ಒಕ್ಕಲಿಗರ ಸಂಘದ ವತಿಯಿಂದ ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸರ್ಕಾರವು ಕೆಲವೇ ತಿಂಗಳುಗಳಲ್ಲಿ ಅನುಮೋದನೆ ಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸಾಗರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಒಕ್ಕಲಿಗರ ಸಂಘದ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಕ್ಕಲಿಗರ ಸಂಘದ ವತಿಯಿಂದ ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬುದು ಸಮುದಾಯದ ಮಠಾಧೀಶರ ಅಪೇಕ್ಷೆಯಾಗಿದೆ ಎಂದರು.
ಇಲ್ಲಿ ಇಂತಹ ಭವನ ನಿರ್ಮಿಸಬೇಕೆಂಬುದು ಬಹಳ ದಿನಗಳ ಕನಸಾಗಿತ್ತು. ಈಗ ಇದು ಹಲವರ ಶ್ರಮದಿಂದ ಸಾಕಾರವಾಗಿದೆ. ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಇದು ಈಡೇರಿದೆ. ಈ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ರೂ 30 ಲಕ್ಷ ಮಂಜೂರು ಮಾಡಿದೆ ಎಂದು ಹೇಳಿದರು.
ದೇಶ ವಿದೇಶಗಳಲ್ಲಿ ಕೂಡ ಒಕ್ಕಲಿಗರು ಸಂಘಟಿತರಾಗಿದ್ದು ನಾಡು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರವು ಒಕ್ಕಲಿಗರ ಅಭಿವೃದ್ಧಿ ಕಾರ್ಪೊರೇಷನ್ ಸ್ಥಾಪಿಸಿದೆ. ಒಕ್ಕಲಿಗರು ಎಲ್ಲೆಲ್ಲಿ ಅಲ್ಪಸಂಖ್ಯಾತರಾಗಿದ್ದಾರೋ ಅವರ ಅಭಿವೃದ್ಧಿಗಾಗಿ ಕಾರ್ಪೊರೇಷನ್ ಕೆಲಸ ಮಾಡಲಿದೆ ಎಂದರು.
ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇವತ್ತು ದೇಶದಲ್ಲೇ ಮುಂಚೂಣಿ ನಗರವಾಗಿದೆ. ತಂತ್ರಜ್ಞಾನ, ಕೌಶಲ, ಉದ್ಯಮಶೀಲತೆ, ನವೋದ್ಯಮ ನಗರವಾಗಿ ಬೆಂಗಳೂರು ಗಮನ ಸೆಳೆದಿದೆ. ಹೀಗೆ ಬೆಂಗಳೂರು ಅಭಿವೃದ್ಧಿ ಕಾಣುವುದರಲ್ಲಿ ಒಕ್ಕಲಿಗರ ಕೊಡುಗೆ ಸಾಕಷ್ಟಿದೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಒಕ್ಕಲಿಗ ಸಮುದಾಯ ಅಸಹಾಯಕವಾಗಬಾರದು. ನಾವು ಇಚ್ಛಾಶಕ್ತಿ ಆಧಾರಿತ ಪ್ರಯತ್ನಗಳನ್ನು ಮಾಡಿ ಸಾಧನೆ ಮಾಡಬೇಕು. ಕೌಶಲ, ಶಿಕ್ಷಣ, ಜ್ಞಾನದೊಂದಿಗೆ ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧೆ ಮಾಡಬೇಕು ಎಂದು ಆಶಿಸಿದರು.
ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಗರ ಒಕ್ಕಲಿಗರ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಸಹಕಾರಿ ವಲಯದ ಮಂಜಣ್ಣ ಮತ್ತಿತರರು ಇದ್ದರು