ತನ್ನ ಪತಿಯ ಸಾವಿನ ನಂತರ ದೃತಿಗೆಡದೆ 25 ವರ್ಷಗಳ ಕಾಲ ಕೆಳದಿ ಸಾಮ್ರಾಜ್ಯದ ರಾಣಿಯಾಗಿ ಆಡಳಿತ ನಡೆಸಿದ ಚೆನ್ನಮ್ಮಾಜಿಯ ಕಾರ್ಯವೈಖರಿ ಕುರಿತು ಹೆಚ್ಚಿನ ಜೈನ ನಡೆಯಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ಹೇಳಿದ್ದಾರೆ.
ಸಾಗರ ಸಮೀಪದ ಕೆಳದಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನಪೀಠ ಸ್ನಾತಕೋತ್ತರ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ಅಧ್ಯಯನ ಸಂಸ್ಥೆ, ಕೆಳದಿ ವಸ್ತು ಸಂಗ್ರಹಾಲಯ ಶನಿವಾರ ಏರ್ಪಡಿಸಿದ್ದ ಕೆಳದಿ ರಾಣಿ ಚೆನ್ನಮ್ಮಾಜಿ ಆಡಳಿತ 350ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಳದಿ ಚೆನ್ನಮ್ಮಾಜಿ ಅಧೀನ ಪೀಠದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧನಾ ಕೊಠಡಿ, ವಿಶಾಲವಾದ ಆಡಳಿತ ವಿಭಾಗ, ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್, ವಿದ್ಯಾರ್ಥಿನಿಲಯ ಸೇರಿ ಈ ಪೀಠವನ್ನು ಮಾದರಿ ಅಧ್ಯಯನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ರಾಣಿ ಚೆನ್ನಮ್ಮಾಜಿ ಅಧ್ಯಯನಪೀಠದ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧ್ಯಯನ ಪೀಠಕ್ಕೆ ಕೆಳದಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಎರಡು ಎಕರೆ ಜಾಗವನ್ನು ನೀಡಿದೆ. ಇದರ ಸಮಗ್ರ ಅಭಿವೃದ್ಧಿಗೆ ಕುವೆಂಪು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾಜೋಯಿಸ್ ಅವರು ಮಾತನಾಡಿ, ಕೆಳದಿ ಇತಿಹಾಸ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ವಿದೇಶದ ಸಂಶೋಧಕರು ಕೆಳದಿ ಇತಿಹಾಸದ ಬಗ್ಗೆ ತೋರಿಸುವಷ್ಟು ಆಸಕ್ತಿಯನ್ನು ಸ್ಥಳೀಯ ವಿದ್ವಾಂಸರು ತೋರುತ್ತಿಲ್ಲ. ಈ ಕಾರಣಕ್ಕಾಗಿ ಕೆಳದಿ ಇತಿಹಾಸದ ಮಹತ್ವ ಯುವ ತಲೆಮಾರಿಗೆ ತಲುಪುತ್ತಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ನೆಲೆಯಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಎಂಬ ವಿಷಯದ ಕುರಿತು ರಂಗಕರ್ಮಿ ದೇವೇಂದ್ರ ಬೆಳೆಯೂರು ಮಾತನಾಡಿದರು. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕಿರಣ್ ದೇಸಾಯಿ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
