Sunday, November 22, 2026
Sunday, November 22, 2026

Madhu Bangarappa ಜನರ ಪ್ರತೀ ಅಹವಾಲಿಗೂ ಅಧಿಕಾರಿಗಳು ಜವಾಬ್ದಾರಿಯಿಂದ ಸ್ಪಂದಿಸಿ: ಮಧು ಬಂಗಾರಪ್ಪ

Date:

Madhu Bangarappa ಆಡಳಿತ ಯಂತ್ರ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಜನರ ಅರ್ಜಿಗಳಿಗೆ ತ್ವರಿತ ಸ್ಪಂದನೆ ನೀಡಿ, ಜನಮಾನಸಕ್ಕೆ ಇನ್ನಷ್ಟು ಹತ್ತಿರವಾಗುವ ಉದ್ದೇಶದಿಂದ ಈ ‘ಪ್ರಜಾ ಸೇವೆ’ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಶನಿವಾರದಂದು ಹೊಸನಗರದ ಈಡಿಗರ ಭವನದಲ್ಲಿ ಏರ್ಪಡಿಸಲಾಗಿದ್ದ ಹೊಸನಗರ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅಹವಾಲಿಗೂ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಹಾಗೂ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಣ್ಣ ಕೆಲಸಗಳಿಗಾಗಿ ರೈತರು, ವೃದ್ಧರು, ವಿಕಲಚೇತನರು ಹಾಗೂ ಬಡವರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳನ್ನು ಸಕಾರಣವಿಲ್ಲದೆ ಬಾಕಿ ಉಳಿಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಕಲಚೇತನರು, ವಯಸ್ಸಾದವರು, ಮಕ್ಕಳು ಸಭೆಯ ಯಾವುದೇ ಸಮಯದಲ್ಲಿ ವೇದಿಕೆಗೆ ಬಂದು ಅರ್ಜಿ ಸಲ್ಲಿಸಬಹುದು, ಅವರು ಸರತಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ ಎಂದರು.
ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜನರ ಸಮಸ್ಯೆಗಳು ಮತ್ತು ಅರ್ಜಿಗಳನ್ನು ವಿಲೇವಾರಿ ಮಾಡಲು ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಬರಬಾರದು; ಬದಲಿಗೆ “ಪ್ರಜಾ ಸೇವೆ” ಕಾರ್ಯಕ್ರಮದ ಮೂಲಕ ಆಡಳಿತವೇ ಜನರ ಮನೆ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಬೇಕು ಎಂಬ ದೃಢ ನಿರ್ಧಾರದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಜಿಗಳನ್ನು ತಹಶೀಲ್ದಾರ್, ಎಸಿ, ಡಿಸಿ, ಎಡಿಸಿ ಅಥವಾ ಎಸ್‌ಪಿ ಹಂತದಲ್ಲಿ ಯಾರಿಗೆ ಸಂಬಂಧಪಟ್ಟಿರುತ್ತದೆಯೋ ಅವರಿಗೆ ರೆಫರ್ ಮಾಡಲಾಗುವುದು. ನಿರ್ದಿಷ್ಟ ಅವಧಿಯೊಳಗೆ ಅರ್ಜಿದಾರರಿಗೆ ಮಾಹಿತಿ ಹಾಗೂ ಮುಕ್ತಾಯದ ವಿವರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿಗಳು ತಾವು ಕೇವಲ ರಾಜ್ಯದ ಮುಖ್ಯಮಂತ್ರಿಯಲ್ಲ, ಬದಲಿಗೆ ರಾಜ್ಯದ ಒಬ್ಬ ‘ಪ್ರಜಾ ಸೇವಕ’ ಎಂದು ಹೇಳಿರುವುದನ್ನು ಸ್ಮರಿಸಿದ ಅವರು, ತಾವೂ ಸಹ ತಾಲೂಕಿನ ಜನರ ಸೇವಕರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು. ಜನರ ಅಹವಾಲು ಮತ್ತು ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಪ್ರಜಾ ಸೇವೆಯ ಮೂಲಕ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಜೊತೆಗೆ ‘ಭೂ ಗ್ಯಾರಂಟಿ’ ಯೋಜನೆಯನ್ನು 6ನೇ ಗ್ಯಾರಂಟಿಯಾಗಿ ಜಾರಿಗೆ ತರಲಾಗಿದೆ. ಈಗಾಗಲೇ ಸಾಗರದಲ್ಲಿ ಸುಮಾರು 4,000 ಹಕ್ಕುಪತ್ರಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸನಗರದಲ್ಲಿ ಸಹ ಅರ್ಹರೆಲ್ಲರಿಗೂ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಬೇಕೆಂದು ತಿಳಿಸಿದ ಅವರು, ತಾಲೂಕು ಕೇಂದ್ರಗಳು, ಪಟ್ಟಣಗಳು ಮತ್ತು ನಗರಗಳಲ್ಲಿನ ದೊಡ್ಡ ಮಟ್ಟದ ಬಡಾವಣೆಗಳ ನಿವಾಸಿಗಳಿಗೂ ಹಕ್ಕುಪತ್ರ ದೊರೆಯುವಂತಾಗಬೇಕು ಎಂದರು. ಡಿಡಿಎಲ್‌ಆರ್, ಬಿಎಲ್‌ಒ ಮತ್ತು ರೆವೆನ್ಯೂ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು, ಬಾಕಿ ಉಳಿದಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಅರ್ಹ ರೈತರು ಮತ್ತು ನಾಗರಿಕರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಯಾವುದೇ ಅರ್ಜಿಗಳು ಬಾಕಿ ಉಳಿಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಸಾರ್ವಜನಿಕರಿಂದ ಹಲವು ಪ್ರಮುಖ ಅರ್ಜಿಗಳು ಸಲ್ಲಿಕೆಯಾದವು.

