Friday, October 16, 2026
Friday, October 16, 2026

ಸಾಗರ ಗಂಗೋತ್ರಿ ಬಿ.ಇಡಿ.ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಧರಣಿ

Date:

ಬಿ.ಎಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಹಾಗೂ ಶೈಕ್ಷಣಿಕ ಗೊಂದಲಗಳನ್ನು ಖಂಡಿಸಿ ಸಾಗರದ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಫಲಿತಾಂಶ ಪ್ರಕಟವಾಗದಿದ್ದರೆ ಉದ್ಯೋಗಾವಕಾಶ ಕೈತಪ್ಪುವ ಆತಂಕವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ತಕ್ಷಣ ಫಲಿತಾಂಶ ಪ್ರಕಟಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

2023-24ನೇ ಸಾಲಿನ ವಿದ್ಯಾರ್ಥಿಗಳ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಹಲವು ತಿಂಗಳು ಕಳೆದಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ. 2024-25ನೇ ಸಾಲಿನ ವಿದ್ಯಾರ್ಥಿಗಳ ಒಂದರಿಂದ ಮೂರನೇ ಸೆಮಿಸ್ಟರ್‌ಗಳ ಫಲಿತಾಂಶವೂ ಬಾಕಿ ಉಳಿದಿದೆ. 2025-26ನೇ ಸಾಲಿನ ಬ್ಯಾಚ್‌ನ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆದಿದ್ದರೂ, ಕೋರ್ಸ್‌ನ ಅಧಿಕೃತ ಮಾನ್ಯತೆ ಅಥವಾ ಅನುಮೋದನೆ ಕುರಿತು ಆತಂಕವಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸ್ಥಳಕ್ಕೆ ಆಗಮಿಸಿದ ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ ಅವರು, ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ಲಾಗಿನ್ ಸಮಸ್ಯೆಯಿಂದ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಗೆ ಎರಡು ಬಾರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು, ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರವಾಗಿದ್ದರೂ ವಿಶ್ವವಿದ್ಯಾಲಯವು ಸಮಸ್ಯೆ ಬಗೆಹರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತಾತ್ಮಕ ವೈಫಲ್ಯದಿಂದ ತಮ್ಮ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ವಿಷಯ ತಿಳಿದು ಸಿಂಡಿಕೇಟ್ ಸಭೆ ಮುಗಿಸಿ ಸ್ಥಳಕ್ಕೆ ಬಂದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು, ಕಾಲೇಜಿನ ಮುಖ್ಯಸ್ಥ ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿದರು.

ವಿದ್ಯಾರ್ಥಿಗಳ ಆತಂಕ ಅರ್ಥವಾಗುತ್ತದೆ. ಶಿಕ್ಷಕರ ನೇಮಕಾತಿಯ ಅವಕಾಶ ಕೈತಪ್ಪದಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ. ಯುಯುಸಿಎಂಎಸ್‌ ತಂತ್ರಾಂಶದ ತಾಂತ್ರಿಕ ಸಮಸ್ಯೆ ಪರಿಹರಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗದಂತೆ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಾಕಿ ಫಲಿತಾಂಶ ಹಾಗೂ 2025-26ನೇ ಸಾಲಿನ ಬ್ಯಾಚ್‌ನ ಮಾನ್ಯತೆ ಕುರಿತ ಗೊಂದಲವನ್ನೂ ಶೀಘ್ರ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕುಲಪತಿಗಳ ಭರವಸೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಧರಣಿಯನ್ನು ಹಿಂಪಡೆದರು.

“ತಾಂತ್ರಿಕ ಸಮಸ್ಯೆಯಿಂದ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ. ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಪೂರ್ಣ ಪ್ರಮಾಣದ ಫಲಿತಾಂಶ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ,” ಎಂದು ಕುಲಪತಿ ಡಾ. ಶರತ್ ಅನಂತಮೂರ್ತಿ ತಿಳಿಸಿದರು.

“ನಮ್ಮ ಭವಿಷ್ಯದ ಜೊತೆ ಆಟವಾಡಬೇಡಿ. ಫಲಿತಾಂಶ ವಿಳಂಬದಿಂದ ತೀವ್ರ ಮಾನಸಿಕ ಒತ್ತಡ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಸ್ಪಂದಿಸಿ ಫಲಿತಾಂಶ ಪ್ರಕಟಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ,” ಎಂದು ವಿದ್ಯಾರ್ಥಿ ಅಶ್ವತ್ ಹೇಳಿದರು.

“ನ್ಯಾಯಾಲಯದ ಸ್ಪಷ್ಟ ನಿರ್ದೇಶನಗಳಿದ್ದರೂ ಮಾನ್ಯತೆ ಮುಂದುವರಿಕೆ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಬಾಕಿ ಫಲಿತಾಂಶ ಪ್ರಕಟಿಸಿ, ಯುಯುಸಿಎಂಎಸ್‌ ಪೋರ್ಟಲ್‌ನ ಸಮಸ್ಯೆ ಪರಿಹರಿಸುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು,” ಎಂದು ಕಾಲೇಜಿನ ಮುಖ್ಯಸ್ಥ ಕೃಷ್ಣಮೂರ್ತಿ ಒತ್ತಾಯಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...