Thursday, November 5, 2026
Thursday, November 5, 2026

1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಜೋಡಿಸುವ ಗುರಿ; 56 ಶಾಲೆಗಳ ಅಭಿವೃದ್ಧಿಗೆ ₹206.10 ಕೋಟಿ ವೆಚ್ಚದ ಸಿಎಂ ಡಿ.ಕೆ. ಶಿವಕುಮಾರ್

Date:

ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಲ್ಲಿನ ಮಕ್ಕಳಿಗೂ ಖಾಸಗಿ ಶಾಲೆಗಳ ಮಕ್ಕಳಿಗೆ ದೊರೆಯುವ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಹಾಗೂ ಕಲಿಕಾ ಸೌಲಭ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ಪ್ರತಿನಿಧಿಗಳು ಹಾಗೂ ವೈಯಕ್ತಿಕ ಕೊಡುಗೆದಾರರ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಒಟ್ಟು ₹206.10 ಕೋಟಿ ವೆಚ್ಚದಲ್ಲಿ 56 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ 15 ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು. ಇದಕ್ಕೂ ಮೊದಲು 2026ರಲ್ಲಿ ₹85 ಕೋಟಿ ವೆಚ್ಚದಲ್ಲಿ 33 ಶಾಲೆಗಳ ಅಭಿವೃದ್ಧಿಗೆ 18 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೆ, ₹64 ಕೋಟಿ ವೆಚ್ಚದಲ್ಲಿ 23 ಶಾಲೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ 12 ಒಡಂಬಡಿಕೆಗಳಿಗೆ ಶೀಘ್ರದಲ್ಲೇ ಸಹಿ ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಸಮಾಜದ ವಿವಿಧ ವಲಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಈ ಕಾರ್ಯದಲ್ಲಿ ಪಾಲುದಾರರಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಅವರ ಭವಿಷ್ಯ ರೂಪುಗೊಳ್ಳುವುದರ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೂ ಬಲ ಸಿಗಲಿದೆ ಎಂದು ಹೇಳಿದರು.

1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಖಾಸಗಿ ಶಾಲೆಗಳ ಮಕ್ಕಳೊಂದಿಗೆ ಕಲಿಯುವ, ಸ್ಪರ್ಧಿಸುವ ಅವಕಾಶಗಳನ್ನು ಸೃಷ್ಟಿಸಬೇಕು. ರಾಜ್ಯದ ಸುಮಾರು 6,000 ಗ್ರಾಮ ಪಂಚಾಯಿತಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಒಟ್ಟು 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆಯಿದ್ದು, ಮೊದಲ ಹಂತದಲ್ಲಿ 1,000 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಪ್ರಯತ್ನದ ಉತ್ತಮ ಫಲಿತಾಂಶ ಕಾಣಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಯಾವ ಸರ್ಕಾರಿ ಶಾಲೆಯನ್ನು ದತ್ತು ಪಡೆಯಬೇಕು ಎಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ. ತಮ್ಮ ಅನುಕೂಲ, ಆರ್ಥಿಕ ಸಾಮರ್ಥ್ಯ ಹಾಗೂ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಶಾಲಾ ಕಟ್ಟಡ ನಿರ್ಮಾಣಕ್ಕೆ ₹5ರಿಂದ ₹10 ಕೋಟಿ ವೆಚ್ಚ ಮಾಡಲು ಸಾಧ್ಯವಾಗದಿದ್ದರೂ ಚಿಂತಿಸಬೇಕಿಲ್ಲ. ತಮ್ಮಲ್ಲಿರುವ ಪರಿಣತ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬಹುದು. ಹತ್ತು ಮಂದಿ ಶಿಕ್ಷಕರನ್ನು ನಿಯೋಜಿಸಿ ಅವರ ವೇತನವನ್ನೂ ಖಾಸಗಿ ಸಂಸ್ಥೆಗಳೇ ಭರಿಸಬಹುದು. ಖಾಸಗಿ ಶಾಲೆಗಳ ಹೆಚ್ಚುವರಿ ಬಸ್‌ಗಳು, ಪ್ರಯೋಗಾಲಯದ ಉಪಕರಣಗಳು, ಕಂಪ್ಯೂಟರ್‌ಗಳು ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ಸರ್ಕಾರಿ ಶಾಲೆಗಳಿಗೆ ನೀಡುವ ಮೂಲಕ ನೆರವಾಗಬಹುದು. ಇದು ಹಣಕಾಸಿನ ನೆರವಿನ ಜತೆಗೆ ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯಕ್ಕೂ ವೇದಿಕೆಯಾಗಲಿದೆ ಎಂದು ವಿವರಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆಯಾಗಲಿ

