ಕಣಿವೆ ರಾಜ್ಯ ಕಾಶ್ಮೀರದಲ್ಲಿ 220 ಉಗ್ರರು ಸಕ್ರಿಯರಾಗಿದ್ದಾರೆ. ಈ ಆತಂಕಕಾರಿ ಬೆಳವಣಿಗೆ ಬಗ್ಗೆ ವರದಿಯಾಗಿದೆ. ಈ ವರ್ಷ ಭದ್ರತಾ ಪಡೆಗಳಿಗೆ ಕಾರ್ಯಾಚರಣೆಯಲ್ಲಿ 133 ಉಗ್ರರು ಬಲಿಯಾಗಿದ್ದು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಸಂಖ್ಯೆ ಹೆಚ್ಚಾಗಿದೆ.
ಕಾಶ್ಮೀರ ಗಡಿಭಾಗದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಸ್ಥಳೀಯವಾಗಿ ಆಗಿಂದಾಗ್ಗೆ ಉಗ್ರ ಸಂಘಟನೆಗಳು ನೇಮಕಾತಿ ಪ್ರಕ್ರಿಯೆ ನಡೆಸಿ ಉಗ್ರರ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ.
ಈ ವರ್ಷ 100 ಸ್ಥಳೀಯ ಯುವಕರು ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದಾರೆ. ಹದಿನೈದು-ಇಪ್ಪತ್ತು ಉಗ್ರರು ಪಾಕಿಸ್ತಾನದಿಂದ ಕಾಶ್ಮೀರ ಕಣಿವೆಗೆ ನುಸುಳಿ ಬಂದಿದ್ದಾರೆ. ಕಳೆದ ವರ್ಷ ಭಾರತೀಯ ಭದ್ರತಾಪಡೆ 207 ಮಂದಿ ಉಗ್ರರನ್ನು ಹತ್ಯೆ ಮಾಡಿತ್ತು. 174 ಮಂದಿ ಉಗ್ರ ಸಂಘಟನೆಗಳನ್ನು ಸೇರಿದ್ದರು.
ಸುಮಾರು 35ರಿಂದ 40 ಪಾಕಿಸ್ತಾನಿ ಉಗ್ರರು ಸದ್ಯ ಕಾರ್ಯ ಪ್ರವೃತ್ತರಾಗಿದ್ದಾರೆ. ಇವರಲ್ಲಿ 12 ಜನ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದರೆ, ಉಳಿದವರು ಲಷ್ಕರ್-ಎ-ತೈಯಬಾ ಸಂಘಟನೆಗೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.