Friday, March 20, 2026
Friday, March 20, 2026

ಮನಸ್ಸಿನಿಂದ ಮನಸ್ಸಿಗೆ – 03

Date:

ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ ಹತ್ತು ವರ್ಷಗಳು ಉರುಳಿದವು…………

ಇಡೀ ದೇಶದ ಗಮನ ಸೆಳೆದ – ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ಹೊಸ ಕಠಿಣ ಕಾನೂನು ಸಹ ಜಾರಿ ಮಾಡಲಾಯಿತು………

ಆದರೂ ಇಡೀ ದೇಶದಲ್ಲಿ ಅತ್ಯಾಚಾರಗಳ ಸರಣಿ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ…….

ನಿರ್ಭಯಳೆಂಬ ನತದೃಷ್ಟ ಹೆಣ್ಣಿನ ಮೇಲಾದ ಬರ್ಬರ ಅತ್ಯಾಚಾರವನ್ನು ನೆನೆದು ಸಂಕಟಪಡುವುದೋ ?

ಅದಕ್ಕೆ ಕಾರಣರಾದ ಆ ಕಿರಾತಕರಿಗೆ ಗಲ್ಲು ಆದುದಕ್ಕೆ ಸಂಭ್ರಮಪಡುವುದೋ ?

ಆಕೆ ಭಾರತದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಮರುಕಪಡುವುದೋ ?
ಅರ್ಥವಾಗುತ್ತಿಲ್ಲ…….

ಈ ಘಟನೆಯನ್ನು ಕೇವಲ ಒಂದು ಅಪರಾಧವಾಗಿ ನೋಡಿದರೆ ಸಮಸ್ಯೆ ತಿಳಿಯುವುದಿಲ್ಲ. ನಮ್ಮ ಭಾರತೀಯ ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಇದನ್ನು ಅರ್ಥಮಾಡಿಕೊಂಡರೆ ನಾವೂ ಕೂಡ ನಿರ್ಭಯಳ ಮತ್ತು ಆ ಯುವಕರ ಸಾವಿಗೆ ಪರೋಕ್ಷ ಕಾರಣರು ಎಂದು ಅನಿಸುತ್ತದೆ…….

ಸೃಷ್ಟಿಯ ಸಹಜ ಜೀವಿ ಹೆಣ್ಣನ್ನು ನಮ್ಮ ಅನುಕೂಲಕ್ಕಾಗಿ ಪೂಜನೀಯಗೊಳಿಸಿದ ದಿನದಿಂದಲೇ ಆಕೆಯ ಮೇಲೆ ನಿಯಂತ್ರಣ ಸಾಧಿಸಿ ಆಕೆಯನ್ನು ಭೋಗದ ವಸ್ತುವೆಂದು ತೀರ್ಮಾನಿಸಲಾಯಿತು. ಅಲ್ಲಿಂದ ಶುರುವಾದ ಹೆಣ್ಣಿನ ಶೋಷಣೆ ಈ ಕ್ಷಣದವರೆಗೂ ನಿರಂತರವಾಗಿ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ……..

ತನ್ನ ತಾಯಿ ತಂಗಿ ಅಕ್ಕ ಎಂಬ ಕೆಲವು ರಕ್ತ ಸಂಬಂಧದ ಹೆಣ್ಣುಗಳನ್ನು ಹೊರತುಪಡಿಸಿ ಪ್ರತಿ ಹೆಣ್ಣನ್ನು ನೋಡುವ ಮಾನಸಿಕ ಸ್ಥಿತಿ ಆಕೆಯ ಲಿಂಗಾಧಾರಿತವಾಗಿರುತ್ತದೆಯೇ ಹೊರತು ಅವರೂ ಸೃಷ್ಟಿಯ ಸ್ವತಂತ್ರ ಜೀವಿ ಎಂಬ ಮನೋಭಾವ ಮೂಡುವ ವ್ಯವಸ್ಥೆ ಇಲ್ಲ. ಕಾನೂನಿನ ಭಯದಿಂದ ಮಾತ್ರ ಒಂದಷ್ಟು ನಾಗರಿಕ ವರ್ತನೆ ಇದೆಯೇ ಹೊರತು ಆಂತರ್ಯದಲ್ಲಿ ಅದು ಇರುವುದು ಅತ್ಯಂತ ಕಡಿಮೆ…….

ಈ ಕ್ಷಣದಲ್ಲೂ ಪ್ರತಿನಿತ್ಯ ನಮ್ಮ ದೇಶದಲ್ಲಿ ಅತ್ಯಾಚಾರಗಳು ನಡೆಯುತ್ತಲೇ ಇದೆ. ಇದನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು…..

