ್ರಮುಖರು ಹಾಜರಿದ್ದರು.
ಕಿಟ್ ವಿತರಣಾ ಸಮಾರಂಭದ ಬಳಿಕ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ನವಜಾತ ಶಿಶುಗಳ ಹಾಗೂ ಅಪೌಷ್ಟಿಕ ಮಕ್ಕಳ ಆರೈಕೆ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, 5 ವರ್ಷದೊಳಗಿನ ಮಕ್ಕಳಿಗೆ ಕಬ್ಬಿಣಾಂಶ ಕಡಿಮೆ ಆಗದಂತೆ ನೋಡಿಕೊಂಡರೆ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಪೋಷಕರು ವೈದ್ಯರ ಸಲಹೆ ಸೂಚನೆಯಂತೆ ಅಗತ್ಯವಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ದೇಶದ 100 ಮಕ್ಕಳನ್ನು ಪರೀಕ್ಷೆಗೊಳಪಡಿಸಿದರೆ ಆ ಪೈಕಿ 60 ರಿಂದ 70 ರಷ್ಟು ಮಕ್ಕಳಲ್ಲಿ ಐರನ್ ಅಂಶ ಕಡಿಮೆ ಇರುತ್ತದೆ. ಐರನ್ ಅಂಶವನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ, ಚೆನ್ನಾಗಿ ಊಟ ಮಾಡುತ್ತಾರೆ. ಜೀರ್ಣಶಕ್ತಿಯೂ ಹೆಚ್ಚುತ್ತದೆ. ಸದೃಢವಾಗಿ ಬೆಳೆಯುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರುತ್ತಾರೆ ಎಂದರು.
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರಕಾರದ ವಿವಿಧ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಹುತೇಕ ಎಲ್ಲ ಶಿಶುಗಳಿಗೂ ಜಾಂಡೀಸ್ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪೋಷಕರು ಯಾವುದೇ ರೀತಿಯ ಭಯಪಡಬೇಕಿಲ್ಲ. ಅಲ್ಲದೇ ಶೀತ, ಕೆಮ್ಮು, ಜ್ವರ ಕೂಡ ಸಾಮಾನ್ಯ ಕಾಯಿಲೆ. ಈ ವಿಷಯದಲ್ಲೂ ಆತಂಕಪಡುವುದು ಬೇಡ. ಹಾಗಂತ ನಿರ್ಲಕ್ಷ್ಯ ಮಾಡುವುದೂ ಬೇಡ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆಗಳಿಗೆ ಡಾ.ಧನಂಜಯ ಸರ್ಜಿ ಅವರು ಉತ್ತರಿಸಿ, ಸಲಹೆ ಸೂಚನೆ ನೀಡಿದರು.