ರಾಜ್ಯದಲ್ಲಿ ವಾರ್ಷಿಕ ಸುಮಾರು ₹8,800 ಕೋಟಿ ಸಿಎಸ್‌ಆರ್ ನಿಧಿ ಲಭ್ಯವಿದ್ದು, ಈ ಹಣದ ಸದ್ಬಳಕೆಗೆ ಸರ್ಕಾರ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿರುವ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ, ಸಿಎಸ್‌ಆರ್ ನಿಧಿಯ ಮೊದಲ ಆದ್ಯತೆಯಾಗಿ ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಯನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ. ಹಲವು ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿವೆ. ಇದೀಗ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೂ ಮುಂದೆ ಬರಬೇಕು ಎಂದು ಹೇಳಿದರು.

ಸಿಎಸ್‌ಆರ್ ನಿಧಿಯ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಕೆಲವು ಕಂಪನಿಗಳು ಮುಂಬೈ, ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕಚೇರಿ ತೆರೆದು, ಕರ್ನಾಟಕದಲ್ಲಿ ನೋಂದಣಿ ಮಾಡಿಕೊಂಡು ಇಲ್ಲಿ ಗಳಿಸಿದ ಹಣವನ್ನು ಬೇರೆಡೆ ವಿನಿಯೋಗಿಸುತ್ತಿವೆ. ಈ ರೀತಿಯ ಹಣದ ವರ್ಗಾವಣೆ ಮತ್ತು ದುರ್ಬಳಕೆಗೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಸಂಗ್ರಹವಾಗುವ ಸಿಎಸ್‌ಆರ್ ನಿಧಿ ರಾಜ್ಯದ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣ ಶಿಕ್ಷಣದ ಉನ್ನತೀಕರಣಕ್ಕೆ ಬಳಕೆಯಾಗುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳ ಹೆಸರಿಡಲು ಅವಕಾಶ

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಸರ್ಕಾರಿ ಶಾಲೆಗಳಲ್ಲಿ ಕಂಪನಿಗಳ ಸಿಎಸ್‌ಆರ್ ನಿಧಿಯ ಮೂಲಕ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಈ ಪೈಕಿ ಶೇ.10ರಷ್ಟು ಶಾಲೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಎಂಟು ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು 12 ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.

ಟೊಯೊಟೊ ಕಂಪನಿಯು ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ಅಭಿವೃದ್ಧಿಗೆ ನೆರವು ನೀಡುತ್ತಿದ್ದು, ಒಂದೊಂದು ಶಾಲೆಗೆ ₹10ರಿಂದ ₹15 ಕೋಟಿ ಹೂಡಿಕೆ ಮಾಡುತ್ತಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಯೋಜನಾ ನಕ್ಷೆಯನ್ನು ಸರ್ಕಾರವೇ ಒದಗಿಸಿದೆ. ಆದರೆ, ಸಿಎಸ್‌ಆರ್ ಹಣವನ್ನು ಸರ್ಕಾರ ನೇರವಾಗಿ ಸ್ವೀಕರಿಸುವುದಿಲ್ಲ. ಸಂಬಂಧಪಟ್ಟ ಸಂಸ್ಥೆಗಳು ನಿಗದಿತ ಉದ್ದೇಶಕ್ಕೆ ನೇರವಾಗಿ ನೆರವು ನೀಡಲಿವೆ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದ ನೆರವು ನೀಡಿದರೆ, ತಮ್ಮ ಸಂಸ್ಥೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ ‘ಹೆಗ್ಗನೂರು ಸರ್ಕಾರಿ ಟೊಯೊಟೊ ಶಾಲೆ’ ಎಂದು ಹೆಸರಿಡಲು ಅವಕಾಶ ನೀಡಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳ ಪಾಲುದಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಖಾಸಗಿ ಶಾಲೆಗಳ ಕೊಡುಗೆಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಿ

