ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಶಿಕಾರಿಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಆನೆಗಳ ಹಿಂಡು ತೋಟ ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟುಮಾಡಿವೆ.
ಅಂಬ್ಲಿಗೋಳ ಜಲಾಶಯದ ಭಾಗದಿಂದ ಹೊರಟ ಕಾಡಾನೆಗಳ ಹಿಂಡು, ಆನಂದಪುರ-ಶಿಕಾರಿಪುರ ಹೆದ್ದಾರಿ (ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766) ಮಾರ್ಗವಾಗಿ ಸಂಚರಿಸಿದೆ. ಪೀರನಕಣಿವೆ ಪಾಯಿಂಟ್ ದಾಟಿ ತುಪ್ಪೂರು ಪ್ರದೇಶವನ್ನು ತಲುಪಿರುವ ಆನೆಗಳು, ಮಾರ್ಗಮಧ್ಯೆ ಸಿಕ್ಕ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗಳನ್ನು ನಾಶಪಡಿಸಿವೆ.
ಕಾಡಾನೆಗಳ ದಾಳಿಯಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಆನೆಗಳ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ಹಾಗೂ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
