ರಾಜ್ಯ ಸರ್ಕಾರ ಯುವ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ.
ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೊಂದು ಸ್ವಾಮಿ ವಿವೇಕಾನಂದ ಹೆಸರಿನ ಸಂಘಗಳನ್ನು ರೂಪಿಸಿ, ಯುವಕರ ಸ್ವಾವಲಂಬನೆ, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲು ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಯೋಜನೆ ರೂಪಿಸಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಕ್ರೀಡಾ ಸಚಿವ ನಾರಾಯಣಗೌಡ, ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೊಂದು ಯುವ ಸಂಘಗಳನ್ನು ಸ್ಥಾಪಿಸಿ, ಯುವಕರಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿ, ಯುವಸಮುದಾಯಕ್ಕೆ ನಾಯಕತ್ವದ ಗುಣ, ನಿರುದ್ಯೋಗ ನಿವಾರಣೆಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಅಗತ್ಯ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ರಾಜ್ಯಾದ್ಯಂತ ಈಗಾಗಲೇ ಜಾರಿಯಲ್ಲಿರುವ ಯುವಸ್ಪಂದನಾ ಯೋಜನೆಯಡಿ ಈ ಸಂಘಗಳನ್ನು ರಚಿಸಿ, ಯುವಕರಿಗೆ ಅಗತ್ಯ ತರಬೇತಿ, ಆರ್ಥಿಕ ಚಟುವಟಿಕೆಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ವಹಿಸಿದೆ.