ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಗುರುವಾರ ಜರುಗಿದ ರಾಜ್ಯ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ , ಜೀವನೋಪಾಯಕ್ಕೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಗ್ರಾಮೀಣ ಭಾಗದ ಅನೇಕ ರೈತರು ಎದುರಿಸುತ್ತಿದ್ದ ಬಂಧನ ಭೀತಿ ದೂರವಾದಂತಾಗಿದೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಪ್ರಕಾರ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು 2015ರ ಆಗಸ್ಟ್ ನಲ್ಲಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. 2016ರ ಆಗಸ್ಟ್ 16ರಂದು ಈ ವಿಶೇಷ ನ್ಯಾಯಾಲಯಗಳನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಭೂ ಒತ್ತುವರಿದಾರರಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ, ನೆರವಾಗುವ ಅಧಿಕಾರಿಗಳಿಗೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರಮುಖವಾಗಿ 3 ವರದಿಗಳಿವೆ. ಬೆಂಗಳೂರು ನಗರದ ಸುತ್ತಮುತ್ತ ಆಗಿರುವ ಭೂ ಒತ್ತುವರಿಯ ಕುರಿತು ಎ.ಟಿ. ರಾಮಸ್ವಾಮಿ ಅವರು 2007ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆ ವರದಿಯು, ಬೆಂಗಳೂರು ನಗರವೊಂದರಲ್ಲೇ 34 ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂದು ಹೇಳಿದೆ. ಸರ್ಕಾರದ ಜಮೀನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2017ರಿಂದ 2019ರವರೆಗೂ 63.8 ಲಕ್ಷ ಸರ್ಕಾರಿ ಜಮೀನು ಇತ್ತು. ನಂತರ ಅದು 61.88 ಲಕ್ಷ ಎಕರೆಗೆ ಇಳಿಯಿತು. ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣ್ಯಂ ನೇತೃತ್ವದ ಸಮಿತಿಯು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 13 ಲಕ್ಷ ರೈತರಿಂದ ಅಂದಾಜು 30 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವರದಿ ನೀಡಿದೆ. ಇದರಲ್ಲಿ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತ ಸಕ್ರಮಕ್ಕಾಗಿ ಪ್ರಯತ್ನ ನಡೆಸಿ, ಬಗರ್ಹುಕುಂ ಸಾಗುವಳಿ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಿರುವುದೂ ಸೇರಿದೆ.
ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ಬಲಾಢ್ಯರು ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ. ಯಾರಿಗೂ ಶಿಕ್ಷೆಯಾಗುತ್ತಿಲ್ಲ. ಸಣ್ಣಪುಟ್ಟ ರೈತರು ಮಾತ್ರ ಶಿಕ್ಷೆಗೆ ಒಳಗಾಗುತ್ತಿರುವ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ, ಗ್ರಾಮೀಣ ಭಾಗದ ರೈತರನ್ನು ಬಿಟ್ಟು ಬಲಾಢ್ಯರಿಂದ ಒತ್ತುವರಿ ತೆರವು ಮಾಡಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸುವುದು ಸಮಂಜಸ ಕ್ರಮವಾಗಿ ಕಂಡಬರುತ್ತದೆ. ಜೀವನಕ್ಕಾಗಿ ಸ್ವಲ್ಪ ಭೂಮಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುವುದು ಬೇರೆ; ವಾಣಿಜ್ಯ ಉದ್ದೇಶಕ್ಕಾಗಿ ಒತ್ತುವರಿ ಮಾಡುವುದು ಬೇರೆ. ಸಚಿವ ಸಂಪುಟ ಕೈಗೊಂಡ ಇನ್ನೊಂದು ಪ್ರಮುಖ ನಿರ್ಧಾರವೆಂದರೆ, ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಹಾಗೂ ಮಂಡ್ಯದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತದ್ದು. ಕೇವಲ ಕಟ್ಟಡ ಕಟ್ಟುವುದಕ್ಕೆ ಆದ್ಯತೆ ನೀಡದೆ, ಬೋಧನಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಿಬ್ಬಂದಿ ಮತ್ತು ಇತರ ಸೌಲಭ್ಯಗಳಿಗೆ ಅನುದಾನ ಒದಗಿಸುವತ್ತಲೂ ಗಮನ ನೀಡಬೇಕಾದ ಅಗತ್ಯವಿದೆ.
ಹುತಾತ್ಮ ಯೋಧರ ಕುಟುಂಬಕ್ಕೆ ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲು, ಸಂದರ್ಶನವಿಲ್ಲದೆ ಕೇವಲ ಲಿಖಿತ ಪರೀಕ್ಷೆ ಆಧಾರದಲ್ಲಿ ಡಿ ವರ್ಗದ ನೇಮಕಾತಿ ಕೈಗೊಳ್ಳಲು, ರೈತ ವಿದ್ಯಾನಿಧಿ ಯೋಜನೆಯನ್ನು ಕೃಷಿ ಕಾರ್ವಿುಕರ ಮಕ್ಕಳಿಗೆ ವಿಸ್ತರಿಸಲು, ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಾಗೂ ವಿಜಯಪುರ, ಬಾಗಲಕೋಟೆ, ಹಾಸನದ ವಿವಿಧ ನೀರಾವರಿ ಯೋಜನೆಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.