ಖಾಸಗಿ ಶಾಲೆಗಳ ಬಗ್ಗೆ ಸರ್ಕಾರ ಮೃದು ಧೋರಣೆ ಹೊಂದಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಅದರಲ್ಲಿರುವ ಆರ್ಥಿಕ ಸವಾಲುಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ₹50 ಸಾವಿರದಿಂದ ₹2 ಲಕ್ಷದವರೆಗೆ ಶುಲ್ಕ ಪಡೆಯುತ್ತಿರುವುದೂ ಗೊತ್ತಿದೆ. ಇಂತಹ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ಖಾಸಗಿ ಶಾಲೆಗಳು ಈ ರಾಜ್ಯಕ್ಕೆ ಉತ್ತಮ ಹೆಸರು ತಂದುಕೊಟ್ಟಿವೆ. ಅಲ್ಲಿನ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಸಾಮರ್ಥ್ಯ ಮತ್ತು ಮೂಲಸೌಕರ್ಯ ಪ್ರಶಂಸನೀಯವಾಗಿವೆ. ಈ ಗುಣಮಟ್ಟದ ಒಂದು ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ತಪ್ಪುತ್ತದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ತಾವು ಬೆಳೆದ ಊರು ಮತ್ತು ಅಲ್ಲಿನ ಶಾಲೆಗಳಿಗೆ ಏನಾದರೂ ಕೊಡುಗೆ ನೀಡಬೇಕು. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ನೆರವಾಗುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ₹2,000 ಕೋಟಿ ಹೂಡಿಕೆ

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್‌ನಿಂದ ₹2,000 ಕೋಟಿ ಸಾಲ ಪಡೆದು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ₹70 ಸಾವಿರದಿಂದ ₹1.5 ಲಕ್ಷದವರೆಗೆ ವೇತನ ನೀಡಲಾಗುತ್ತಿದ್ದರೂ, ಶಿಕ್ಷಣದ ಗುಣಮಟ್ಟ ಇನ್ನಷ್ಟು ಸುಧಾರಿಸಬೇಕಿದೆ. ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿಯೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುವ ನಾವೆಲ್ಲರೂ ಕೇವಲ ಟ್ರಸ್ಟಿಗಳು. ಇಂದು ನಾವು ಇರುತ್ತೇವೆ, ನಾಳೆ ಬೇರೆಯವರು ಬರುತ್ತಾರೆ. ಆದರೆ, ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಹೀಗಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳೊಂದಿಗೆ ಪಾಲುದಾರರಾಗಿ ಕೆಲಸ ಮಾಡಬೇಕು. ಒಂದು ಖಾಸಗಿ ಶಾಲೆಯು ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಅವಕಾಶವಿದೆ. ನಿಮ್ಮ ಶಾಲೆಗಳಲ್ಲಿರುವ ಶಿಕ್ಷಣದ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಿಗೂ ತಲುಪಿಸುವುದು ಪ್ರಮುಖ ಗುರಿಯಾಗಬೇಕು ಎಂದರು.

ರಾಜ್ಯ ಸರ್ಕಾರ ಜಾಗತಿಕ ಹೂಡಿಕೆ ಹಾಗೂ ಅನಿವಾಸಿ ಭಾರತೀಯರ ಸಹಭಾಗಿತ್ವಕ್ಕೆ ಪ್ರತ್ಯೇಕ ಇಲಾಖೆ ಆರಂಭಿಸಿದೆ. ವಿದೇಶಗಳಲ್ಲಿ ನೆಲೆಸಿರುವ ಅನೇಕರು ತಮ್ಮ ಊರುಗಳಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ. ಇಂತಹ ಪ್ರಯತ್ನಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರಾಮೀಣ ಶಿಕ್ಷಣಕ್ಕೆ ಆದ್ಯತೆ

ಬೆಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ನಗರದಲ್ಲಿ ರಸ್ತೆ ವಿಸ್ತರಣೆಯ ಪ್ರಮಾಣ ಸುಮಾರು ಶೇ.8ರಷ್ಟಿದ್ದರೆ, ಮೈಸೂರಿನಲ್ಲಿ ಇದು ಶೇ.18ರಿಂದ ಶೇ.20ರಷ್ಟಿದೆ. ಬೆಂಗಳೂರಿನಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆ ಹಾಗೂ 1.20 ಕೋಟಿಗೂ ಅಧಿಕ ವಾಹನಗಳಿರುವುದರಿಂದ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿದೆ. ಮಕ್ಕಳನ್ನು ಶಾಲೆಗೆ ತಲುಪಿಸಲು ಪೋಷಕರು ಕೆಲವೊಮ್ಮೆ ಒಂದು ಗಂಟೆಗೂ ಹೆಚ್ಚು ಸಮಯ ವ್ಯಯಿಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ಉದ್ಯೋಗ ಮತ್ತು ಗುಣಮಟ್ಟದ ಶಿಕ್ಷಣದ ಹುಡುಕಾಟವೇ ಬೆಂಗಳೂರಿನ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅದೇ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲೇ ದೊರೆತರೆ ಜನರು ನಗರಗಳಿಗೆ ವಲಸೆ ಬರುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ಬೆಂಗಳೂರಿನ ಮೇಲಿನ ಜನಸಂಖ್ಯೆ, ವಾಹನ ದಟ್ಟಣೆ ಹಾಗೂ ಮೂಲಸೌಕರ್ಯಗಳ ಒತ್ತಡವನ್ನು ನಿಯಂತ್ರಿಸಬಹುದು ಎಂದರು.