Madhu Bangarappa ಟಂಕಬೈಲು ಗ್ರಾಮದ ನಾಗರಾಜ್, ತಮ್ಮ ಮನೆ ಹತ್ತಿರ ರಾತ್ರಿ 9 ಗಂಟೆಯಾದರೂ ಜಲ್ಲಿ ಕ್ರಷರ್ ನಡೆಸುವುದರಿಂದ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮ ವಹಿಸುವಂತೆ ಅಹವಾಲು ಸಲ್ಲಿಸಿದರು. ಈ ವೇಳೆ ಸ್ಥಳದಲ್ಲಿ ಹಾಜರಿರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ನೋಟಿಸ್ ನೀಡುವಂತೆ ಸಚಿವರು ಸೂಚನೆ ನೀಡಿದರು. * ಹೆಬ್ಬಿಗೆ ಗ್ರಾಮದ ರಾಮಪ್ಪ ಎಂಬುವವರು 3 ಎಕರೆ ಬಗರ್ ಹುಕುಂ ಜಮೀನಿಗೆ ಹಕ್ಕುಪತ್ರ ನೀಡಲು ಮನವಿ ಸಲ್ಲಿಸಿದರು. ಕಲ್ಲೋಡಿ ಹಬ್ಬಿಗಲ್ ಗ್ರಾಮದ ಇಟ್ಟಕ್ಕಿ ಶ್ರೀನಿವಾಸ್ ಎಂಬುವವರು ತಮ್ಮ 1.20 ಗುಂಟೆ ಬಗರ್ ಹುಕುಂ ಜಮೀನಿಗೆ ಹಕ್ಕುಪತ್ರ ಲಭಿಸಿ 7 ವರ್ಷಗಳಾದರೂ ಖಾತೆ, ಪಹಣಿ ಆಗಿಲ್ಲ, ಮಾಡಿಸಿಕೊಡಬೇಕೆಂದು ಕೋರಿದರು. * ಮಸರೂರು ಗ್ರಾಮದ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಜೇನಮ್ಮ ಎಂಬುವವರು ತಾವು ಮಸರೂರು ಗ್ರಾಮದ ಸ.ನಂ. 4 ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಸದರಿ ಜಮೀನು 1982 ರಲ್ಲಿ ತಮ್ಮ ಹೆಸರಿಗೆ ಮಂಜೂರಾಗಿದ್ದರೂ ಈವರೆಗೆ ಹಕ್ಕುಪತ್ರ ನೀಡಿರುವುದಿಲ್ಲ, ಆದ್ದರಿಂದ ತಮಗೆ ಹಕ್ಕುಪತ್ರ ನೀಡಿ ಖಾತೆ ಪಹಣಿ ದಾಖಲು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

