ಪರಿಶಿಷ್ಟ ಪಂಗಡಗಳ ಜನರನ್ನು ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ರಕ್ಷಿಸುವುದು ಮತ್ತು ಅವರ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯಿಂದ ಉತ್ತೇಜಿಸುವುದು ಸರ್ಕಾರದ ಹಾಗೂ ಸಂಬಂಧಿತ ಇಲಾಖಾ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಅವರು ಹೇಳಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯೋಜನೆಗಳ ಅನುಷ್ಠಾನದ ಕುರಿತು ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶತಮಾನಗಳಿಂದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಉಳಿದಿರುವ ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವುದು, ಸಾಕ್ಷರತೆ ಪ್ರಮಾಣ ತುಂಬಾ ಕಡಿಮೆ ಇರುವ ಪ್ರದೇಶಗಳಲ್ಲಿ ವಿಶೇಷ ಶಾಲೆ, ಹಾಸ್ಟೆಲ್ ಸೌಲಭ್ಯ ಒದಗಿಸಿ, ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು, ಭೂಮಿ ಇಲ್ಲದ, ಕೃಷಿಯನ್ನೇ ನಂಬಿರುವ ಜನರಿಗೆ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ನೆರವು ನೀಡಿ, ಅವರ ಬಡತನ ನಿವಾರಿಸಲು ಸರ್ಕಾರವು ಈಗಾಗಲೇ ರೂಪಿಸಲಾದ ಕಾರ್ಯಕ್ರಮಗಳನ್ನು ಕ್ರಮಬದ್ದವಾಗಿ ಕಾಲಮಿತಿಯಲ್ಲಿ ಅನುಷ್ಟಾನಗೊಳಿಸುವುದು ಇಂದಿನ ತುರ್ತು ಅಗತ್ಯಗಳಲ್ಲೊಂದಾಗಿದೆ ಎಂದರು.
ಜಿಲ್ಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇರುವ ಕೃಷಿಕರು, ಅವರು ವಿವಿಧ ಯೋಜನೆಗಳಲ್ಲಿ ಪಡೆದುಕೊಂಡಿರುವ ಸೌಲಭ್ಯಗಳು, ಯೋಜನಾ ವಿವರಗಳನ್ನು ಹೊಂದಿರಬೇಕು ಎಂದ ಅವರು, ಅವರು ಹೊಂದಿರುವ ಭೂವಿಸ್ತೀರ್ಣದ ಮಾಹಿತಿಯನ್ನು ವಿವರವಾಗಿ ಹೊಂದಿರಬೇಕು. ಈ ಎಲ್ಲಾ ಮಾಹಿತಿಗಳು ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳ ಅನುಷ್ಠಾನಕ್ಕಾಗಿ ನಿಗಧಿಪಡಿಸಿದ ಕಾಲಮಿತಿಯಲ್ಲಿ ಬಳಸಬೇಕು. ಫಲಾನುಭವಿಗಳಿಗೆ ನೀಡುವ ಸೌಲಭ್ಯಗಳ ವಿವರವನ್ನು ಅಧಿಕಾರಿಗಳು ಸದಾ ತಮ್ಮೊಂದಿಗೆ ಇಟ್ಟುಕೊಂಡಿರಬೇಕು. ಪರಿಶಿಷ್ಡ ಜಾತಿ ಮತ್ತು ವರ್ಗಗಳಿಗಾಗಿಯೇ ಸರ್ಕಾರದಿಂದ ರೂಪಿಸಿ ಅನುಷ್ಟಾನಗೊಳಿಸುವ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಶ್ರಮಿಸುವಂತೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲು ಬಹುಸಂಖ್ಯಾತ ರೈತರು ಆಸಕ್ತಿ ಹೊಂದಿದ್ದು, ರೇಷ್ಮೇ ಬೆಳೆ ಬೆಳೆಯಲು ಅಗತ್ಯ ಸಹಕಾರ ಮತ್ತು ಇಲಾಖೆಯಿಂದ ನೆರವನ್ನು ನೀಡುವಂತೆ ಸೂಚಿಸಿದರು.
ಪರಿಶಿಷ್ಟ ಸಮುದಾಯದವರು ಹೆಚ್ಚಾಗಿ ವಾಸಿಸುವ ಗ್ರಾಮೀಣ ಪ್ರದೇಶಗಳಲ್ಲಿ ಕಾಯ್ದಿರಿಸಿದ ಅನುದಾನದಿಂದ ಮಾಡಲಾಗುವ ರಸ್ತೆ, ನೀರಿನ ಸ್ಥಾವರ ಮತ್ತಿತರ ಆಸ್ತಿಗಳನ್ನು ಇಲಾಖೆಯ ದಾಖಲೆಗಳಲ್ಲಿ ನಮೂದಿಸಿ, ಆಸ್ತಿಯನ್ನು ಕಾಪಾಡಿಕೊಳ್ಳಬೇಕು. ಅಲ್ಲದೇ ನಿರ್ಮಿಸಲಾಗುವ ರಸ್ತೆಗಳನ್ನು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಬೇಕೆಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ವಾಲ್ಮೀಕಿ ಅಭಿವೃಧ್ಧಿ ನಿಗಮದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮೃತರಾಗಿರುವ ಕುಟುಂಬಕ್ಕೆ ಇಲಾಖೆಯ ವತಿಯಿಂದ ವೇತನ, ಭತ್ಯೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅವರು ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ, ಡಾ|| ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅಶೋಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಶ್ವಥ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶಿಷ್ಟ ಪಂಗಡಗಳ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ : ಸಚಿವ ಟಿ.ರಘುಮೂರ್ತಿ
Date:
