Monday, November 23, 2026
Monday, November 23, 2026

ಕಾನೂನುಬದ್ಧ ದತ್ತು ಪ್ರಕ್ರಿಯೆಗೆ ಒತ್ತು-ಬೆಂಬಲ ವ್ಯಕ್ತಿಗಳ ಪಾತ್ರ ಅತ್ಯಂತ ಮಹತ್ವದ್ದು: ನ್ಯಾ.ಸಂತೋಷ್ ಎಂ.ಎಸ್

Date:

ಪೋಕ್ಸೋ ಪ್ರಕರಣಗಳ ಹಿನ್ನೆಲೆಯಲ್ಲಿ ನೊಂದವರ ಬೆನ್ನಿಗೆ ಬಲ ನೀಡುವವರೇ ಬೆಂಬಲ ವ್ಯಕ್ತಿ ಗಳಾಗಿದ್ದು‌, ನೊಂದ ಮಕ್ಕಳಿಗೆ ಕಿವಿಯಾಗಿ, ಕಾನೂನಾತ್ಮಕ ಸಹಕಾರದೊಂದಿಗೆ ಅರಿವು‌ ಮೂಡಿಸುವ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್ ಪೊಕ್ಸೋ ಬೆಂಬಲ ವ್ಯಕ್ತಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರುಗಳು ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಡಿ.ಎ.ಆರ್. ಸಭಾಂಗಣದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ -2026ರ ಅಂಗವಾಗಿ ಅರೆಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾಗಿರುವ ಪೋಕ್ಸೋ ಬೆಂಬಲ ವ್ಯಕ್ತಿಗಳಿಗೆ ಹಾಗೂ ಸ್ವಯಂ ಸೇವಾ ಸಂಘದ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ
ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆನ್ನುಮೂಳೆಗೆ ಗಾಯವಾದ ವ್ಯಕ್ತಿಗೆ ಎದ್ದು ನಿಲ್ಲಲು ಎಷ್ಟು ಕಷ್ಟವಾಗುತ್ತದೆಯೋ, ಹಾಗೆಯೇ ಅಪರಾಧಕ್ಕೆ ಒಳಗಾದ ಬಾಲಕ ಅಥವಾ ಬಾಲಕಿ ತಲೆ ಎತ್ತಲಾರದೆ, ಯಾರೊಂದಿಗೂ ಮಾತನಾಡಲಾಗದೆ, ಜೀವನ ನಡೆಸುವುದೇ ಬೇಡ ಎಂಬ ಹಂತಕ್ಕೆ ತಲುಪಿದಾಗ, ಅವರಿಗೆ ಬೆನ್ನೆಲುಬಾಗಿ ನಿಲ್ಲುವುದೇ ಬೆಂಬಲ ವ್ಯಕ್ತಿಯ ನಿಜವಾದ ಕೆಲಸ.
ಇಲಾಖೆಗಳೊಂದಿಗೆ ಮಾತನಾಡುವುದು ಎರಡನೇ ಹಂತವಾದರೆ, ಮೊದಲ ಮತ್ತು ಪ್ರಮುಖ ಹಂತವೆಂದರೆ ನೊಂದವರ ಮಾತುಗಳನ್ನು ಕೇಳುವ ಕಿವಿಯಾಗುವುದು. ಅವರ ಸಂಕಟ ಮತ್ತು ಸಮಸ್ಯೆಗಳನ್ನು ಆಲಿಸಿದಾಗಲೇ ಬೆಂಬಲ ವ್ಯಕ್ತಿಯ ಕೆಲಸ ಯಶಸ್ವಿಯಾಗುತ್ತದೆ.
ಪೋಕ್ಸೋ ಪ್ರಕರಣಗಳ ಹಿನ್ನೆಲೆಯಲ್ಲಿ ಬಾಲಕ ಮತ್ತು ಬಾಲಕಿಗೆ ಬೆಂಬಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು ಈ ಕಾರ್ಯಕ್ರಮ ಸಮರ್ಪಕ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ ಎಂದರು.
