ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಟಾಚಾರಕ್ಕೆ ಪ್ರವಾಸ ಮಾಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಉಸ್ತುವಾರಿ ಸಚಿವರು ರಾಜಧಾನಿ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಯಡಿಯೂರಪ್ಪ ತಮ್ಮ 75ನೆ ಹುಟ್ಟುಹಬ್ಬ ಆಚರಿಸಿಕೊಂಡ ವೇಳೆ ಬಿಜೆಪಿಯವರು ಆಕ್ಷೇಪವೆತ್ತಲಿಲ್ಲ. ಆದರೆ, ಇದೀಗ ನನ್ನ ಹುಟ್ಟುಹಬ್ಬ ಆಚರಣೆ ಬಗ್ಗೆ ಟೀಕೆ ಮಾಡುವುದು ಸಲ್ಲ. ಬಿಜೆಪಿಯವರಿಗೆ ಸಾಮರಸ್ಯ ಕೆಡಿಸುವುದೇ ಕೆಲಸ. ಅವರು ತಮ್ಮ ದ್ವಂದ್ವ ಮನೋಭಾವವನ್ನು ಕೈಬಿಡಬೇಕು. ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಅಮೃತ ಮಹೋತ್ಸವ ಪೂರ್ವಭಾವಿ ಸಭೆಗೆ ಡಿಕೆಶಿ ಬರುವ ಅಗತ್ಯವಿಲ್ಲ. ಅವರಿಗೆ ಆಗಸ್ಟ್ 3ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದರು.
ಬಿಜೆಪಿ ಸರಕಾರಕ್ಕೆ ರಾಜ್ಯದ ಜನರ ಬಗ್ಗೆ ಯಾವುದೇ ಕಳಕಳಿ ಇಲ್ಲ. ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಲವು ಜಿಲ್ಲೆಗಳ ಜನತೆ ಕಷ್ಟದಲ್ಲಿದ್ದು, ಶೀಘ್ರದಲ್ಲೇ ನಾನೂ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಲಿದ್ದೇನೆ ಎಂದು ಹೇಳಿದರು.