ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ವಿಪತ್ತುಗಳ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಜಾಗತಿಕ ಅನುಭವದ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಸೂಕ್ತ ಸನ್ನದ್ಧತೆ ಅತ್ಯಗತ್ಯ. ಯಾವುದೇ ರೀತಿಯ ವಿಪತ್ತನ್ನು ಎದುರಿಸಲು ಮುನ್ನೆಚ್ಚರಿಕೆ ಹಾಗೂ ಪೂರ್ವಸಿದ್ಧತೆಯೇ ಪ್ರಮುಖ ಅಸ್ತ್ರಗಳಾಗಿವೆ ಎಂದು ಜಪಾನ್ನ ಅಸೋಸಿಯೇಷನ್ ಆಫ್ ಮೆಡಿಕಲ್ ಡಾಕ್ಟರ್ಸ್ ಆಫ್ ಏಷ್ಯಾ (ಎಎಂಡಿಎ) ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಶಿಗೆರು ಸುಗನಾಮಿ ಹೇಳಿದರು.
ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜಪಾನ್ನ ಎಎಂಡಿಎ ಸಹಯೋಗದಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಅಂತಾರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮ್ಮೇಳನ-2026‘ ಉದ್ಘಾಟಿಸಿ ಅವರು ಮಾತನಾಡಿದರು.
ವಿಪತ್ತು ಸಂಭವಿಸಿದ ನಂತರ ಪರಿಹಾರ ಕಾರ್ಯ ಆರಂಭಿಸುವುದಕ್ಕಿಂತ ಮುಂಚಿತವಾಗಿ ವೈದ್ಯಕೀಯ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಗೆ ಅಗತ್ಯ ತರಬೇತಿ ನೀಡಿ ಸಜ್ಜುಗೊಳಿಸಬೇಕು. ವಿಪತ್ತು ನಿರ್ವಹಣೆ ಕೇವಲ ಪರಿಹಾರ ಕಾರ್ಯಗಳಿಗೆ ಸೀಮಿತವಾಗದೆ, ಪೂರ್ವಸಿದ್ಧತೆ, ಸಂಪನ್ಮೂಲಗಳ ಸಂಗ್ರಹ, ತರಬೇತಿ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯಕ್ಕೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಸಂಸ್ಥೆಗಳ ಅನುಭವಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು. ವಿಪತ್ತುಗಳ ಸಂದರ್ಭದಲ್ಲಿ ಸ್ಥಳೀಯ ಆಡಳಿತ, ಸಮುದಾಯದ ನಾಯಕರು ಹಾಗೂ ಸ್ವಯಂಸೇವಕರ ನಡುವೆ ಉತ್ತಮ ಸಮನ್ವಯವಿದ್ದರೆ ವೈದ್ಯಕೀಯ ನೆರವು ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ವಿನಾಯಕ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಅಗತ್ಯ ಕೌಶಲಗಳನ್ನು ಕಲಿಸುವುದು ಮುಖ್ಯವಾಗಿದೆ. ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಸಾಮರ್ಥ್ಯ, ವೈದ್ಯಕೀಯ ಸಂಪನ್ಮೂಲಗಳ ನಿರ್ವಹಣೆ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಕೌಶಲಗಳನ್ನು ಬೆಳೆಸಬೇಕು ಎಂದು ಹೇಳಿದರು.