ದತ್ತು ಮಾಸಾಚರಣೆ ಮತ್ತು ಪೋಕ್ಸೋ ಜಾಗೃತಿ : “ಪೋಷಕರಾಗಲು ಅಡ್ಡದಾರಿಗಳಿಲ್ಲ, ಕಾನೂನುಬದ್ಧ ದತ್ತು ಒಂದೇ ಮಾರ್ಗ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ದತ್ತು ಮಾಸಾಚರಣೆ ನಡೆಯುತ್ತಿದೆ. ಮದುವೆಯಾದರೂ ಮಕ್ಕಳಾಗದಿದ್ದರೆ ಕಾನೂನುಬದ್ಧ ಪರ್ಯಾಯ ಮಾರ್ಗವೇನು ಎಂಬ ಸಂದೇಶವನ್ನು ಇದು ನೀಡುತ್ತಿದೆ.
ಮತ್ತೊಂದೆಡೆ, ಮದುವೆಗೂ ಮುನ್ನ ಗರ್ಭಧಾರಣೆ, ಬಾಲ್ಯಾವಸ್ಥೆಯ ವಿವಾಹಗಳು ಮತ್ತು ಬಾಲ್ಯಾವಸ್ಥೆಯ ಗರ್ಭಧಾರಣೆಯಿಂದ ಉಂಟಾಗುವ ಪೋಕ್ಸೋ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಬಾಲ್ಯ ವಿವಾಹ ಮತ್ತು ಬಾಲ್ಯಾವಸ್ಥೆಯ ಗರ್ಭಧಾರಣೆಯಿಂದ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ಗಮನಾರ್ಹ ವಿಚಾರವಾಗಿದೆ.
ನೊಂದ ವ್ಯಕ್ತಿಗೆ, ವಿಶೇಷವಾಗಿ ಬಾಲಕ ಅಥವಾ ಬಾಲಕಿಗೆ ಆಸರೆಯಾಗಿ ನಿಲ್ಲಲು ಅರೆಕಾಲಿಕ ಕಾನೂನು ಸ್ವಯಂಸೇವಕರು ಸೂಕ್ತ ವ್ಯಕ್ತಿಗಳಾಗಿದ್ದಾರೆ. ಕಾನೂನು ಸ್ವಯಂಸೇವಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಇಲಾಖೆಗಳೊಂದಿಗೆ ಹೇಗೆ ಸಮನ್ವಯ ಸಾಧಿಸಬೇಕು ಎಂಬುದರ ಅರಿವಿದೆ. ಅಲ್ಲದೆ, ತಮ್ಮ ಇತಿಮಿತಿಗಳ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇದ್ದು ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಬೇಕು.ಈ ಕಾರ್ಯಕ್ಕೆ ಮುಂದೆ ಬಂದಿರುವ 54 ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ಬೆಂಬಲ ವ್ಯಕ್ತಿಗಳಾಗಿ ಗುರುತಿಸಿ, ತರಬೇತಿ ನೀಡಲಾಗುತ್ತಿದೆ ಎಂದರು.
ಸಮಾಜದಲ್ಲಿ ಓಡಿಹೋಗುವ ಪ್ರಕರಣಗಳು, ಹುಡುಗ-ಹುಡುಗಿ ಪರಸ್ಪರ ಸಮ್ಮತಿಯಿಂದ ಹೋಗುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಸ್ಪಷ್ಟತೆ ಇರಬೇಕು.
ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಸಿನ ಬಾಲಕ ಅಥವಾ ಬಾಲಕಿ ನೀಡುವ ಒಪ್ಪಿಗೆಗೆ ಮಾನ್ಯತೆ ಇಲ್ಲ. ಹುಡುಗಿಯೇ ಒಪ್ಪಿ ಬಂದರೂ ಮುಂದೆ ಹುಡುಗ ಕಾನೂನಾತ್ಮಕ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂಬ ವಾಸ್ತವವನ್ನು ಸಮಾಜಕ್ಕೆ ಮತ್ತು ಯುವಜನತೆಗೆ ತಿಳಿಸಬೇಕಿದೆ ಎಂದ ಅವರು ಕೇವಲ ಕೇಳಿಸಿಕೊಳ್ಳುವುದಷ್ಟೇ ಅಲ್ಲದೆ, ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ, “ಎಲ್ಲರಿಗೂ ನ್ಯಾಯ” ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯವನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ಜಿಲ್ಲೆಯು ಇಡೀ ಕರ್ನಾಟಕಕ್ಕೆ ಮಾದರಿಯಾಗಿ ಮುಂಚೂಣಿಯಲ್ಲಿದೆ. ಇಲಾಖೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ನಡುವಿನ ಉತ್ತಮ ಸಮನ್ವಯ ಹಾಗೂ “ಇದು ನಮ್ಮದು” ಎಂಬ ಬದ್ಧತೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಮಕ್ಕಳು ಮತ್ತು ಮಹಿಳೆಯರ ರಕ್ಷಣೆ ವಿಚಾರದಲ್ಲಿ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು “ಇದು ನಂದಲ್ಲ” ಎನ್ನದೆ ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಕೇವಲ ಕಚೇರಿಯಲ್ಲಿ ಕುಳಿತು ಚರ್ಚಿಸುವುದಕ್ಕಿಂತ, ಕ್ಷೇತ್ರಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವುದು ಅತ್ಯಗತ್ಯ.
ಪೋಕ್ಸೋ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಅತ್ಯಂತ ಸೂಕ್ಷ್ಮವಾದವು. ಸಂತ್ರಸ್ತ ಮಕ್ಕಳು ಮಾನಸಿಕ ಹಾಗೂ ದೈಹಿಕ ಆಘಾತಕ್ಕೆ ಒಳಗಾಗಿರುತ್ತಾರೆ. ಪೊಲೀಸ್ ಸಮವಸ್ತ್ರ ನೋಡಿ ಅಥವಾ ಹೆಸರು ಕೇಳಿದ ತಕ್ಷಣ ಮಕ್ಕಳು ಭಯಗೊಂಡು ಒಳಗೆ ಹೋಗುತ್ತಾರೆ. ಆದ್ದರಿಂದ, ಸ್ವಯಂಸೇವಕರು ಮಕ್ಕಳಿಗೆ ಸುರಕ್ಷಿತ ಮತ್ತು ಆಪ್ತವಾದ ವಾತಾವರಣ ನಿರ್ಮಿಸಿ, ಅವರಲ್ಲಿ ವಿಶ್ವಾಸ ಮೂಡಿಸಬೇಕು. ಮಕ್ಕಳ ಮನೋಭಾವಕ್ಕೆ ತಕ್ಕಂತೆ, ಪದಬಳಕೆಯಲ್ಲಿ ಎಚ್ಚರಿಕೆ ವಹಿಸಿ ಮಾತನಾಡಬೇಕು.
‘ಮಿಷನ್ ಸುರಕ್ಷಾ’ದಂತಹ ಕಾರ್ಯಕ್ರಮಗಳು ಹಾಗೂ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ರಚನೆಯಿಂದಾಗಿ ಪ್ರಕರಣಗಳ ವರದಿ ಹೆಚ್ಚಾಗಿದೆ. 2024ರಲ್ಲಿ 237 ಹಾಗೂ 2025ರಲ್ಲಿ ಸುಮಾರು 253–254ರಷ್ಟಿದ್ದ ಪ್ರಕರಣಗಳು, ಪ್ರಸಕ್ತ ವರ್ಷ ಈಗಾಗಲೇ 263ಕ್ಕೂ ಹೆಚ್ಚು ದಾಖಲಾಗಿವೆ. ತಪ್ಪು ನಡೆದಾಗ ಅದು ವರದಿಯಾದಾಗ ಮಾತ್ರ ಸಮಾಜಕ್ಕೆ ಅದರ ಅರಿವಾಗುತ್ತದೆ.
