ಅಂತರಂಗದ ಅಭಿಷೇಕ……..
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ…..
ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ…….
ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ……
ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.
ಆಸ್ಪತ್ರೆ ಪೋಲೀಸ್ ನ್ಯಾಯಾಲಯ ದೇವರು ಧರ್ಮ ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.
ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.
ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.
ಇದು ಹೇಳುವಷ್ಟು ಸುಲಭವಲ್ಲ. ಆದರೆ ನಮ್ಮ ಒಟ್ಟು ವ್ಯಕ್ತಿತ್ವ ಮತ್ತು ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸಾವು ಸೋಲು ಮತ್ತು ವಿಫಲತೆಯ ಭಯವನ್ನು ಮೀರಲೇ ಬೇಕಿದೆ.
ಯಾರೋ ಕೆಲವು ವ್ಯಾವಹಾರಿಕ ವ್ಯಕ್ತಿಗಳ ಯಶಸ್ಸುಗಳನ್ನು ಮಾಧ್ಯಮಗಳಲ್ಲಿ ನೋಡಿ ಅಥವಾ ನಮ್ಮ ಸುತ್ತಮುತ್ತಲಿನ ಅಥವಾ ಪರಿಚಿತರ ಒಂದಷ್ಟು ಆರ್ಥಿಕ ಲಾಭಗಳನ್ನು ನೋಡಿ ನಮ್ಮಲ್ಲಿ ಬೆಳೆಯುವ ಕೀಳರಿಮೆ, ಆಸೆಯಿಂದ ಶ್ರಮದಿಂದ ಮಾಡಿದ ಕೆಲಸದ ಸೋಲು, ಬದುಕಿನ ಒಟ್ಟು ವಿಫಲತೆ ಜೊತೆಗೆ ಸಾವಿನ ಭಯ ನಮ್ಮನ್ನು ಅತ್ಯಂತ ಕೆಳಮಟ್ಟದ ಶರಣಾಗತಿಗೆ ಅಥವಾ ಮನಸ್ಸು ಒಪ್ಪದ ಅಸಹ್ಯ ಹೊಂದಾಣಿಕೆಗೆ ದೂಡುತ್ತದೆ. ವಿಧಿ ಇಲ್ಲ ಅಥವಾ ವಿಧಿಯ ಆಟ ಎಂದು ಸಮಾಧಾನ ಮಾಡಿಕೊಳ್ಳಬಹುದು.
ಜೊತೆಗೆ ನಾವು ಸತ್ತ ನಂತರದ ನಮ್ಮ ಅವಲಂಬಿತರು, ಪ್ರೀತಿ ಪಾತ್ರರು, ವಿರೋಧಿಗಳು ಹೇಗೆ ಬದುಕಬಹುದು ಮತ್ತು ಪ್ರತಿಕ್ರಿಯಿಸಬಹುದು, ನಮ್ಮ ಸೋಲು ಹೇಗೆ ಹೊರಗಿನವರಿಂದ ಕುಹುಕಕ್ಕೆ ಗುರಿಯಾಗಬಹುದು, ನಮ್ಮ ವಿಫಲತೆ ಹೇಗೆ ನಮ್ಮ ಇಡೀ ಬದುಕನ್ನು ಪ್ರಪಾತಕ್ಜೆ ದೂಡಬಹುದು ಎಂಬ ಭಾವನೆಯೇ ನಮ್ಮನ್ನು ಯಶಸ್ಸಿಗಾಗಿ ಹಪಹಪಿಸುವಂತೆ ಮಾಡುತ್ತದೆ. ಈ ಭಯದ ಭಾವನೆಯೇ ನಮ್ಮನ್ನು ಅನೇಕ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ಏನಾದರೂ ಆಗಲಿ ಸಾಯಬಾರದು, ಸೋಲಬಾರದು ಯಶಸ್ಸು ಆಗಲೇ ಬೇಕು ಎಂದು ನಾವೆಂದೂ ಊಹಿಸದ ಹೀನಾಯ ಕೆಲಸಗಳಿಗೂ ಸಿದ್ದರಾಗುತ್ತೇವೆ. ಇದರಿಂದಾಗಿ ಕೆಲವರು ದುಶ್ಚಟಗಳಿಗೂ ದಾಸರಾಗುತ್ತಾರೆ ಹಾಗೆಯೇ
ತಲೆ ಒಡೆಯಲು ತಲೆ ಹಿಡಿಯಲು ಹೇಸುವುದಿಲ್ಲ. ಭ್ರಷ್ಟಾಚಾರ ನಮಗೆ ಏನೂ ಅನಿಸುವುದಿಲ್ಲ.