ಮೊದಲನೇ ವರ್ಗದಲ್ಲಿ ಶ್ರೀಮಂತ ರಾಜಕಾರಣಿಗಳು, ದೊಡ್ಡ ದೊಡ್ಡ ದಲ್ಲಾಳಿಗಳು, ಶಕ್ತಿವಂತ ಅಧಿಕಾರಿಗಳು, ಡೋಂಗಿ ಧಾರ್ಮಿಕ ಮುಖಂಡರುಗಳು, ದೊಡ್ಡ ಉದ್ಯಮಿಗಳು, ರೌಡಿಗಳು, ಮಾಫಿಯಾದವರು, ಸಿನಿಮಾ ನಟರು ( ಎಲ್ಲರೂ ಅಲ್ಲ ಕೆಲವರು ಮಾತ್ರ ) ಮುಂತಾದವರು ಅವರಿಗಿರುವ ಚಟಕ್ಕೆ ಅನುಸಾರವಾಗಿ ಹಣದಿಂದಲೋ, ಬಲದಿಂದಲೋ, ಬೆದರಿಕೆಯಿಂದಲೋ, ಆಮಿಷದಿಂದಲೋ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಇರುತ್ತಾರೆ. ಆದರೆ ಇದು ಬಲವಂತದ ಒಪ್ಪಿತ ಅತ್ಯಾಚಾರವಾಗುವುದರಿಂದ ಅದಕ್ಕೆ ಒಳಗಾದ ಹೆಣ್ಣಿನ ಪ್ರತ್ಯಕ್ಷ ಅಥವಾ ಪರೋಕ್ಷ ಒಪ್ಪಿಗೆ ಇರುವುದರಿಂದ ಕಾನೂನಿನ ರೀತಿ ಅತ್ಯಾಚಾರವಾಗುವುದಿಲ್ಲ. ಆಕೆ ಏನಾದರೂ ದೂರು ಕೊಟ್ಟರೆ ಮಾತ್ರ ಅದು ದಾಖಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಆ ಸಾಧ್ಯತೆ ಕಡಿಮೆ ಮತ್ತು ಆಕೆಗೆ ಯಾವ ಸುರಕ್ಷತೆಯೂ ಇರುವುದಿಲ್ಲ.ಇದೊಂದು ಬಲಾಢ್ಯರ ಕೂಟ……

ಎರಡನೆಯದಾಗಿ ಮಧ್ಯಮವರ್ಗದ ಕೆಲವು ಜನರು ಬದುಕಿನ ಸುಖಲೋಲುಪತೆಯ ಅಂಗವಾಗಿ ಬೆಲೆವೆಣ್ಣಿನ ರೂಪದ ಮಾರುಕಟ್ಟೆಯಲ್ಲಿ – ಹೌದು ಮಾರುಕಟ್ಟೆಯಲ್ಲಿಯೇ ದೊರೆಯುವ ಹೆಣ್ಣುಗಳನ್ನು ಅತ್ಯಾಚಾರ ಮಾಡುತ್ತಾರೆ. Again ಇದೂ ಕೂಡ ಒಪ್ಪಿತ ಕ್ರಿಯೆಯಾಗುವುದರಿಂದ ಕಾನೂನಿನ ವ್ಯಾಪ್ತಿಯಲ್ಲಿ ಬಚಾವಾಗುತ್ತಾರೆ‌……..

ನೆನಪಿರಲಿ ಈ ಎರಡೂ ಸಂದರ್ಭದಲ್ಲಿ ಹೆಣ್ಣನ್ನು ಬಲವಂತ ಒಪ್ಪಿಸುವಿಕೆಯ ಮುಂಖಾಂತರವೇ ಭೋಗದ ವಸ್ತುವೆಂದು ಅತ್ಯಾಚಾರ ಮಾಡಲಾಗುತ್ತದೆಯೇ ವಿನಹ ಸಹಜ ಗಂಡು ಹೆಣ್ಣಿನ ಪ್ರೀತಿಯ ಮಿಲನವಾಗಿರುವುದಿಲ್ಲ……..

ಇನ್ನು ಮೂರನೆಯದಾಗಿ ತೀರಾ ಕೆಳ ಹಂತದ, ಬದುಕಿನ ಭರವಸೆಯನ್ನೇ ಕಳೆದುಕೊಂಡ, ಮಾದಕ ವಸ್ತುಗಳಿಗೆ ದಾಸರಾಗಿರುವ, ಅಜ್ಞಾನವೇ ತುಂಬಿಕೊಂಡಿರುವ, ಹೆಣ್ಣಿನೊಂದಿಗಿನ ಮಿಲನವೇ ಸ್ವರ್ಗ ಮತ್ತು ಅದೇ ಬದುಕಿನ ಧ್ಯೇಯ ಎಂದು ಭಾವಿಸುವ ಜನ ಒಂಟಿಯಾಗಿ ಸಿಗುವ, ಅಸಹಾಯಕ ಅಥವಾ ತಾವೇ ಹೊಂಚುಹಾಕಿ ಹಿಡಿಯುವ ಹೆಣ್ಣನ್ನು ತಿಂದು ಮುಗಿಸುತ್ತಾರೆ……..

