ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮೂತ್ರಪಿಂಡ, ಹೃದಯ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎಂದು ತಜ್ಞ ವೈದ್ಯರು ಸಲಹೆ ನೀಡಿದರು.
ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಮಧುಮೇಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಡೋಕ್ರೈನೋಲಜಿ ವಿಭಾಗದ ತಜ್ಞ ವೈದ್ಯ ಡಾ. ಸುಜನ್ ಆರ್. ಮುಡದೇವಣ್ಣವರ , ಮಧುಮೇಹ ಹೊಸ ಕಾಯಿಲೆಯಲ್ಲ. ಸುಮಾರು 3,500 ವರ್ಷಗಳ ಹಿಂದಿನ ಈಜಿಪ್ಟ್ನ ವೈದ್ಯಕೀಯ ದಾಖಲೆಗಳಲ್ಲಿಯೇ ಈ ಕಾಯಿಲೆಯ ಲಕ್ಷಣಗಳ ಉಲ್ಲೇಖವಿದೆ. ಪ್ರಾಚೀನ ಭಾರತೀಯ ವೈದ್ಯ ಸುಶ್ರುತರು ಇದನ್ನು ‘ಮಧುಮೇಹ’ ಎಂದು ವಿವರಿಸಿದ್ದರು. 1921ರಲ್ಲಿ ಕೆನಡಾದ ವಿಜ್ಞಾನಿಗಳಾದ ಡಾ. ಫ್ರೆಡೆರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್ ಇನ್ಸುಲಿನ್ ಕಂಡುಹಿಡಿದಿದ್ದು, ಮಧುಮೇಹ ಚಿಕಿತ್ಸೆಯಲ್ಲಿ ಮಹತ್ವದ ಮೈಲಿಗಲ್ಲಾಯಿತು. 1922ರಲ್ಲಿ ಮೊದಲ ಬಾರಿಗೆ 14 ವರ್ಷದ ಬಾಲಕನಿಗೆ ಇನ್ಸುಲಿನ್ ನೀಡಲಾಯಿತು. ಈ ಮಹತ್ವದ ಸಂಶೋಧನೆಯ ಸ್ಮರಣಾರ್ಥ ಬ್ಯಾಂಟಿಂಗ್ ಅವರ ಜನ್ಮದಿನವಾದ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಮಧುಮೇಹದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಪದೇಪದೇ ಮೂತ್ರ ವಿಸರ್ಜನೆ, ವಿಶೇಷವಾಗಿ ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಏಳುವುದು, ಅತಿಯಾದ ಬಾಯಾರಿಕೆ ಮತ್ತು ಹಸಿವು, ಕಾರಣವಿಲ್ಲದೆ ತೂಕ ಇಳಿಕೆಯಾಗುವುದು, ಸುಸ್ತು, ಕಣ್ಣು ಮಂಜಾಗುವುದು, ಗಾಯಗಳು ನಿಧಾನವಾಗಿ ಗುಣವಾಗುವುದು ಹಾಗೂ ಕೈಕಾಲುಗಳಲ್ಲಿ ಜುಮ್ಮೆನಿಸುವುದು ಅಥವಾ ಮರಗಟ್ಟುವಿಕೆ ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ ಇವುಗಳನ್ನು ನಿರ್ಲಕ್ಷಿಸಬೇಡಿ ಎಂದರು.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವ ಮಹತ್ವದ ಕುರಿತು ಮಾತನಾಡಿದ ಹಿರಿಯ ತಜ್ಞವೈದ್ಯ ಡಾ. ಗೋಪಾಲ್ ಡಿ., ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ 70ರಿಂದ 99 ಎಂ ಜಿ/ಡಿ ಎಲ್ ಇರಬೇಕು. 100ರಿಂದ 125ರ ನಡುವಿನ ಪ್ರಮಾಣವು ಮಧುಮೇಹ ಪೂರ್ವ ಹಂತವನ್ನು ಸೂಚಿಸಿದರೆ, 126 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣ ಮಧುಮೇಹದ ಸೂಚನೆಯಾಗಿದೆ. ಊಟದ ಎರಡು ಗಂಟೆಗಳ ನಂತರ ಸಕ್ಕರೆ ಪ್ರಮಾಣ 140 ಎಂಜಿ /ಡಿಲ್ ಗಿಂತ ಕಡಿಮೆ ಇರಬೇಕು. ಹೆಚ್ ಬಿ ಎ 1 ಸೀ ಪರೀಕ್ಷೆಯಲ್ಲಿ 5.7ಕ್ಕಿಂತ ಕಡಿಮೆ ಪ್ರಮಾಣ ಸಾಮಾನ್ಯವಾಗಿದ್ದು, 6.5 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣ ಮಧುಮೇಹವನ್ನು ಸೂಚಿಸುತ್ತದೆ ಎಂದು ವಿವರಿಸಿದರು.
