Thursday, November 5, 2026
Thursday, November 5, 2026

ಭದ್ರಾವತಿ ವಿಐಎಸ್‌ಎಲ್‌ನಲ್ಲಿ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಣೆ

Date:

ಕೇಂದ್ರ ವಿಜಿಲೆನ್ಸ್ ಆಯೋಗ ಮತ್ತು ಕಾರ್ಪೊರೇಟ್ ವಿಜಿಲೆನ್ಸ್, ಎಸ್‌ಎಐಎಲ್ ನಿರ್ದೇಶನದಂತೆ ಭದ್ರಾವತಿಯ ವಿಐಎಸ್‌ಎಲ್‌ನಲ್ಲಿ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ ವಿಜಿಲೆನ್ಸ್ ಜಾಗೃತಿ ಸಪ್ತಾಹ–2026 ಅನ್ನು ಆಚರಿಸಲಾಯಿತು. ಈ ವರ್ಷದ ಸಪ್ತಾಹದ ಧ್ಯೇಯವಾಕ್ಯ “ಸಮೃದ್ಧಿಗಾಗಿ ಪ್ರಾಮಾಣಿಕತೆ” ಆಗಿತ್ತು.

ಇಸ್ಪಾತ್ ಭವನದ ಮುಂಭಾಗದಲ್ಲಿ ನಡೆದ ಉದ್ಘಾಟನಾ ಸಮಾರಂಭವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಿಜಿಲೆನ್ಸ್ ಮತ್ತು ಎಸಿಎಫ್ ವಿಭಾಗದ ಮಹಾಪ್ರಬಂಧಕ ರಘುನಾಥ್ ಅಷ್ಟಪುತ್ರೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಜಿಲೆನ್ಸ್ ಪ್ರತಿಜ್ಞೆ ಬೋಧಿಸಲಾಯಿತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ವಿಜಿಲೆನ್ಸ್ ಆಯುಕ್ತರ ಸಂದೇಶಗಳನ್ನು ಅಧಿಕಾರಿಗಳು ವಾಚಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಐಎಸ್‌ಎಲ್‌ನ ಮುಖ್ಯ ಮಹಾಪ್ರಬಂಧಕ (ಮಾನವ ಸಂಪನ್ಮೂಲ) ಹಾಗೂ ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಬಿ. ವಿಶ್ವನಾಥ್, ಮುಖ್ಯ ಮಹಾಪ್ರಬಂಧಕ (ವರ್ಕ್ಸ್) ಪ್ರಮೋದ್ ಕುಮಾರ್ ಸಿಂಗ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಗಣ್ಯರು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ನಮನ ಸಲ್ಲಿಸಿದರು.

ಮುಖ್ಯ ಅತಿಥಿ ಬಿ. ವಿಶ್ವನಾಥ್ ಮಾತನಾಡಿ, ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆಯ ಮಹತ್ವವನ್ನು ವಿವರಿಸಿದರು. ಜಾಗೃತಿ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ರ್ಯಾಲಿ ಆಯೋಜಿಸಲಾಗಿತ್ತು. ಸಾರ್ವಜನಿಕರಿಗಾಗಿ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ವಿಶೇಷ ಫೋಟೋ ಬೂತ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಸಪ್ತಾಹದ ಅಂಗವಾಗಿ ಉದ್ಯೋಗಿಗಳಿಗಾಗಿ ಪೋಸ್ಟರ್ ವಿನ್ಯಾಸ, ಪ್ರಬಂಧ ಬರವಣಿಗೆ, ರಂಗೋಲಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಕುಳಿತು ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.

ನವೆಂಬರ್ 3ರಂದು ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಹಿಳಾ ತಂಡವು “ಸಮೃದ್ಧಿಗಾಗಿ ಪ್ರಾಮಾಣಿಕತೆ” ಎಂಬ ಕನ್ನಡ ಕಿರು ನಾಟಕವನ್ನು ಪ್ರದರ್ಶಿಸಿತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು, ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸುವುದು ಹಾಗೂ ಭ್ರಷ್ಟಾಚಾರದ ಚಟುವಟಿಕೆಗಳನ್ನು ವಿಜಿಲೆನ್ಸ್ ಸಂಸ್ಥೆಗಳ ಗಮನಕ್ಕೆ ತರುವ ಸಂದೇಶವನ್ನು ನಾಟಕದ ಮೂಲಕ ಸಾರಲಾಯಿತು.

ಸಮಾರಂಭದಲ್ಲಿ ವಿಜಿಲೆನ್ಸ್ ಮಹಾಪ್ರಬಂಧಕ ರಘುನಾಥ್ ಬಿ. ಅಷ್ಟಪುತ್ರೆ ಅವರು ಸಪ್ತಾಹದ ಅಂಗವಾಗಿ ನಡೆದ ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು. ಅಧಿಕಾರಿಗಳು ಮಾತನಾಡಿ, ದಂಡನಾತ್ಮಕ ಕ್ರಮಗಳಿಗಿಂತ ಭ್ರಷ್ಟಾಚಾರ ತಡೆಗಟ್ಟುವ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾಮಾಣಿಕತೆ ಮತ್ತು ಸಮಗ್ರತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗೌರವ ಅತಿಥಿ ಟಿ. ರವಿಚಂದ್ರನ್ ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಮತ್ತು ತತ್ವಗಳನ್ನು ಬೆಳೆಸುವ ಅಗತ್ಯವಿದೆ. ಮಕ್ಕಳೇ ದೇಶದ ಭವಿಷ್ಯ ಎಂದು ತಿಳಿಸಿದರು.

ವಿಜಿಲೆನ್ಸ್ ಇಲಾಖೆಯ ಉಪ ಮಹಾಪ್ರಬಂಧಕ ಎಲ್. ಕುತಲನಾಥನ್ ಕಾರ್ಯಕ್ರಮ ನಿರೂಪಿಸಿದರು. ಜೂನಿಯರ್ ಎಂಜಿನಿಯರ್ ರಾಜಾ ರಾವ್ ವಂದಿಸಿದರು. ವಿಜಿಲೆನ್ಸ್ ಇಲಾಖೆಯು ಕಾರ್ಯಕ್ರಮವನ್ನು ಸಂಘಟಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...