ಶ್ರೀ ಲಕ್ಷ್ಮಿ ರಮಣ ಸ್ವಾಮಿ ದೇವಸ್ಥಾನ , ಅಂಬಾವಿಲಾಸ ಅರಮನೆ ,ಮೈಸೂರು :
ಇದೊಂದು ಪುರಾತನದೇವಾಲಯ. ಇದರ ಅಭಿವೃದ್ದಿಗೆ ಆಗಿನ ವಿಜಯನಗರ ಸಾಮ್ರಾಜ್ಯದ ಅರಸರು , ಮೈಸೂರು ಅರಸರು ಕಾರಣ ಕರ್ತರು . ಕೋಟೆಯ ಪಶ್ಚಿಮ ಭಾಗದಲ್ಲಿ ಅರಮನೆಯ ವಸ್ತು ಸಂಗ್ರಹಾಲಯದ ಸಮೀಪ ಈ ದೇವಸ್ಥಾನವಿದೆ . ರಾಜ ಒಡೆಯರ್ ಮತ್ತು ಮೂರನೇ ರಾಜ ಒಡೆಯರ್ ರವರು ಮುಖ್ಯ ದ್ವಾರದ ನಿರ್ಮಾಣ ನಂತರ ನವೀಕರಣಕ್ಕೆ ಮೂಲ ಕಾರಣಕರ್ತರು .
ವಿಷ್ಣುವಿನ ಮತ್ತೊಂದು ರೂಪದಲ್ಲಿ ಶ್ರೀ ನಂಬಿ ನಾರಾಯಣ ಮತ್ತು ಶ್ರೀ ಲಕ್ಷ್ಮೀದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ದೇವಳದ ಹಿಂಭಾಗದಲ್ಲಿ ಭವ್ಯವಾದ ಸುಂದರ ಮಂಟಪವನ್ನು ಶ್ರೀ ಕಂಠೀರವ ನರಸರಾಜ ಒಡೆಯರ್ರವರ ಆಡಳಿತಕಾಲ 1638 – 1659 ರಲ್ಲಿ ನಿರ್ಮಾಣಗೊಂಡಿದೆ .
4 ಅಡಿ ಎತ್ತರದ ಆಕರ್ಷಕ ವೇಣುಗೋಪಾಲ ಮೂರ್ತಿಯ ವಿಗ್ರಹ 2 ಅಡಿ ಎತ್ತರದ ರಾಜ ಒಡೆಯರವರ ಮೂರ್ತಿ ಗಮನ ಸೆಳೆಯುತ್ತವೆ.
ಒಂದೆರಡು ಘಟನೆಗಳು ಈ ದೇವಾಲಯದ ಐತಿಹ್ಯದಲ್ಲಿ ಐಕ್ಯವಾಗಿವೆ .
ಪ್ರತಿನಿತ್ಯದಂತೆ ರಾಜಒಡೆಯರ್ರವರು ದೇವರ ನ್ನು ದರ್ಶಿಸಿ ಪ್ರಾರ್ಥಿಸಿ ತೀರ್ಥ ಸ್ವೀಕರಿಸುವಾಗ ತೀರ್ಥ ನೀಡುತ್ತಿದ್ದ ಪುರೋಹಿತನ ಕೈ ನಡುಗುತ್ತಿದ್ದುದ್ದನ್ನು ಕಂಡು ಪ್ರಶ್ನಿಸಲಾಗಿ ಹಣದಾಸೆಗಾಗಿ ತೀರ್ಥದಲ್ಲಿ ವಿಷ ಬೆರಿಸಿರುವುದಾಗಿ ಪುರೋಹಿತ ತಪ್ಪೊಪ್ಪಿ ಕೊಂಡನು.
ಆದರೆ ಆ ವಿಷ ಬೆರೆಸಿದ ತೀರ್ಥವನ್ನೇ ರಾಜ ಒಡೆಯರ್ ಭಯ ಭಕ್ತಿಯಿಂದ ಕುಡಿದುಬಿಟ್ಟರು . ಆದರೂ ದೇವರ ದಯದಿಂದ ರಾಜರಿಗೇನೂ ತೊಂದರೆಯಾಗಲಿಲ್ಲ . ಪುರೋಹಿತನನ್ನು ಚಿತಾವಣೆಗೊಳಿಸಿದ ಕರುಗರಳ್ಳಿ ದಂಡ ನಾಯಕನ ಮೇಲೆ ದಂಡೆತ್ತಿ ಹೋಗಿ ಸೋಲಿಸಿ ಅವನಲ್ಲಿದ್ದ ಅಪಾರ ಐಶ್ವರ್ಯವನ್ನು ಪಡೆದುಕೊಂಡು ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದರು . ಮತ್ತೊಂದು ಘಟನೆ : ರಾಜ ಒಡೆಯರ ರವರಿಗೆ 1599 ರಲ್ಲಿ ಅಂಧತ್ವ ಕಾಡುತ್ತಿತ್ತು .ಆದರೆ ಒಬ್ಬ ಒಕ್ಕಣ್ಣ ಬ್ರಾಹ್ಮಣ ಅವರ ಅಂಧತ್ವವನ್ನು ನಿವಾರಿಸಿದನು . ಈ ವಿಸ್ಮಯದ ನೆನಪಿಗೆ ಆ ಬ್ರಾಹ್ಮಣನ ಗೌರವಾರ್ಥ ” ಅರೆ ಅಂಧ ಬ್ರಾಹ್ಮಣ ಕೈ ಮುಗಿದು ನಿಂತಿರುವ ಪ್ರತಿಮೆ”ಯನ್ನು ಈ ದೇವಸ್ಥಾನದ ಲ್ಲಿ ಪ್ರತಿಷ್ಟಾಪಿಸಿ ಚಿರಸ್ಥಾಯಿ ಗೊಳಿಸಲಾಗಿದೆ .
ಅಲ್ಲದೆ ಮತ್ತೊಂದು ವಿಶೇಷತೆ ಎಂದರೆ ಟಿಪ್ಪು ಮರಣಾನಂತರ , ಬ್ರಿಟಿಷರು ಐದು ವರ್ಷದ ರಾಜಕುಮಾರ ಮೂರನೇ ಕೃಷ್ಣ ರಾಜ ಒಡೆಯರ ಪಟ್ಟಾಭಿಷೇಕ ವನ್ನು ದಿನಾಂಕ 30 .06 .1799 ರಂದು ನೆರವೇರಿಸಿ ಸಿಂಹಾಸನದ ಮೇಲೆ ಆಸೀನರಾಗಿಸಿದ್ದು ಈ ದೇವಾಲಯದಲ್ಲೇ . ಹಾಗಾಗಿ ಈ ದೇಗುಲ ಚಾರಿತ್ರಿಕ ಮಹತ್ತ್ವ ಪಡೆದಿದೆ.
ಬರಹ: ಎಂ.ತುಳಸಿರಾಂ