ಇವರಿಗೆ ಕಾನೂನಿನ ಭಯವೂ ಇರುವುದಿಲ್ಲ. ಧರ್ಮದ ಭಯವೂ ಇರುವುದಿಲ್ಲ ‌ ಸಾವಿನ ಭಯವೂ ಇರುವುದಿಲ್ಲ. ಇದನ್ನು ಮಾತ್ರ ಕಾನೂನಿನ ರೀತಿಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಈಗ ನಿರ್ಭಯಳ ಹಂತಕರು ಇದೇ ವರ್ಗದವರು……..‌

ಈಗ ಅನಿಸುವುದೇನೆಂದರೆ,
ಕೇವಲ ಅವರು ಮಾತ್ರವಲ್ಲದೆ ನಾವೂ ನೇರವಾಗಿಯೇ ಈ ಪರಿಸ್ಥಿತಿಯ ಪಾಲುದಾರರು. ಸಿನಿಮಾ – ಸಾಹಿತ್ಯ – ಕಲೆ – ಧಾರ್ಮಿಕ ನಂಬಿಕೆಗಳು – ಇತ್ಯಾದಿಗಳ ಮುಖಾಂತರ ಹೆಣ್ಣನ್ನು ಭೋಗದ ವಸ್ತುವೆಂದು ಪ್ರಚಾರಮಾಡಿ ಸಾಮಾನ್ಯರಲ್ಲಿ ಆಕೆಯ ಬಗೆಗೆ ವಿಚಿತ್ರ ಕಲ್ಪನೆ ಮೂಡಿಸಿ ಈ ರೀತಿಯ ದುರಂತ ಘಟನೆಗಳಿಗೆ ಕಾರಣವಾಗಿದ್ದೇವೆ……..

ಇದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ಇಡೀ ವ್ಯವಸ್ಥೆಯನ್ನು ಹೆಚ್ಚು ನಾಗರಿಕವಾಗಿ ರೂಪಿಸುವುದೇ ಇದಕ್ಕಿರುವ ಬಹುಮಖ್ಯ ಪರಿಹಾರವೆನಿಸುತ್ತದೆ. ಏಕೆಂದರೆ ನಮಗಿಂತ ಹೆಚ್ಚು ಮುಂದುವರಿದ ಮತ್ತು ಹೆಚ್ಚು ನಾಗರಿಕವಾದ ಪಾಶ್ಚಾತ್ಯ ದೇಶಗಳಲ್ಲಿ ಇದು ಬಹಳ ಕಡಿಮೆ ಎಂದು ಕೇಳಿದ್ದೇನೆ…

ಹಾಗೆಯೇ ಅತ್ಯಂತ ಆಳ ಧಾರ್ಮಿಕ ನಂಬುಗೆಯ ಮತ್ತು ಅತ್ಯಂತ ಅಮಾನುಷ ಕಠಿಣ ಕಾನೂನು ಹೊಂದಿರುವ ಷರಿಯತ್ ಕಾನೂನು ಇರುವ ದೇಶಗಳಲ್ಲಿ ಸಹ ಸ್ವಲ್ಪ ಕಡಿಮೆ ಎನಿಸುತ್ತದೆ.

ಏನಾದರಾಗಲಿ ಹೆಣ್ಣು ಶ್ರೇಷ್ಠಳೂ ಅಲ್ಲ. ಕನಿಷ್ಠಳೂ ಅಲ್ಲ. ಭೋಗದ ವಸ್ತುವೂ ಅಲ್ಲ. ಆಕೆ ನಮ್ಮ ನಿಮ್ಮಂತೆ ಸೃಷ್ಟಿಯ ಸಹಜ ಜೀವಿ. ನಿಮ್ಮ ತಾಯಿ ತಂಗಿ ಅಕ್ಕ ಪ್ರೇಯಸಿಯರು ಮಾತ್ರ ಹೆಣ್ಣುಗಳು ಉಳಿದವರು ನಿಮ್ಮ ಆಡು ಗೊಂಬೆಗಳು ಎಂಬ ಭಾವನೆ ಬಿಡಿ…….

ತಿಳಿವಳಿಕೆ ನಡವಳಿಕೆಯಾಗಿ ಪರಿವರ್ತನೆ ಹೊಂದಿದರೆ ಸಮಾಜ ಖಂಡಿತವಾಗಿ ಉತ್ತಮ ನಾಗರಿಕ ಸಮಾಜವಾಗಿ ರೂಪಗೊಳ್ಳುತ್ತದೆ…..

ಅತ್ಯಾಚಾರಕ್ಕಿಂತ ಹತ್ತು ಪಟ್ಟು ಹೆಚ್ಚು ಸುಖ ಪ್ರೀತಿ ಪ್ರೇಮ ಪ್ರಣಯಗಳು ಹೊಂದಾಣಿಕೆಯ ಎರಡು ಜೀವಗಳಲ್ಲಿ ಅಡಗಿದೆ ಎಂಬ ಅರಿವಿರಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...