ಬಡವರ ಪಾಲಿಗೆ ಆರೋಗ್ಯ ಸಂಜೀವಿನಿ ಎಂದೇ ಜನಪ್ರಿಯವಾಗಿರುವ ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಕನ್ನಡ ರಾಜ್ಯೋತ್ಸವ ದಿನದಿಂದ ಸಾರ್ವಜನಿಕರಿಗೆ ಯೋಜನೆಯ ಪ್ರಯೋಜನ ದೊರಕಲಿದೆ.
ಯಶಸ್ವಿನಿ ಯೋಜನೆ ಮರು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಪ್ರಕಟಿಸಿ, ಇದಕ್ಕಾಗಿ ಬಜೆಟ್ನಲ್ಲಿ 300 ಕೋಟಿ ರೂ.
ಮೀಸಲಿಟ್ಟಿದ್ದರು. ಅ. 2ರಂದು ಚಾಲನೆ ನೀಡಲು ಉದ್ದೇಶಿಸಲಾಗಿದ್ದರೂ, ತಾಂತ್ರಿಕ ಕಾರಣಕ್ಕಾಗಿ ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜ್ಯೋತ್ಸವದಂದು ಜಾರಿ ಮಾಡುವುದಾಗಿ ತಿಳಿಸಲಾಗಿತ್ತು.
ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ 2003ರಲ್ಲಿ ಜಾರಿಯಾಗಿದ್ದ ಯಶಸ್ವಿನಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್ಕುಮಾರ್ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಯೋಜನೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಲಾಗಿದ್ದು, ಹೆಚ್ಚು ಸೌಲಭ್ಯವನ್ನು ವ್ಯಾಪ್ತಿಗೆ ತಂದಿರುವುದು ವಿಶೇಷ.
ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಮೊದಲಿದ್ದ ಯಶಸ್ವಿನಿ ಕಾರ್ಡ್ನಲ್ಲಿ ಕೆಲವೇ ರೋಗಗಳಿಗೆ ಚಿಕಿತ್ಸೆ ಸೀಮಿತವಾಗಿತ್ತು. ಪ್ರಸ್ತುತ 1,650 ಕಾಯಿಲೆಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ.
ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಈಗ ಕುಟುಂಬವನ್ನು ತರಲಾಗಿದೆ. ಈ ಮೊದಲು ಸದಸ್ಯರಷ್ಟೇ ಈ ಸೌಲಭ್ಯ ಪಡೆಯಲು ಅರ್ಹರಿದ್ದರು. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಈ ಪರಿವ್ಯಾಪ್ತಿಗೆ ತರಲಾಗಿದೆ. ಕುಟುಂಬದ ನಾಲ್ಕು ಜನರಿಗೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಸದಸ್ಯರಿಗೆ 500 ರೂ ಹಾಗೂ ನಗರ ಪ್ರದೇಶದವರಿಗೆ 1,000 ರೂ ಶುಲ್ಕ ನಿಗದಿ ಮಾಡಲಾಗಿದೆ.
ಹೆಚ್ಚುವರಿ ಕುಟುಂಬ ಸದಸ್ಯರಿದ್ದಲ್ಲಿ ಶೇ.20ರಷ್ಟು ಹೆಚ್ಚಳ ಅಂದರೆ, ಗ್ರಾಮೀಣರಿಗೆ ತಲಾ 100 ರೂ, ನಗರದವರಿಗೆ 200 ರೂ. ಪಾವತಿಸ ಬೇಕಿದೆ. ಎಸ್ಸಿ ಮತ್ತು ಎಸ್ಟಿ ವರ್ಗದ ಶುಲ್ಕಕ್ಕೆ ರಿಯಾಯಿತಿ ನೀಡಿದ್ದು, ಅದನ್ನು ಸರ್ಕಾರವೇ ಭರಿಸಲಿದೆ.
ಯಶಸ್ವಿನಿ ಯೋಜನೆಯಲ್ಲಿ ಈ ಹಿಂದೆ ಇದ್ದ ಗರಿಷ್ಠ 2 ಲಕ್ಷ ರೂ. ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಆದರೆ, ಒಂದು ಕುಟುಂಬದಲ್ಲಿ ನಾಲ್ಕು ಜನರು ಸೇರಿದಂತೆ 5 ಲಕ್ಷಕ್ಕೆ ಮೀರದಂತೆ ಮಾತ್ರ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವ ನಿರ್ಬಂಧ ವಿಧಿಸಲಾಗಿದೆ. ಕುಟುಂಬದಲ್ಲಿ ಒಬ್ಬರೇ 5 ಲಕ್ಷ ರೂ.ತನಕ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಒಂದು ವರ್ಷದೊಳಗೆ ಒಮ್ಮೆ ಈ ಸೌಲಭ್ಯ ಪಡೆಯಬಹುದು.
ಯಶಸ್ವಿನಿ ಕಾರ್ಡ್ ಪಡೆದ ಬಳಿಕ 15 ದಿನಗಳ ನಂತರ ಈ ಯೋಜನೆಯ ಸೌಲಭ್ಯವನ್ನು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಸರ್ಕಾರಿ ನೌಕರರಾಗಿದ್ದರೆ, ಖಾಸಗಿ ಕಂಪನಿಯಲ್ಲಿ ವೇತನ ಪಡೆಯುತ್ತಿದ್ದರೆ, ಯಾವುದೇ ವಿಮಾ ಯೋಜನೆಯಲ್ಲಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.