  • ನಗರ ಬಸ್ ಸ್ಟ್ಯಾಂಡ್ ಕಾಮಗಾರಿ ವಿಳಂಬವಾಗುತ್ತಿದೆ ಹಾಗೂ ತಡೆ ಮಾಡಲಾಗುತ್ತಿದ್ದು, ಶೀಘ್ರವಾಗಿ ಕೆಲಸ ಆರಂಭಿಸುವಂತೆ ನಿತಿನ್ ಮತ್ತು ಇತರರು ಅರ್ಜಿ ಸಲ್ಲಿಸಿದರು.
  • ಮಾರುತಿಪುರದ ಇಂದ್ರೇಶ್ ರವರು ಸರ್ವೇ ನಂ. 27 ರಲ್ಲಿ 94 ಸಿ ನೀಡುವಲ್ಲಿ ಅರಣ್ಯಾಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಅರ್ಜಿ ಸಲ್ಲಿಸಿದರು. * ಹೊಸನಗರ ತಾಲ್ಲೂಕಿನ ಗಂಗನಕೊಪ್ಪ ಗ್ರಾಮದ ಸರ್ವೇ ನಂ. 13 ರಲ್ಲಿರುವ ಸುಮಾರು 2 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಜಿ ಗ್ರಾ.ಪಂ. ಸದಸ್ಯರು ಸೇರಿದಂತೆ ಕೆಲವರು ಕಬಳಿಸಿದ್ದಾರೆಂದು ಗುಡ್ಡಿಕೊಪ್ಪ ಗ್ರಾಮಸ್ಥರು ದೂರಿತ್ತರು. * ಹೊಸನಗರ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಳ್ಗುಡ್ಡೆ ಗ್ರಾಮದ ನಿವಾಸಿ ರಾಜಪ್ಪ ತಾವು ಕೂಲಿ ಕೆಲಸ ಮಾಡುತ್ತಿದ್ದು, ಕಳೆದ ಸುಮಾರು 10 ವರ್ಷಗಳಿಂದ ಇದ್ದ ಬಿ.ಪಿ.ಎಲ್. ಕಾರ್ಡ್ ರದ್ದಾಗಿ ಎ.ಪಿ.ಎಲ್. ಕಾರ್ಡ್ ಮಂಜೂರಾಗಿರುವ ಬಗ್ಗೆ ನ್ಯಾಯ ಕೋರಿ ಮನವಿ ಸಲ್ಲಿಸಿದರು.
  • ಹೊಸನಗರ ತಾಲೂಕಿನ ಹೊಸನಾಡು ಗ್ರಾಮಕ್ಕೆ ಕೆಪಿಎಸ್ ಶಾಲೆ ಮಂಜೂರು ಮಾಡುವಂತೆ ಗ್ರಾಮಸ್ಥರು ಕೋರಿದರು. ನಗರ ಸರ್ಕಾರಿ ಪ್ರೌಢಶಾಲೆಗೆ ಕೆಪಿಎಸ್ ಶಾಲೆ ಮಂಜೂರು ಮಾಡುವಂತೆ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮನವಿ ಮಾಡಿದರು.
    ಇದಲ್ಲದೆ ಮಂಗಗಳ ಉಪಟಳ ತಪ್ಪಿಸುವಂತೆ ಸ್ಥಳೀಯ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ರಸ್ತೆ ಜಾಗದಲ್ಲಿ ಮನೆ ಕಟ್ಟಿರುವುದನ್ನು ತೆರವುಗೊಳಿಸಲು, ವಿದ್ಯುತ್ ಸಂಪರ್ಕ ಮತ್ತು ಓಡಾಡಲು ದಾರಿ ಬಿಡುತ್ತಿಲ್ಲವೆಂಬ ದೂರುಗಳು ಸೇರಿದಂತೆ ನೀರು ಸರಬರಾಜು, ಮೆಸ್ಕಾಂ, ರಸಗತೆ, ನೀರು, ಮನೆ, ಕೆಎಸ್‌ಆರ್‌ಟಿಸಿ, ಆಹಾರ, ಆರೋಗ್ಯ, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಹಲವು ಅಹವಾಲುಗಳು ಸಲ್ಲಿಕೆಯಾದವು.
  • 300 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ *
    ಅರ್ಜಿಗಳನ್ನು ಸ್ವೀಕರಿಸಲು 15 ಕೌಂಟರ್ ಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು‌. 300 ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ ಕ್ರಮಕ್ಕೆ ಸಲ್ಲಿಸಲಾಯಿತು.
    ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಎಂಎಡಿಬಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ, ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿ.ಪಂ. ಉಪ ಕಾರ್ಯದರ್ಶಿಗಳಾದ ಅನ್ನಪೂರ್ಣ, ಸುಜಾತ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಹೊಸನಗರ ತಹಶೀಲ್ದಾರ್ ಭರತ್ ರಾಜ್, ಜಿಲ್ಲಾ ಹಾಗೂ ತಾಲ್ಲೂಕು‌ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...

Shivamogga Karnataka Sangha ವಿದ್ವಾನ್ ಜಿ.ಎಸ್. ನಟೇಶ್ ಅವರಿಗೆ ಕರ್ನಾಟಕ ಸಂಘದ ಪ್ರತಿಷ್ಠಿತ “ನವಿಲುಗರಿ” ಪುರಸ್ಕಾರ ನೀಡಿಕೆ ಸಮಾರಂಭ

Shivamogga Karnataka Sangha ಶಿವಮೊಗ್ಗ ಕರ್ನಾಟಕ ಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ...

Madhu Bangarappa ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿ- ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಖಾಸಗಿ ಶಾಲೆಗಳ ಪೈಪೋಟಿಯನ್ನು...