ಚೀನಾದಲ್ಲಿ ಕೋವಿಡ್ ಸೋಂಕಿನ ಸಂಖ್ಯೆಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವುದು ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆಯಲ್ಲದೆ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲಿವೆಯೇ ಎಂಬ ಭೀತಿಗೆ ಕಾರಣವಾಗಿದೆ.
ಚೀನಾದ ಹಲವು ನಗರಗಳು ಜ್ವರ ತಪಾಸಣಾ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳನ್ನು ತೆರೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿವೆ.
ಚೀನಾದ ಝೀರೋ ಕೋವಿಡ್ ನಿಯಮಾವಳಿಯನ್ವಯ ಇದ್ದ ಸಾಮೂಹಿಕ ಲಾಕ್‌ಡೌನ್ ಕ್ರಮಗಳನ್ನು ವ್ಯಾಪಕ ಪ್ರತಿಭಟನೆಗಳ ನಂತರ ಕೈಬಿಟ್ಟ ನಂತರ ಈಗ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲಾರಂಭಿಸಿವೆ.
ಇದೀಗ ಚೀನಾದಾದ್ಯಂತ ಮತ್ತೆ ವೈರಸ್ ಹಾವಳಿ ಅತಿಯಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ಇನ್ನಷ್ಟು ಸಾವುಗಳು, ವೈರಸ್ ಮ್ಯುಟೇಶನ್‌ಗಳು ನಡೆಯಬಹುದೆಂಬ ಆತಂಕ ಎದುರಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 7 ರಿಂದ ಚೀನಾದಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆ ಮೊದಲಾದ ಕ್ರಮಗಳನ್ನು ಕೈಬಿಡಲಾಗಿದೆ. ಆದರೆ ಈ ಕ್ರಮದ ನಂತರ ಅಲ್ಲಿನ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು, ಫಾರ್ಮಸಿಗಳಲ್ಲಿ ಔಷಧಿಗಳು ಖಾಲಿಯಾಗುತ್ತಿವೆ ಹಾಗೂ ಜನರು ಹೆಚ್ಚಾಗಿ ಮನೆಗಳಲ್ಲಿಯೇ ಉಳಿಯಲು ಬಯಸಿದ್ದಾರೆ.
2019 ರಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿ ಕೋವಿಡ್ ಸೋಂಕು ಪತ್ತೆಯಾದ ನಂತರ ಅಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಸಾವುಗಳು- 5242 ವರದಿಯಾಗಿದ್ದವು.
ಆದರೆ ಈ ಅಂಕಿಸಂಖ್ಯೆಗಳ ಸತ್ಯಾಸತ್ಯತೆಯ ಬಗ್ಗೆ ಸಾಕಷ್ಟು ಸಂಶಯಗಳಿವೆ.
