ದಲಿತರ ಮೇಲಿನ ಶೋಷಣೆಗಳ ವಿರುದ್ಧ ಹೋರಾಡಿದ ಮತ್ತು ದಲಿತರಿಗೆ ಭೂಹಕ್ಕು ಕೊಡಿಸುವಲ್ಲಿ ಶ್ರಮಿಸಿದ ಪ್ರೊ. ಬಿ. ಕೃಷ್ಣಪ್ಪ ಅವರ ಇತಿಹಾಸವನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವ ತುರ್ತು ಇದೆ ಎಂದು ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರೊ. ಬಿ. ಕೃಷ್ಣಪ್ಪ ಮತ್ತು ದಲಿತ ಚಳವಳಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಒಳಗೆ 70-80ರ ದಶಕದಲ್ಲಿ ನಡೆದ ಹೋರಾಟಗಳು ಸ್ವಾತಂತ್ರ್ಯಾನಂತರ ನಡೆದ ಮಹಾನ್ ಹೋರಾಟಗಳು. ದಲಿತರ ಮೇಲಿನ ಅತ್ಯಾಚಾರ, ಶೋಷಣೆಗಳ ವಿರುದ್ಧ ಹಾಗೂ ಭೂಮಿ ಪಡೆಯುವ ಹೋರಾಟಗಳು ಈ ಕಾಲಘಟ್ಟದಲ್ಲಿ ನಡೆದಂತಹವು. ಮಹಾರಾಷ್ಟ್ರದಲ್ಲಿ ಆರಂಭವಾದ ಚಳವಳಿ ಕಿಚ್ಚು ಕರ್ನಾಟಕದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರಿಂದ ಗಾಢವಾಗಿ ಹಬ್ಬಿದವು. ಅವುಗಳ ಅಧ್ಯಯನದ ಅಗತ್ಯವಿದೆ ಎಂದರು.
ದಲಿತರಿಗೆ ಅಭಿವ್ಯಕ್ತಿಯನ್ನು, ಅಸ್ಮಿತೆಯನ್ನು ನೀಡುವ ಮಹಾನ್ ಕಾರ್ಯವನ್ನು ಪ್ರೊ. ಕೃಷ್ಣಪ್ಪ ಈ ಸಂದರ್ಭದಲ್ಲಿ ಮಾಡಿದರು. ಇದರಿಂದಾಗಿ ದಲಿತ ಸಾಹಿತಿಗಳು, ಚಳವಳಿಗಾರರು ಹುಟ್ಟಿಕೊಂಡರು. ದಲಿತ ಚಳವಳಿ ರೂಪಿಸುವಲ್ಲಿ ಇವುಗಳೆಲ್ಲ ಮುಖ್ಯಪಾತ್ರ ನಿರ್ವಹಿಸಿದವು. ಜಮೀನ್ದಾರಿ ಪದ್ಧತಿ ವಿರುದ್ಧ, ಬೆತ್ತಲೆ ಸೇವೆವಿರುದ್ಧ, ಬ್ರಾಹ್ಮಣತ್ವದ ವಿರುದ್ಧ ಭಾರೀ ಚಳವಳಿ ಆರಂಭವಾಗಿ ದಲಿತ ಅಸ್ಮಿತೆ ಬೃಹತ್ತಾಗಿ ಬೆಳೆಯಿತು. ಇದಕ್ಕೆ ಕಾರಣವಾದ ಪ್ರೊ. ಬಿ. ಕೃಷ್ಣಪ್ಪ ಅವರ ಬರಹಗಳನ್ನು, ಭಾಷಣಗಳನ್ನು, ಹೋರಾಟದ ಕುರಿತ ವರದಿಗಳನ್ನು ಸಂಗ್ರಹಿಸಿ ಆಕರಗ್ರಂಥಗಳನ್ನು ರೂಪಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಬಿ.ಪಿ. ವೀರಭದ್ರಪ್ಪ, ಭಾರತದಲ್ಲಿ ದಲಿತರಿಗೆ ಹಕ್ಕುಗಳನ್ನು ನೀಡಿದ ಮಹಾನ್ ಹೋರಾಟಗಾರರಾಗಿ ಅಂಬೇಡ್ಕರ್ ಕಂಡರೆ, ಕರ್ನಾಟಕದ ಮಟ್ಟಿಗೆ ಆ ಕಾರ್ಯವನ್ನು ಪ್ರೊ. ಬಿ. ಕೃಷ್ಣಪ್ಪ ಮಾಡಿದ್ದಾರೆ ಎಂದು ಧೈರ್ಯವಾಗಿ ಹೇಳಬಹುದು. ದಲಿತರ ಮೇಲೆ ನಡೆಯುತ್ತಿದ್ದ ಅನೇಕ ತರಹದ ಶೋಷಣೆಗಳ ವಿರುದ್ಧ ಕೃಷ್ಣಪ್ಪ ಅವರ ಅಂದಿನ ಹೋರಾಟಗಳು ಮಾದರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿಯ ನಿರ್ದೇಶಕ ಪ್ರೊ. ಪ್ರಶಾಂತ್ ನಾಯಕ್ ಜಿ., ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ, ಡಾ. ಮೇಟಿ ಮಲ್ಲಿಕಾರ್ಜುನ್, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು. ನಂತರ ದಲಿತ ಚಳವಳಿಯ ಚಾರಿತ್ರಿಕ ನೋಟ, ದಲಿತ ಸಂಘಟನೆ ಮತ್ತು ರಾಜಕೀಯ, ದಲಿತ ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಮೇಲೆ ಡಾ. ಚಂದ್ರಶೇಖರ್, ಡಾ. ನೆಲ್ಲಿಕಟ್ಟೆ ಸಿದ್ಧೇಶ್, ಡಾ. ಮೋಹನ್ ಚಂದ್ರಗುತ್ತಿ ವಿಚಾರಗಳನ್ನು ಮಂಡಿಸಿದರು.