ಸೊರಬ: ಪಟ್ಟಣದ ಗುಡಿಕೇರಿ ನಿವಾಸಿ, ಬ್ರಾಹ್ಮಣ ಸಮಾಜದ ಹಿರಿಯರಾದ ರವಿ ಭಾವೆ (65) ಸೋಮವಾರ ನಿಧನರಾದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರವಿ ಭಾವೆ ಅವರು, ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರು ಸಹೋದರರಾದ ವಿಧಾನಸಭೆಯ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಆಪ್ತ ಸಹಾಯಕ ರಂಗನಾಥ ಭಾವೆ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ನೋಂದಣಾಧಿಕಾರಿ ರಮೇಶ್ ಭಾವೆ ಸೇರಿದಂತೆ ಇಬ್ಬರು ಸಹೋದರಿಯರು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಅವರು ರವಿ ಭಾವೆ ಅವರ ನಿವಾಸಕ್ಕೆ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಟೌನ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಭಾಕರ ಗೋಖಲೆ, ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ಭಾವೆ, ಬ್ರಾಹ್ಮಣ ಸಮಾಜದ ಮುಖಂಡ ಮಹೇಶ್ ಗೋಖಲೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
