ಕೇಂದ್ರ ಸರ್ಕಾರದ ‘ಪರಮ್ ಉತ್ಕರ್ಷ್’ ಉನ್ನತ ಕ್ಷಮತೆಯ ಕಂಪ್ಯೂಟಿಂಗ್ ಯಂತ್ರವಾಗಿದ್ದು ಶೈಕ್ಷಣಿಕವಾಗಿ ಹೊರಹೊಮ್ಮುವ ನವೀನ ಚಿಂತನೆಗಳಿಗೆ ಪೂರಕ ಶಕ್ತಿಯಾಗಿದೆ ಎಂದು ಸಿಡಾಕ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಡಿ. ಸುದರ್ಶನ್ ತಿಳಿಸಿದರು.
ಶಿವಮೊಗ್ಗದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಮಂಗಳೂರು ಉಪವಿಭಾಗದ ವತಿಯಿಂದ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವೀನ್ಯತೆ ಮತ್ತು ಉದ್ಯಮಶೀಲ ಚಿಂತನೆಗಳು ಶೈಕ್ಷಣಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎರಡು ಮತ್ತು ಮೂರನೇ ಶ್ರೇಣಿ ನಗರಗಳ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾಗಿ ಕೇಂದ್ರ ಸರ್ಕಾರದ ಸಿಡಾಕ್ ಮೂಲಕ ರೂಪಿಸಿರುವ ‘ಪರಮ್ ಉತ್ಕರ್ಷ್’ ಕಂಪ್ಯೂಟಿಂಗ್ ಯಂತ್ರ, ಕೃತಕ ಬುದ್ಧಿಮತ್ತೆಯ ಮೂಲಕ ಆವಿಷ್ಕಾರಿ ಸೌಲಭ್ಯಗಳನ್ನು ನೀಡಲಿದೆ.
ಶಿವಮೊಗ್ಗದ ವಿದ್ಯಾರ್ಥಿಗಳು ಇಂತಹ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಅನ್ವೇಷಣಾತ್ಮಕ ಗುಣ ಬೆಳೆಸಿಕೊಳ್ಳಲು ಸಹಭಾಗಿತ್ವದ ಅವಶ್ಯಕತೆ ಇದೆ. ಬದುಕಿನಲ್ಲಿ ಶಿಕ್ಷಣದ ಕಲಿಕೆಗಿಂತ ಬುದ್ಧಿಶಕ್ತಿ ಅನುಭವಾಧಾರಿತವಾಗಿ ಕಲಿಯುವುದೇ ಹೆಚ್ಚು. ಅಂತಹ ಕಲಿಕೆಗೆ ನಮ್ಮ ನಡುವಿನ ಸ್ನೇಹಿತರ, ಬಂಧುಗಳ, ಸಹೋದ್ಯೋಗಿಗಳ ಸಹಭಾಗಿತ್ವ ಅತ್ಯವಶ್ಯಕ.
ಆಗ ಮಾತ್ರ ವಾಸ್ತವತೆಯ ಅರಿವು ಪಡೆಯಲು ಸಾಧ್ಯ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಮಾತನಾಡಿ, ‘ಆಧುನಿಕತೆಯ ಒಲವಿನ ಹಿಂದೆ ಉಂಟಾಗುತ್ತಿರುವ ತ್ಯಾಜ್ಯಗಳ ಬಗ್ಗೆ ನಾವು ಯೋಚಿಸಬೇಕಿದೆ. ಇತಿಹಾಸದ ಪುಟಗಳನ್ನು ಮೆಲುಕು ಹಾಕಿದಾಗ ಜ್ಞಾನದ ವಿನಿಮಯ ಎಂಬುದು ನಮ್ಮ ರಾಜ ಮಹಾರಾಜರ ಕಾಲದಲ್ಲಿಂದಲೂ ಉನ್ನತವಾಗಿತ್ತು. ಅಂತಹ ಪರಂಪರೆ ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿದೆ.
ಮನುಷ್ಯನಲ್ಲಿ ಜ್ಞಾನ ಹೆಚ್ಚಾದಂತೆ ಸೌಜನ್ಯ ಹೆಚ್ಚಾಗಬೇಕಾಗಿದೆ. ಆಗ ಮಾತ್ರ ಶಿಕ್ಷಣದ ಪರಿಪೂರ್ಣತೆ ಸಾಧ್ಯ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ, ನಿರ್ದೇಶಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಕಾರ್ಯಕ್ರಮ ಸಂಘಟನಾ ಮುಖ್ಯಸ್ಥರಾದ ಡಾ.ಪಿ. ಮಂಜುನಾಥ, ಡಾ.ಎಸ್.ವಿ ಸತ್ಯನಾರಾಯಣ, ಡಾ.ಪೂರ್ಣಲತಾ ಇದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಂಶೋಧನಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.