ಶಿಕ್ಷಣ ಸಂಸ್ಥೆಯ ಗುಣಮಟ್ಟ ತಿಳಿಯಲು ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತೆ ಪರಿಷತ್ (ನ್ಯಾಕ್) ಮಾನ್ಯತೆ ಪಡೆಯುವುದು ವಿಶ್ವವಿದ್ಯಾಲಯಗಳಿಗೆ ಕಡ್ಡಾಯ. ಆದರೆ ರಾಜ್ಯದ 15 ವಿವಿಗಳು ಮಾನ್ಯತೆ ಪಡೆದಿಲ್ಲ ಎಂಬ ಆತಂಕಕಾರಿ ಸಂಗತಿ, ನ್ಯಾಕ್ ವರದಿಯಿಂದ ತಿಳಿದುಬಂದಿದೆ.
ವಿಶ್ವವಿದ್ಯಾಲಯ ಮತ್ತು ಅದರ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಕಾಂಪೌಂಡ್ ನಿಂದ ಹಿಡಿದು ಕಾಲೇಜಿನ ಬೋಧಕರು ಪಡೆದುಕೊಂಡಿರುವ ಪಿ.ಎಚ್.ಡಿ ಪರಿಗಣನೆಗೆ ತೆಗೆದುಕೊಂಡು ನ್ಯಾಕ್ ಶ್ರೇಣಿಯನ್ನು ನೀಡುತ್ತದೆ.
ರಾಜ್ಯದ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿ 28 ವಿಶ್ವವಿದ್ಯಾಲಯಗಳ ಪೈಕಿ 15 ವಿಶ್ವವಿದ್ಯಾಲಯಗಳು ಇನ್ನೂ ನ್ಯಾಕ್ ಮಾನ್ಯತೆ ಪಡೆದಿಲ್ಲದಿರುವುದು ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ.
ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳಿದ್ದು, ಈ ಪೈಕಿ 176 ಕಾಲೇಜುಗಳು ಮಾತ್ರವೇ ನ್ಯಾಕ್ ಮಾನ್ಯತೆ ಪಡೆದಿದೆ. ಉಳಿದ 167 ಕಾಲೇಜುಗಳ ಮಾನ್ಯತೆ ಪಡೆಯಲು ಅರ್ಹತೆ ಇದ್ದರು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿಲ್ಲ. ಮಾನ್ಯತೆ ಪಡೆದಿದ್ದ ಕಾಲೇಜುಗಳ ಪೈಕಿ 52 ಕಾಲೇಜುಗಳ ನ್ಯಾಕ್ ಮಾನ್ಯತೆ ಅವಧಿ ಮುಗಿದಿದೆ. ಆದರೆ ನವೀಕರಣಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿಲ್ಲ. ಇನ್ನು 9 ಕಾಲೇಜುಗಳು ಮಾನ್ಯತೆ ಪ್ರಕ್ರಿಯೆಯಲ್ಲಿವೆ. 21 ಕಾಲೇಜುಗಳು ಮಾನ್ಯತೆ ಪಡೆಯಲು ಅರ್ಹವಾಗಿವೆ. 5 ವಿವಿಗಳು ಕ್ಲಸ್ಟರ್ ವಿವಿಗಳಾಗಿವೆ. ಇವುಗಳಿಗೆ ಮಾನ್ಯತೆ ಅನ್ವಯಿಸುವುದಿಲ್ಲವೆಂದು ನ್ಯಾಕ್ ರೂಪಿಸಿರುವ ವರದಿಯಲ್ಲಿ ತಿಳಿಸಿದೆ.
ಕರ್ನಾಟಕ ಮುಕ್ತ ವಿವಿ- ಮೈಸೂರು, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ- ಬಳ್ಳಾರಿ, ಸಂಗೀತ ವಿವಿ- ಮೈಸೂರು, ಸಂಸ್ಕೃತ ವಿವಿ- ಬೆಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ- ಬೆಳಗಾವಿ, ಜನಪದ ವಿವಿ-ಹಾವೇರಿ, ಬೆಂಗಳೂರು ಕೇಂದ್ರ ವಿವಿ-ಬೆಂಗಳೂರು, ಬೆಂಗಳೂರು ಉತ್ತರ ವಿವಿ-ಬೆಂಗಳೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ- ಬೆಂಗಳೂರು, ಕೃಷಿ ವಿವಿ- ಧಾರವಾಡ, ಕೃಷಿ ವಿವಿ- ರಾಯಚೂರು, ತೋಟಗಾರಿಕೆ ವಿಜ್ಞಾನ ವಿವಿ-ಬಾಗಲಕೋಟೆ, ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿವಿ-ಶಿವಮೊಗ್ಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ-ಗದಗ ಈ ವಿವಿಗಳು ಇನ್ನು ನ್ಯಾಕ್ ಮಾನ್ಯತೆ ಪಡೆದಿಲ್ಲ ಎಂದು ನ್ಯಾಕ್ ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.