ಹಿಂದೆ ಬೆಂಗಳೂರಿನ ಜನಸಂಖ್ಯೆ ಸುಮಾರು 40 ಲಕ್ಷದಷ್ಟಿತ್ತು. ಇಂದು ಅದು 1.4 ಕೋಟಿಗೂ ಮೀರಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, 2047ರ ವೇಳೆಗೆ ರಾಜ್ಯದ ನಗರ ಜನಸಂಖ್ಯೆ ಶೇ.69ರಿಂದ ಶೇ.70ರಷ್ಟು ತಲುಪುವ ಸಾಧ್ಯತೆಯಿದೆ. ಈ ಬೆಳವಣಿಗೆಯನ್ನು ಸಮತೋಲನಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿಯೇ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಮತ್ತು ಸುರಂಗ ರಸ್ತೆ ಯೋಜನೆಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ರಾಜಕೀಯ ವಿರೋಧ ವ್ಯಕ್ತವಾಗುತ್ತಿದ್ದರೂ, ನಗರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕ ಸಮಾಜದ ಪ್ರಮುಖ ಸ್ತಂಭ

ಪ್ರಜಾಪ್ರಭುತ್ವಕ್ಕೆ ನಾಲ್ಕು ಸ್ತಂಭಗಳಿರುವಂತೆ ಸಮಾಜದ ಅಭಿವೃದ್ಧಿಗೂ ಕೃಷಿಕ, ಕಾರ್ಮಿಕ, ಸೈನಿಕ ಮತ್ತು ಶಿಕ್ಷಕರು ಪ್ರಮುಖ ಸ್ತಂಭಗಳಾಗಿದ್ದಾರೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ. ಮುಂದಿನ ಪೀಳಿಗೆಯ ವ್ಯಕ್ತಿತ್ವ, ಜ್ಞಾನ, ಶಿಸ್ತು ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ ಶಿಕ್ಷಕರು ರಾಜ್ಯ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಹೇಳಿದರು.

ಇದೇ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೆ ಮಾತನಾಡುವಾಗ, ವಿಶ್ವದ ನಾಯಕರು ದೆಹಲಿಗೆ ಬಂದು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಮುಂದೆ ವಿಶ್ವದ ನಾಯಕರು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ತೆರಳುವ ಕಾಲ ಬರಲಿದೆ ಎಂದು ಹೇಳಿದ್ದರು. ಇಂದು ಆ ಮಾತು ವಾಸ್ತವವಾಗುತ್ತಿದೆ. ದೇಶದಲ್ಲಿರುವ 140 ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆಗಳ ಪೈಕಿ 38 ಶಾಲೆಗಳು ಕರ್ನಾಟಕದಲ್ಲಿವೆ ಎಂದು ತಿಳಿಸಿದರು.

ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳನ್ನು ಕಂಡು ಅಚ್ಚರಿಗೊಂಡಿದ್ದೇನೆ. ನಮ್ಮ ಸರ್ಕಾರಿ ಶಾಲೆಗಳ ಮಕ್ಕಳು ಯಾರಿಗಿಂತಲೂ ಕಡಿಮೆಯಿಲ್ಲ. ಅವರ ಪ್ರತಿಭೆ, ಸಾಮರ್ಥ್ಯ ಮತ್ತು ಶಿಸ್ತು ಅತ್ಯುತ್ತಮವಾಗಿದೆ. ಇಂತಹ ಮಕ್ಕಳನ್ನು ರಾಜ್ಯೋತ್ಸವಕ್ಕೆ ಮಾತ್ರ ಸೀಮಿತಗೊಳಿಸದೆ ದಸರಾ ಸೇರಿದಂತೆ ರಾಜ್ಯಮಟ್ಟದ ಪ್ರಮುಖ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಇಂದಿನ ಮಕ್ಕಳ ಬುದ್ಧಿಮತ್ತೆ ಮತ್ತು ಸಾಮರ್ಥ್ಯ ಅದ್ಭುತವಾಗಿದೆ. ಅವರಿಗೆ ಸೂಕ್ತ ಅವಕಾಶ, ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷಣ ನೀಡಿದರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಅಂತಹ ಅವಕಾಶ ದೊರೆಯಬೇಕು. ಮುಂದಿನ ಎರಡು-ಮೂರು ವರ್ಷಗಳಲ್ಲಿ ಕನಿಷ್ಠ 1,000 ಸರ್ಕಾರಿ ಶಾಲೆಗಳನ್ನು ಸಿಎಸ್‌ಆರ್ ಯೋಜನೆಯಡಿ ಅಭಿವೃದ್ಧಿಪಡಿಸಿದರೆ ಕರ್ನಾಟಕ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಶಾಲೆಗಳ ಅಭಿವೃದ್ಧಿಯಿಂದ ವಲಸೆ ನಿಯಂತ್ರಣ

ಚಾಲಕರು, ಸಣ್ಣ ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಪೋಷಕರಿಗೂ ತಮ್ಮ ಮಕ್ಕಳ ಉತ್ತಮ ಶಿಕ್ಷಣವೇ ದೊಡ್ಡ ಆಸ್ತಿ. ಉತ್ತಮ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳಿಗಾಗಿ ಕುಟುಂಬಗಳು ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುತ್ತಿವೆ. ಗ್ರಾಮೀಣ ಭಾಗದಲ್ಲಿಯೇ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆತರೆ ಕನಿಷ್ಠ 15 ವರ್ಷಗಳವರೆಗೆ ಮಕ್ಕಳು ತಮ್ಮ ಊರುಗಳಲ್ಲಿಯೇ ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸಬಹುದು. ಇದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಜತೆಗೆ ನಗರಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದರು.

ರಾಜ್ಯದ 6,000 ಗ್ರಾಮ ಪಂಚಾಯಿತಿಗಳನ್ನು ಗುರಿಯಾಗಿಸಿಕೊಂಡು, ಪಂಚಾಯಿತಿಗಳನ್ನು ಮೂರು ವಿಭಾಗಗಳ ಗುಂಪುಗಳಾಗಿ ವಿಂಗಡಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು. ಈ ಯೋಜನೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಮತ್ತು ಸ್ಥಳೀಯ ದಾನಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

‘ಬಿಯಾಂಡ್ ಬೆಂಗಳೂರು’ ಮೂಲಕ ಗ್ರಾಮೀಣ ಶಾಲೆಗಳಿಗೆ ನೆರವು

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಕೇವಲ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಬಾರದು. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದೆ ಬರಬೇಕು. ಶಾಲಾ ಕಟ್ಟಡಗಳ ನಿರ್ಮಾಣ, ಶಿಕ್ಷಕರ ವೇತನ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಮತ್ತು ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವು ನೀಡಬಹುದು ಎಂದು ಮನವಿ ಮಾಡಿದರು.

ಜಿಲ್ಲಾ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ನೇರವಾಗಿ ಒಡಂಬಡಿಕೆ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಇದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಶಾಲೆಗಳ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಜಾಗತಿಕ ಹೂಡಿಕೆದಾರರು ಮತ್ತು ಎನ್‌ಆರ್‌ಐಗಳಿಗಾಗಿ ಪ್ರತ್ಯೇಕ ಇಲಾಖೆ

ಕರ್ನಾಟಕಕ್ಕೆ ಹೆಚ್ಚಿನ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ಅನಿವಾಸಿ ಭಾರತೀಯರು ರಾಜ್ಯದಲ್ಲಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಕೈಜೋಡಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಜಾಗತಿಕ ಹೂಡಿಕೆದಾರರು ಮತ್ತು ಎನ್‌ಆರ್‌ಐ ಇಲಾಖೆ ಆರಂಭಿಸಲಾಗಿದೆ.

