ಶಿವಮೊಗ್ಗದ ಸಕ್ರೆ ಬೈಲ್ ಆನೆ ಬಿಡಾರದ ಪುಂಡನೆ ಎಂದು ಖ್ಯಾತಿ ಪಡೆದಿರುವ ಮಣಿಕಂಠ ಎಂಬ ಆನೆ ನಿನ್ನೆ ಶನಿವಾರ ಮತ್ತೆ ಮಾವುತನ ಮೇಲೆ ದಾಳಿಗೆ ಯತ್ನಿಸಿದೆ.
ನಿನ್ನೆ ಸಕ್ರೆ ಬೈಲ್ ಆನೆ ಬಿಡಾರದಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ದ ಮಣಿಕಂಠನನ್ನು ಕಾವಾಡಿ ಇಮ್ರಾನ್ ಕಾಡಿಗೆ ಕರೆದ್ಯೊಯಲು ಅದರ ಹೆಗಲು ಏರಿದ್ದ, ಮಾವುತ ಕಲಿಲ್ ಮಣಿಕಂಠನನ್ನು ಹಿಂಬಾಲಿಸಿಕೊಂಡು ಸ್ಕೂಟರಲ್ಲಿ ಹೊರಟಿದ್ದರು. ಆದರೆ ಮಾವುತನ ಮೇಲೆ ಸೇಡು ತೀರಿಸಿಕೊಳ್ಳಲೆಂದೆ ಆತನ ಬರುವಿಕೆಗಾಗಿ ಕಾದು ಕೂತಿದ್ದ ಮಣಿಕಂಠ ಎಂಬ ಆನೆ ಸಕ್ರೆ ಬೈಲ್ ಜಂಗಲ್ ರೆಸಾರ್ಟ್ ಗೇಟ್ ಬಳಿ ನಿಂತು ಬಿಟ್ಟ. ಹಿಂಬದಿಯಿಂದ ಮಾವುತ ಬರುತ್ತಿರುವುದನ್ನು ಮಣಿಕಂಠ ಎಂಬ ಆನೆ ಗಮನಿಸಿ ಏಕಾಏಕಿ ಅಟ್ಟಾಡಿಸಿಕೊಂಡು ಬಂದಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಕ್ಷಣವೇ ಮಾವುತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲೇ ಹತ್ತಿರದಲ್ಲಿ ನಿಂತಿರುವ ಕಾರಿನಲ್ಲಿ ಇಬ್ಬರು ಮಹಿಳೆಯರು ಕೂತಿದ್ದರು. ಅದೃಷ್ಟವಶಾತ್ ಯಾವುದೇ ತೊಂದರೆಗಳಾಗಿಲ್ಲ.
ತಕ್ಷಣವೇ ವೈದ್ಯರು ಮಣಿಕಂಠ (ಆನೆ)ನಿಗೆ ಅರವಳಿಕೆ ಮದ್ದು ನೀಡಿ ಪಳಗಿಸಿದ್ದಾರೆ. ನಂತರ ಅಲ್ಲಿನ ಕುಮ್ಕಿ ಸಹಕಾರದಿಂದ ಉಳಿದ ಮಾವುತ ಕಾವಾಡಿಗಳು ಮಣಿಕಂಠನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.