ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ದಾವಣಗೆರೆ ಮೂಲದ ಇಬ್ಬರು ಯುವಕರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.
ದಾವಣಗೆರೆ ಮೂಲದ ಶಿವು (22) ಹಾಗೂ ರುದ್ರೇಶ್ (24) ಮೃತಪಟ್ಟ ಯುವಕರು. ಗಾರೆ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದಿದ್ದ ಇಬ್ಬರು ಯುವಕರು ಸೋಮವಾರ ಸಂಜೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಸೋಮವಾರ ರಾತ್ರಿ ಕತ್ತಲಾದ ಕಾರಣ ಹುಡುಕಾಟಕ್ಕೆ ತೊಂದರೆಯಾಗಿತ್ತು. ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿ ಇಡೀ ದಿನ ಕಾರ್ಯಾಚರಣೆ ನಡೆಸಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದರು. ಆದರೆ, ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದ ವೇಳೆ ಬಾಳೆಬೈಲು ಬೈಪಾಸ್ ಸೇತುವೆ ಸಮೀಪ ಇಬ್ಬರ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ತೀರ್ಥಹಳ್ಳಿಯ ಶವಾಗಾರಕ್ಕೆ ರವಾನಿಸಲಾಗಿದೆ.
ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