ಹೂಡಿಕೆ ಪ್ರಸ್ತಾವನೆಗಳ ಪರಿಶೀಲನೆ ಹಾಗೂ ಪ್ರೋತ್ಸಾಹಕಗಳ ಮಂಜೂರಾತಿಗೆ ವ್ಯವಸ್ಥೆ ರೂಪಿಸಲಾಗಿದೆ. ₹500 ಕೋಟಿವರೆಗಿನ ಹೂಡಿಕೆ ಪ್ರಸ್ತಾವನೆಗಳ ಕುರಿತು ಸಂಬಂಧಪಟ್ಟ ಸಚಿವರು ನಿರ್ಧಾರ ಕೈಗೊಳ್ಳಲಿದ್ದು, ಅದಕ್ಕಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳು ಮುಖ್ಯಮಂತ್ರಿಗಳ ಮಟ್ಟದಲ್ಲಿ ಪರಿಶೀಲನೆಯಾಗಲಿವೆ. ಕಳೆದ ನಾಲ್ಕೈದು ತಿಂಗಳಲ್ಲಿ ಸುಮಾರು ₹10,000 ಕೋಟಿ ಹೂಡಿಕೆ ಮಾಡಲು ಮುಂದಾಗಿರುವ ಕಂಪನಿಗಳಿಗೆ ಶೇ.30ರವರೆಗೆ ಪ್ರೋತ್ಸಾಹಕ ನೀಡಲು ಸಮ್ಮತಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಜಾಗತಿಕ ಮಟ್ಟದ ಪ್ರತಿಭೆಗಳ ಕೇಂದ್ರವಾಗಿದೆ. ನಗರದಲ್ಲಿ ಸುಮಾರು 2 ಲಕ್ಷ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಹಾಗೂ ಹೊರರಾಜ್ಯಗಳ 45 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಮುಂಬೈ ಮತ್ತು ನ್ಯೂಯಾರ್ಕ್‌ನಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಚೇರಿ ಸ್ಥಳಾವಕಾಶ ಮತ್ತು ಜೀವನ ವೆಚ್ಚ ಹೂಡಿಕೆದಾರರಿಗೆ ಅನುಕೂಲಕರವಾಗಿದೆ. ರಾಜ್ಯದ ಮಾನವ ಸಂಪನ್ಮೂಲ, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಉತ್ತಮ ವಾತಾವರಣ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದರು.

ಬೆಂಗಳೂರು ಸುರಕ್ಷಿತ ಹೂಡಿಕೆಯ ತಾಣ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಹತ್ತು ವರ್ಷಗಳ ತೆರಿಗೆ ವಿನಾಯಿತಿ ನೀಡಲಾಗಿತ್ತು. ಸೆಪ್ಟೆಂಬರ್ 11ರ ಅಮೆರಿಕದ ಮೇಲಿನ ದಾಳಿಯ ನಂತರ ಅಮೆರಿಕದ ಉದ್ಯಮಿಗಳು ಭಾರತಕ್ಕೆ ಬಂದು ಸಭೆ ನಡೆಸಿದ್ದರು. ಆಗ ಅಮೆರಿಕದ ರಾಯಭಾರಿಯೊಬ್ಬರು ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರು ನ್ಯೂಯಾರ್ಕ್‌ಗಿಂತಲೂ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ. ಇಲ್ಲಿ ಹೂಡಿಕೆ ಮಾಡುವ ಒಂದು ರೂಪಾಯಿ ಹತ್ತು ರೂಪಾಯಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.

ಅಂದು ಅಮೆರಿಕದ ಉದ್ಯಮಿಗಳು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಬಳಿ ಬೆಂಗಳೂರಿನಲ್ಲಿ ಹತ್ತು ಅಂತರರಾಷ್ಟ್ರೀಯ ಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿದ್ದರು. ವಿಶ್ವದಲ್ಲೇ ಅತ್ಯುತ್ತಮ ಹವಾಮಾನ, ಉತ್ತಮ ಸಂಸ್ಕೃತಿ, ಮಾನವ ಸಂಪನ್ಮೂಲ, ವೈದ್ಯಕೀಯ ಸೌಲಭ್ಯಗಳು ಹಾಗೂ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಬೆಂಗಳೂರು ಸುರಕ್ಷಿತ ಹೂಡಿಕೆಯ ತಾಣವಾಗಿದೆ ಎಂದು ಹೇಳಿದರು.

ಕಂಪನಿಗಳಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧ

ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಅಗತ್ಯ ಜಮೀನು, ಪ್ರೋತ್ಸಾಹಕಗಳು ಹಾಗೂ ಅನುಮತಿಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಕಾನೂನುಬದ್ಧವಾಗಿ ಲಾಭ ಗಳಿಸುತ್ತಿರುವ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಗ್ರಾಮೀಣ ಮಕ್ಕಳ ಶಿಕ್ಷಣದ ಅಭಿವೃದ್ಧಿಗೂ ನೆರವಾಗಬೇಕು. ಸರ್ಕಾರ ಮತ್ತು ಉದ್ಯಮ ವಲಯದ ಸಹಭಾಗಿತ್ವದಿಂದ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ತಿಳಿಸಿದರು.

ಖಾಲಿ ಕಾಗದದ ಮೇಲೆ ಒಪ್ಪಂದಗಳಿಗೆ ಸಹಿ ಹಾಕಿಲ್ಲ

ದಾವೋಸ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ತಾವು ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಖಾಲಿ ಕಾಗದಗಳ ಮೇಲೆ ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಬದಲಿಗೆ ಹೂಡಿಕೆದಾರರನ್ನು ಬೆಂಗಳೂರಿಗೆ ಆಹ್ವಾನಿಸಿ, ಇಲ್ಲಿನ ವಾಸ್ತವ ಪರಿಸ್ಥಿತಿ ಪರಿಶೀಲಿಸಿ, ಚರ್ಚೆಯ ಮೂಲಕ ಹೂಡಿಕೆ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಆಹ್ವಾನಿಸಿದರೂ ಕರ್ನಾಟಕವನ್ನು ಬಿಟ್ಟು ಬೇರೆ ರಾಜ್ಯಗಳಿಗೆ ತೆರಳುವ ಉದ್ದೇಶವಿಲ್ಲ. ಕರ್ನಾಟಕದಲ್ಲಿರುವ ಪ್ರತಿಭೆ, ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ ವ್ಯವಸ್ಥೆ ಮತ್ತು ಉತ್ತಮ ವಾತಾವರಣ ದೇಶದ ಬೇರೆಡೆ ಅಪರೂಪ ಎಂದು ಹೇಳಿದರು.

ಕರ್ನಾಟಕಕ್ಕೆ ಬಂದ ಕಂಪನಿಗಳು ಮುಚ್ಚಿದ ಉದಾಹರಣೆ ಇಲ್ಲ

ರಾಜ್ಯದಲ್ಲಿ ಜಿಎಸ್‌ಟಿ ಅಥವಾ ಆದಾಯ ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊರತುಪಡಿಸಿದರೆ, ಕರ್ನಾಟಕಕ್ಕೆ ಬಂದು ಉದ್ಯಮ ಆರಂಭಿಸಿದ ಯಾವುದೇ ಕಂಪನಿಯೂ ನಷ್ಟ ಅನುಭವಿಸಿ ಮುಚ್ಚಿರುವ ಅಥವಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಹೋಗಿರುವ ಉದಾಹರಣೆ ಇಲ್ಲ ಎಂಬುದು ನಮ್ಮ ವಿಶ್ವಾಸ. ಸರ್ಕಾರದ ನೀತಿ, ಆಲೋಚನೆ ಅಥವಾ ಕಾರ್ಯಕ್ರಮಗಳಲ್ಲಿ ಸುಧಾರಣೆ ಅಗತ್ಯವಿದ್ದರೆ ಉದ್ಯಮಿಗಳು ಮುಕ್ತವಾಗಿ ಸಲಹೆ ನೀಡಬಹುದು. ವೇದಿಕೆಯಲ್ಲಿಯೇ ಕುಳಿತು ಎರಡು ಗಂಟೆಗಳ ಕಾಲ ಚರ್ಚಿಸಿ, ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಗ್ರಾಮೀಣ ಶಾಲೆಗಳ ಸಬಲೀಕರಣ ಮತ್ತು ಜಾಗತಿಕ ಮಟ್ಟದ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಈ ಕಾರ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಹಾಗೂ ಸಮಾಜದ ಪ್ರತಿಯೊಂದು ವಲಯವೂ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಎಸ್. ಮಧು ಬಂಗಾರಪ್ಪ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರ ಜಿ.ಸಿ. ಚಂದ್ರಶೇಖರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಶಾಲಾ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಶಾಲಾ ಶಿಕ್ಷಣ ಆಯುಕ್ತೆ ಕೆ. ವಿದ್ಯಾಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...