ಸುಬ್ಬಯ್ಯ ಸಂಶೋಧನಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ ಮಾತನಾಡಿ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಮತ್ತು ಎಎಂಡಿಎ ನಡುವೆ 2019ರಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಅಂದಿನಿಂದ ಎರಡೂ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಮಟ್ಟದ ಪರಿಣತಿ ಮತ್ತು ಅನುಭವಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಂಡು ವೈದ್ಯಕೀಯ ಸಂಶೋಧನೆ, ವಿಪತ್ತು ನಿರ್ವಹಣೆ ಹಾಗೂ ಸಮುದಾಯದ ಸನ್ನದ್ಧತೆಯನ್ನು ಬಲಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಜಿ ಹಿರಿಯ ಸಲಹೆಗಾರ್ತಿ ಡಾ. ಪೂಜಾ ಸಕ್ಸೇನಾ ಮಾತನಾಡಿ, ವಿಪತ್ತು ಸಂಭವಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ಏಕಕಾಲದಲ್ಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ತುರ್ತು ಚಿಕಿತ್ಸಾ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಔಷಧಗಳ ಲಭ್ಯತೆ ಹಾಗೂ ಅಗತ್ಯ ಸಿಬ್ಬಂದಿಯ ನಿಯೋಜನೆ ಕುರಿತು ಮುಂಚಿತವಾಗಿ ಸಮಗ್ರ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಎರಡು ದಿನಗಳ ಸಮ್ಮೇಳನದಲ್ಲಿ ವಿಪತ್ತು ಅಪಾಯ ತಗ್ಗಿಸುವಿಕೆ, ಪೂರ್ವಸಿದ್ಧತೆ, ತುರ್ತು ಪ್ರತಿಕ್ರಿಯೆ, ಪುನರ್ವಸತಿ, ಸಮುದಾಯದ ಸಹಭಾಗಿತ್ವ, ಹಾವು ಕಡಿತದ ತುರ್ತು ಚಿಕಿತ್ಸೆ ಹಾಗೂ ವಿಪತ್ತಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಮತ್ತು ಮನೋಸಾಮಾಜಿಕ ಬೆಂಬಲ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.
ಗುರುವಾರ ತಜ್ಞರ ಗೋಷ್ಠಿಗಳು, ನೀತಿ ಹ್ಯಾಕಥಾನ್, ಸಂಶೋಧನಾ ಪ್ರಬಂಧಗಳ ಮಂಡನೆ, ಪೋಸ್ಟರ್ ಪ್ರಸ್ತುತಿ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ, ಆರು ವಿಭಾಗಗಳಲ್ಲಿ ಪ್ರಾಯೋಗಿಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದ್ದು, ವಿಪತ್ತು ನಿರ್ವಹಣೆಯ ನೈಜ ಸವಾಲುಗಳನ್ನು ಎದುರಿಸುವ ಕೌಶಲಗಳನ್ನು ಕಲಿಯಲು ಭಾಗವಹಿಸುವವರಿಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಎಎಂಡಿಎ ಜಪಾನ್ನ ಡಾ. ಟೊಮೊಕೊ, ಎಎಂಡಿಎ ಇಂಡಿಯಾ ಅಧ್ಯಕ್ಷ ಡಾ. ಎಂ.ಎಸ್. ಕಾಮತ್, ಡಾ. ರಾಮಚಂದ್ರ ಕಾಮತ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡಾ. ಸೌರಭ್ ದಲಾಲ್, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿಕಟಪೂರ್ವ ಶೈಕ್ಷಣಿಕ, ಸಂಶೋಧನೆ ಮತ್ತು ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಆರ್.ಪಿ. ಪೈ, ಡಾ. ಕೆ.ಬಿ. ಸಂತೋಷ್, ಡಾ. ಸಂಜೀವ್ ಮಣಿಕಪ್ಪ ಸೇರಿದಂತೆ ವೈದ್ಯರು, ಸಂಶೋಧಕರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮ್ಮೇಳನದ ಮುಖ್ಯ ಪೋಷಕರಾಗಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ನಾಗೇಂದ್ರ ಹಾಗೂ ಸುಬ್ಬಯ್ಯ ಸಂಶೋಧನಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ಆರ್. ತೆಲಂಗ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘಟನಾ ಅಧ್ಯಕ್ಷರಾಗಿ ಡಾ. ನಿರಂಜನ್ ಕಾಂಬ್ಳೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಡಾ. ವಿದ್ಯಾ ನಿರಂಜನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