ಕಾನೂನುಬದ್ಧ ದತ್ತು ಪ್ರಕ್ರಿಯೆಗೆ ಕರೆ: ಗ್ರಾಮೀಣ ಭಾಗಗಳಲ್ಲಿ ಕಾನೂನುಬದ್ಧವಲ್ಲದ ರೀತಿಯಲ್ಲಿ ಮಕ್ಕಳನ್ನು ದತ್ತು ಪಡೆಯುವ ಅಥವಾ ಒಪ್ಪಿಸುವ ಪ್ರಕರಣಗಳು ಕಂಡುಬರುತ್ತಿವೆ. ಇಂತಹ ವಿಚಾರಗಳಲ್ಲಿ ಸಮಾಜದ ಅನಗತ್ಯ ಮಾತುಗಳಿಗೆ ಕಿವಿಗೊಡದೆ, ಕಾನೂನು ಚೌಕಟ್ಟಿನಲ್ಲೇ ಪ್ರಕ್ರಿಯೆ ನಡೆಸಬೇಕು. ದತ್ತು ಸ್ವೀಕಾರದ ವಿಷಯದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಇನ್ನಷ್ಟು ಮಕ್ಕಳ ಬದುಕಿಗೆ ಆಸರೆಯಾಗಬಹುದು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ದತ್ತು ಮಾಸಾಚರಣೆ ಕಾರ್ಯಕ್ರಮ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಪ್ರಥಮ ಬಹುಮಾನ ಮತ್ತು ಒಂದು ಬಾರಿ ದ್ವಿತೀಯ ಬಹುಮಾನ ಪಡೆದಿದೆ. ಅಲ್ಲದೆ, ಇಡೀ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ದತ್ತು ಪ್ರಕರಣಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದ್ದಾಗಿದೆ.
ಜಿಲ್ಲೆಯಲ್ಲಿ ಪೋಕ್ಸೋ ಮತ್ತು ಹದಿಹರೆಯದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಪೋಷಕರು ಕೂಡ ಮಕ್ಕಳ ರಕ್ಷಣಾ ಸಮಿತಿಯ ಮುಂದೆ ಬಂದು ನೇರವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನವೆಂಬರ್ 27 ಅನ್ನು ‘ಬಾಲ್ಯ ವಿವಾಹ ಮುಕ್ತ ದಿನ’ವನ್ನಾಗಿ ಘೋಷಿಸಲಾಗಿದ್ದು, ಇದು ಉತ್ತಮ ಹೆಜ್ಜೆಯಾಗಿದೆ. ಬಾಲ್ಯ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಯಂತಹ ಪ್ರಕರಣಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ.
ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮಗುವಿನ ಮೌನವನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಮುಖ್ಯ. ನೊಂದ ಮಕ್ಕಳು ಮತ್ತು ಹೆಣ್ಣುಮಕ್ಕಳು ಮೌನವಾಗಿರುತ್ತಾರೆ; ಅವರಿಗೆ ಬೆಂಬಲ ವ್ಯಕ್ತಿಗಳಾಗಿ ನಿಂತು, ಅವರ ಮೌನವನ್ನು ಅರ್ಥಮಾಡಿಕೊಂಡು ಸಹಾಯ ಮಾಡಬೇಕು ಎಂದರು.
ಶಿವಮೊಗ್ಗ ಆರ್ಟ್ ಆಫ್ ಲಿವಿಂಗ್ ನ ಬಿ.ಮೂರ್ತಿ ಮಾನಸಿಕ ಒತ್ತಡಗಳ ನಿವಾರಣೆ ಕುರಿತು ಹಾಗೂ ಪೋಕ್ಸೋ ಕಾಯ್ದೆ ಕುರಿತು ಸ್ತ್ರೀರೋಗ ತಜ್ಞೆ ಡಾ.ಚಂದುಶ್ರೀ
ವಿಶೇಷ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಕವಿತಾ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಶಿರೇಖಾ ಸ್ವಾಗತಿಸಿದರು. ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕುಮಾರ ವ್ಯಾಸ ..ನಾನು ಕಂಡಂತೆ ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

“ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!“ ಕುಮಾರವ್ಯಾಸನ...

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...