ಈಗಾಗಲೇ ಮಧುಮೇಹ ಇರುವವರು ವೈದ್ಯರ ಸಲಹೆಯಂತೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಖಾಲಿ ಹೊಟ್ಟೆಯ ರಕ್ತದ ಸಕ್ಕರೆ ಪರೀಕ್ಷೆ, ಊಟದ ನಂತರದ ಸಕ್ಕರೆ ಪರೀಕ್ಷೆ, HbA1c ಹಾಗೂ ಮೂತ್ರಪಿಂಡದ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಅಗತ್ಯ. ಎಸ್ ಎನ್ ಎಂ ಎಚ್ ಆಸ್ಪತ್ರೆಯಲ್ಲಿ ಕೇವಲ ರ್ಸ್ 499ಕ್ಕೆ ವಿಶೇಷ ಆರೋಗ್ಯ ತಪಾಸಣಾ ಪ್ಯಾಕೇಜ್ ಲಭ್ಯವಿದೆ , ಇದರ ಪ್ರಯೋಜನ ಪಡೆಯಬೇಕು ಎಂದರು.
ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಅಗತ್ಯದ ಕುರಿತು ಮಾತನಾಡಿದ ಡಾ. ಕಿರಣ್ ವಿ.ಎಚ್., ಭಾರತದಲ್ಲಿ ಸುಮಾರು ಒಂಬತ್ತು ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅನೇಕ ಭಾರತೀಯರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಗಣನೀಯವಾಗಿ ಹೆಚ್ಚಾದರೂ ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಕಾಯಿಲೆ ಇದೆ ಎಂಬ ಅರಿವೇ ಇರುವುದಿಲ್ಲ. ಆದ್ದರಿಂದ ಲಕ್ಷಣಗಳಿಲ್ಲದಿದ್ದರೂ ನಿಯಮಿತವಾಗಿ ಮಧುಮೇಹ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಮಧುಮೇಹ ನಿಯಂತ್ರಣದಲ್ಲಿಲ್ಲದಿದ್ದರೆ ಮೂತ್ರಪಿಂಡ ಸೇರಿದಂತೆ ದೇಹದ ವಿವಿಧ ಅಂಗಾಂಗಗಳ ಮೇಲೆ ಪರಿಣಾಮ ಬೀರಬಹುದು. ಆರಂಭದಲ್ಲಿಯೇ ಕಾಯಿಲೆಯನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಮೂತ್ರಪಿಂಡ ವೈಫಲ್ಯ ಮತ್ತು ಡಯಾಲಿಸಿಸ್ನಂತಹ ಗಂಭೀರ ತೊಂದರೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇನ್ಸುಲಿನ್ ಆರಂಭಿಸುವುದು ಕಾಯಿಲೆ ಗಂಭೀರವಾಗಿದೆ ಎಂಬುದರ ಸಂಕೇತವಲ್ಲ. ವೈದ್ಯರ ಸಲಹೆಯಂತೆ ಸೂಕ್ತ ಸಮಯದಲ್ಲಿ ಇನ್ಸುಲಿನ್ ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ಅಂಗಾಂಗಗಳನ್ನು ರಕ್ಷಿಸಬಹುದು ಎಂದರು..
ಆಹಾರ ಕ್ರಮದ ಕುರಿತು ಮಾತನಾಡಿದ ಡಾ. ಆಶಾಶ್ರೀ ಉಪಾಧ್ಯ, ಮಧುಮೇಹ ನಿಯಂತ್ರಣದಲ್ಲಿ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ಸಕ್ಕರೆ, ಸಿಹಿ ಪದಾರ್ಥಗಳು, ಸಂಸ್ಕರಿತ ಆಹಾರ ಹಾಗೂ ಸಂರಕ್ಷಕಗಳನ್ನು ಸೇರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ರಾಗಿ, ಸಜ್ಜೆಯಂತಹ ಸಿರಿಧಾನ್ಯಗಳು ಮತ್ತು ನಾರಿನಂಶ ಹೆಚ್ಚಿರುವ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಅಕ್ಕಿ ಅಥವಾ ಗೋಧಿ ಯಾವುದನ್ನೇ ಸೇವಿಸಿದರೂ ಪ್ರಮಾಣದ ಮೇಲೆ ಗಮನಹರಿಸುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾಕ್ಟರ್ ಉತ್ತಮ ಶರ್ಮ, ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕರು ಶ್ರೀ ಶೈಲೇಶ್ ಎಸ್ ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂರಕ್ಕೂ ಅಧಿಕ ಜನರ ರಕ್ತದ ತಪಾಸಣೆ
ಅಧಿಕ ಜನ ಇಂದು ಉಚಿತ ರಕ್ತ ತಪಾಸಣೆಗೆ ಒಳಗಾದರು
ರೂಪಾಯಿ 499 ಪ್ಯಾಕೇಜ್ ನಲ್ಲಿ ಎಫ್ ಬಿ ಎಸ್ ಪಿ ಬಿ ಎಸ್ ಎಚ್ ಬಿ ಎ 1ಕಾಲ್, ಸೀರಂ ಕ್ರಿಯಾಟಿನ್ ಹಾಗೂ ತಜ್ಞ ವೈದ್ಯರ ಸಮಾಲೋಚನೆ ಒಳಗೊಂಡಿದೆ ಇದು ಡಿಸೆಂಬರ್ 30 ರವರೆಗೆ ಜನರಿಗೆ ಲಭ್ಯವಿದೆ.