ಆದರೆ ಧೈರ್ಯದಿಂದ ಸತ್ತರೆ ಸಾಯಲಿ ಸತ್ತ ನಂತರ ಹೇಗೂ ನನಗೆ ಅರಿವಿರುವುದಿಲ್ಲ ಅಥವಾ ಸೋಲಾಗಲಿ ಅಥವಾ ವಿಫಲವಾಗಲಿ ನನ್ನ ಬದುಕು ನನ್ನ ಆಯ್ಕೆ ಎಂಬ ದೃಢ ನಿರ್ಧಾರಕ್ಕೆ ಬಂದರೆ ಮನಸ್ಸಿನಲ್ಲಿ ಸ್ವಲ್ಪ ಶಾಂತಿ ನೆಮ್ಮದಿ ನೆಲೆಸುತ್ತದೆ.
ಸೂಕ್ಷ್ಮ ಮನಸ್ಸಿನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದು. ಸತ್ತರೆ ಏನಂತೆ ಸೋತರೆ ಏನಂತೆ ಇರುವುದು ಒಂದೇ ಜೀವನ. ಹೆದರುವುದೇಕೆ ಎಂದು ತಮ್ಮಲ್ಲಿರುವ ಸ್ವಲ್ಪ ಭಯದ ಭಾವನೆಯನ್ನು ಕೊಂದುಕೊಳ್ಳಬೇಕು. ಜೊತೆಗೆ ಮಾನ ಮರ್ಯಾದೆ ಎಂಬುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸುಖಕ್ಕಾಗಿ ಹುಟ್ಡುಹಾಕಿರುವ ಭ್ರಮೆಗಳು ಎಂದು ಪರಿಗಣಿಸಬೇಕು. ಆಗ ನಿಮ್ಮಲ್ಲಿ ಹೊಸ ವಿನೂತನ ಚೈತನ್ಯ ಮೂಡುತ್ತದೆ. ಹೊಸ ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಬಹುದು.
ಈ ರೀತಿಯ ಧೈರ್ಯ ನಿಮ್ಮಲ್ಲಿ ಉಂಟಾದರೆ ಆಗ ನೀವು ಮೌಡ್ಯಗಳಿಗೆ ದಾಸರಾಗುವುದಿಲ್ಲ, ಲಂಚ ಪಡೆಯುವುದಿಲ್ಲ, ವರದಕ್ಷಿಣೆ ಕೇಳುವುದಿಲ್ಲ, ಇನ್ನೊಬ್ಬರ ಆಸ್ತಿಗೆ ಆಸೆ ಪಡುವುದಿಲ್ಲ. ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ.
ಸ್ವಾಭಿಮಾನದಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು.
ನೆನಪಿರಲಿ, ಇದೆಲ್ಲವೂ ಒಳ್ಳೆಯ ರೀತಿಯಲ್ಲಿ ನೆಮ್ಮದಿಯ ಬದುಕನ್ನು ಅಪೇಕ್ಷಿಸುವವರಿಗೆ ಮಾತ್ರ.
ದುಷ್ಟತನದ ಕ್ರಿಮಿನಲ್ ಗಳಿಗೆ ಇದು ಯಾವುದೇ ರೀತಿಯಲ್ಲಿಯೂ ಅನ್ವಯಿಸುವುದಿಲ್ಲ.
ಆದ್ದರಿಂದ ಇನ್ನು ಮುಂದೆ ಸಾವು ಸೋಲು ಅಪಯಶಸ್ಸಿನ ಭಯದಿಂದ ತಪ್ಪುಗಳನ್ನು ಮಾಡುವುದು ಬಿಡೋಣ. ಧೈರ್ಯವಾಗಿ ಸ್ವಾಭಿಮಾನದಿಂದ ಸ್ವತಂತ್ರವಾಗಿ ಬದುಕಲು ಪ್ರಯತ್ನಿಸೋಣ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.