ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಬಸ್ ಯಾತ್ರೆ ನಡೆಸಲು ಮುಂದಾಗಿದೆ. ಆಗಸ್ಟ್ 15ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆಗೆ ನಿರ್ಧಾರ ಮಾಡಿದ್ದು ‘FREEDOM@75’ ಕಾರ್ಯಕ್ರಮದ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ತಂಡಗಳನ್ನು ರಚಿಸಿ ಬಸ್ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಆಗಸ್ಟ್ 15ರಂದು ಬೆಂಗಳೂರಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಫ್ರೀಡಂ ವಾಕ್’ ಮಾಡಲು ಸೂಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ರಾಷ್ಟ್ರಧ್ವಜ ಹಿಡಿದು 75 ಕಿ.ಮೀ. ಪಥಸಂಚಲನ ಮಾಡಲು ಸಭೆಯಲ್ಲಿ ಸೂಚಿಸಲಾಗಿದೆ.