ವ್ಯಾಪಾರಸ್ಥರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಜಾಗತೀಕರಣ, ಆನ್ಲೈನ್ ವ್ಯಾಪಾರ, ಸಾರ್ವಜನಿಕ ಸೇವೆಯ ಸವಾಲು, ಸ್ಪರ್ಧೆ ಮತ್ತು ತೆರಿಗೆ ಇನ್ನಿತರ ಸಂಗತಿಗಳ ನಡುವೆಯೂ ವ್ಯಾಪಾರ ನಡೆಸುವುದು ಅನಿವಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ವರ್ತಕರ ದಿನಾಚರಣೆಯಲ್ಲಿ ಹಿರಿಯ ವರ್ತಕ ರೋಟರಿಯನ್ಸ್ ಗಳಿಗೆ ಸನ್ಮಾನಿಸಿ ಮಾತನಾಡಿ, ದೇಶದಲ್ಲಿ 5.5 ಲಕ್ಷ ವ್ಯಾಪಾರಸ್ಥರ ಕುಟುಂಬಗಳಿದ್ದರೂ, ವ್ಯಾಪಾರಸ್ಥರ ಸಮಸ್ಯೆಗಳ ಬಗ್ಗೆ ಸಮರ್ಪಕವಾಗಿ ಚರ್ಚೆ ಆಗುತ್ತಿಲ್ಲ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ವ್ಯಾಪಾರ ಸಂಸ್ಥೆಯವರೆಗೆ ಎಲ್ಲ ವ್ಯಾಪಾರಸ್ಥರನ್ನು ಒಂದೇ ದೃಷ್ಟಿಯಿಂದ ನೋಡುವ ಪ್ರವೃತ್ತಿಯಿದೆ. ವ್ಯಾಪಾರಸ್ಥರನ್ನು ಕೆಲವೊಮ್ಮೆ ತಪ್ಪಿತಸ್ಥರಂತೆ ನೋಡುವ ಮನೋಭಾವವೂ ಕಂಡುಬರುತ್ತದೆ ಎಂದು ತಿಳಿಸಿದರು.
ಆನ್ಲೈನ್ ವ್ಯಾಪಾರ, ಮಾಲ್ಗಳ ಬೆಳವಣಿಗೆ, ಜಿಎಸ್ಟಿ ವ್ಯವಸ್ಥೆಯ ಬದಲಾವಣೆಗಳು ಮತ್ತು ತೀವ್ರ ಸ್ಪರ್ಧೆಯಿಂದ ಸಣ್ಣ ವ್ಯಾಪಾರಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ವ್ಯಾಪಾರಸ್ಥರಿಗೆ 10-15 ವರ್ಷ ಕಾಲಾವಕಾಶ ಬೇಕಾಯಿತು. 2014ರ ನಂತರ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತಷ್ಟು ಬದಲಾವಣೆಗಳು ಕಂಡುಬಂದಿವೆ ಎಂದು ಹೇಳಿದರು.
ಜಾಗತೀಕರಣದಿಂದ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧ್ಯವಾಗಿದೆ. ಆದಾಯ ತೆರಿಗೆ ಇಲಾಖೆಯೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ವ್ಯವಸ್ಥೆಯನ್ನು ಸರಳಗೊಳಿಸಲು ಪ್ರಯತ್ನಿಸುತ್ತಿದೆ. ಸರ್ಕಾರಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ವ್ಯಾಪಾರಸ್ಥರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಇಂದಿನ ವ್ಯಾಪಾರಸ್ಥರ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ವ್ಯಾಪಾರ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆನ್ಲೈನ್ ವ್ಯಾಪಾರ ವಿರೋಧಿಸುವುದಕ್ಕಿಂತ, ಅದಕ್ಕೆ ತಕ್ಕಂತೆ ನಮ್ಮ ವ್ಯಾಪಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರಿಗೆ ಪಿಂಚಣಿ ಸೇರಿ ಹಲವು ಸೌಲಭ್ಯಗಳು ದೊರೆಯುತ್ತವೆ. ಆದರೆ ವ್ಯಾಪಾರಸ್ಥರಿಗೂ ಆರೋಗ್ಯ ಮತ್ತು ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳು ದೊರೆಯುವಂತೆ ಆಗಬೇಕು. ತೆರಿಗೆ ಪಾವತಿಸುವವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ದೇಶದ ಬೆಳವಣಿಗೆಗೆ ಉದ್ಯಮಶೀಲತೆ ಅಗತ್ಯ. ಯುವಜನರು ಉದ್ಯೋಗ ಹುಡುಕುವವರಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಎಫ್ಕೆಸಿಸಿಐ ಮತ್ತು ಚೇಂಬರ್ ಆಫ್ ಕಾಮರ್ಸ್ ನಂತಹ ಸಂಘಟನೆಗಳು ವ್ಯಾಪಾರಸ್ಥರ ಹಿತಾಸಕ್ತಿಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ವರ್ತಕರ ಸೇವೆ ಗುರುತಿಸಿ ವರ್ತಕರ ದಿನಾಚರಣೆ ಆಚರಿಸುವ ರೋಟರಿ ಕ್ಲಬ್ನ ಪ್ರಯತ್ನ ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವರ್ತಕರು ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದರೂ ಅವರ ಸೇವೆಯನ್ನು ಗುರುತಿಸುವ ಕಾರ್ಯ ಆಗುತ್ತಿಲ್ಲ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ನ ಜಿ.ಕೆ. ಮಂಜುನಾಥ್, ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ನ ಗುರುರಾಜ್ ಗಿರಿಮಾಜಿ, ರೋಟರಿ ಮಾಜಿ ಗವರ್ನರ್ ಜಿ.ಎನ್. ಪ್ರಕಾಶ್, ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ನ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಶಿವಮೊಗ್ಗದ ಹಿರಿಯ ಸದಸ್ಯರಾದ ಬಿ.ಎನ್.ವಿಶ್ವೇಂದ್ರ, ಟಿ.ಆರ್.ಅಶ್ವಥನಾರಾಯಣ, ಡಿ.ಎಸ್. ನಟರಾಜ್, ಬಿ.ಕೆ. ಗೋವಿಂದರಾಜು ಮತ್ತು ಎಸ್.ಎಂ. ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಶಿವಮೊಗ್ಗದ ಕಾರ್ಯದರ್ಶಿ ಕೆ.ಎಸ್.ಶೈಲಿನ್ ಬಾಬು, ವೀರಣ್ಣ ಎ. ಹುಗ್ಗಿ, ಸಿ.ವಿಜಯಕುಮಾರ್, ಜಿ.ಸತ್ಯನಾರಾಯಣ, ಸುಮಲತಾ ಭೂಪಾಳಂ ಮತ್ತಿತರರು ಹಾಜರಿದ್ದರು.
