ಮಹಿಳೆಯರಲ್ಲಿ ಋತುಚಕ್ರವು ಒಂದು ನೈಸರ್ಗಿಕ ಪ್ರಕ್ರಿಯೆ ಯಾಗಿದ್ದು ಸಾಮಾನ್ಯವಾಗಿ ಹೆಣ್ಣುಮಕ್ಕಳ ಹದಿಹರೆಯದ ವಯಸ್ಸಿಗೆ ಬಂದಾಗ ಅದು ಪ್ರಾರಂಭವಾಗುವ ಜೊತೆಗೆ ಅನೇಕ ವರ್ಷಗಳವರೆಗೆ ಇರುವುದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಹೇಳಿದರು.
ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರೋಟರಿ ಕ್ಲಬ್ ಹಾಗೂ ಕಾಲೇಜು ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆದ ಅಂಗಾಂಗ ದಾನ ಮತ್ತು ಸ್ತ್ರೀಶಕ್ತಿ ಸಬಲೀಕರಣ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಋತುಸ್ರಾವ ಸಮಯದಲ್ಲಿ ಬಳಸಿರುವ ಪ್ಯಾಡ್‌ಗಳನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇ ವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರು ಹಾಗೂ ಯುವತಿಯರು ಋತುಚಕ್ರ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಋತುಚಕ್ರ ಸಮಯದಲ್ಲಿ ಸ್ವಚ್ಚತೆ ಪಾಲಿಸುವುದರ ಜೊತೆಗೆ ನಿಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಗ್ರಾಮಿಣ ಮಟ್ಟದಲ್ಲಿ ಈ ಕುರಿತು ಸ್ವಲ್ಪ ಅರಿವಿನ ಕೊರತೆ ಇರು ವುದರಿಂದ ಆರೋಗ್ಯ ಇಲಾಖೆಯು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.
ಮಹಿಳಾ ಕಾಲೇಜು ಪ್ರಾಂಶುಪಾಲ ಎಸ್.ಎಂ.ನಟೇಶ್ ಮಾತನಾಡಿ ರೋಟರಿ ಕಾಫಿ ಲ್ಯಾಂಡ್ ಹಾಗೂ ಆರೋಗ್ಯ ಇಲಾಖೆಯಿಂದ ಶಾಲೆಗೆ ಅತ್ಯುತ್ತಮವಾದ ಕಾರ್ಯಕ್ರಮ ಆಯೋಜನೆ ಮಾಡಿರು ವುದು ಬಹಳಷ್ಟು ಉಪಯೋಗವಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಕೆಲವು ಅನುಮಾನಗಳು ಬಗೆ ಹರಿಯಲಿದೆ ಎಂದು ತಿಳಿಸಿದರು.
ಇದೇ ವೇಳೆ ರೋಟರಿ ಕ್ಲಬ್ ನಿರ್ದೇಶಕ ಸೂರಜ್ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪಯುಕ್ತ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ನಂತರ ಮಹಿಳಾ ವೈದ್ಯರ ತಜ್ಞರಿಂದ ವಿದ್ಯಾರ್ಥಿಗಳಿಗೆ ಸ್ತ್ರೀಶಕ್ತಿ ಸಬಲೀಕರಣ ಕುರಿತು ವಿಶೇಷ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ರೋಟರಿ ಕಾಫಿ ಲಾಂಡ್ ಅಧ್ಯಕ್ಷ ಹೆಚ್.ಎಂ.ಪ್ರಕಾಶ್, ಸಹಾಯಕ ರಾಜ್ಯಪಾಲ ಗುರುಮೂರ್ತಿ, ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯ ರುದ್ರೇಶ್, ಡಾ|| ಭಾರತಿ ರಾಜಶೇಖರ್, ಡಾ|| ಸುಶ್ಮಾ, ಕಾಲೇಜು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.