Monday, October 12, 2026
Monday, October 12, 2026

“ವಂದೇಮಾತರಂ” ಗಾಯನ ಜಿಲ್ಲಾ ಕಾಂಗ್ರೆಸ್ ಆಕ್ಷೇಪ ” ತಪ್ಪೇನಿದೆ?” – ಮೋಹನ್ ರೆಡ್ಡಿ

Date:

ಶಿವಮೊಗ್ಗದಲ್ಲಿ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೇಶ್ ಹಾಗೂ ಕೆಲವು ಕಾಂಗ್ರೆಸ್ ಪ್ರಮುಖರು ಅವರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ಖಂಡಿಸಿದ್ದಾರೆ. ಅಲ್ಲದೆ, ಎರಡು ಸಾಲುಗಳಿಗಿಂತ ಹೆಚ್ಚು ಗೀತೆಯನ್ನು ಹಾಡದಂತೆ ಸೂಚನೆ ನೀಡಿರುವುದು ಯಾವ ನಿಯಮದ ಆಧಾರದ ಮೇಲೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಸಾಲುಗಳನ್ನು ಹಾಡಿದ ಬಳಿಕ ಹಾಡುಗಾರರು ನಿಲ್ಲಿಸಿದರೂ, ವೇದಿಕೆಯಲ್ಲಿದ್ದವರು ಹಾಗೂ ಸಾರ್ವಜನಿಕರು ಗೀತೆಯ ಮುಂದಿನ ಸಾಲುಗಳನ್ನು ಹಾಡಿದರು. ದೇಶಭಕ್ತಿಯ ಸಂಕೇತವಾಗಿರುವ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಹಾಡುವುದರಲ್ಲಿ ತಪ್ಪೇನಿದೆ ಎಂದು ಮೋಹನ್ ರೆಡ್ಡಿ ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸಮಾರಂಭಗಳಲ್ಲಿ, ಅದರಲ್ಲೂ ಅದ್ಧೂರಿಯಾಗಿ ನಡೆಯುವ ಶಿವಮೊಗ್ಗ ದಸರಾ ಉದ್ಘಾಟನೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿಯ ಗೀತೆಯ ವಿಚಾರವಾಗಿ ಇಂತಹ ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯ. ‘ವಂದೇ ಮಾತರಂ’ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ರಾಷ್ಟ್ರೀಯ ಭಾವನೆಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಇಂತಹ ಗೀತೆಯನ್ನು ಸಂಪೂರ್ಣವಾಗಿ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸುವುದು ದೇಶಭಕ್ತಿಯ ಭಾವನೆಗಳಿಗೆ ಧಕ್ಕೆ ತರುವಂತಹ ನಡೆ ಎಂದು ಅವರು ಟೀಕಿಸಿದ್ದಾರೆ.

‘ವಂದೇ ಮಾತರಂ’ ಎಂಬುದು ಕೇವಲ ಒಂದು ಗೀತೆಯಲ್ಲ; ಅದು ದೇಶಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಮಾತೃಭೂಮಿಯ ಮೇಲಿನ ಗೌರವವನ್ನು ಸಾರುವ ಗೀತೆಯಾಗಿದೆ. ದೇಶದ ಜನರಲ್ಲಿ ಏಕತೆ ಮತ್ತು ರಾಷ್ಟ್ರಪ್ರೇಮವನ್ನು ಮೂಡಿಸುವ ಮಹತ್ವದ ಸಂದೇಶವನ್ನು ಈ ಗೀತೆ ಸಾರುತ್ತದೆ. ಇಂತಹ ಗೀತೆಯ ಕುರಿತು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಸರಾ ಹಬ್ಬವು ತಾಯಿ ಚಾಮುಂಡೇಶ್ವರಿಯ ಆರಾಧನೆ ಹಾಗೂ ದುಷ್ಟಶಕ್ತಿಗಳ ವಿರುದ್ಧ ಧರ್ಮದ ವಿಜಯವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಇಂತಹ ಸಂದರ್ಭದಲ್ಲಿ ದೇಶಭಕ್ತಿ ಮತ್ತು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯ ವಿವಾದದ ವಿಷಯವನ್ನಾಗಿಸುವ ಬದಲು, ಹಬ್ಬದ ಪಾವಿತ್ರ್ಯ, ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡಬೇಕು ಎಂದು ಮೋಹನ್ ರೆಡ್ಡಿ ಹೇಳಿದ್ದಾರೆ.

‘ವಂದೇ ಮಾತರಂ’ ಗೀತೆಯಲ್ಲಿರುವ “ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ” ಎಂಬ ಸಾಲು ದುರ್ಗಾದೇವಿಯ ಶೌರ್ಯ, ಶಕ್ತಿ ಮತ್ತು ಪರಾಕ್ರಮವನ್ನು ಸ್ತುತಿಸುತ್ತದೆ. ಹತ್ತು ಆಯುಧಗಳನ್ನು ಧರಿಸಿರುವ ದುರ್ಗಾದೇವಿಯ ಸ್ವರೂಪದಲ್ಲಿ ಮಾತೃಶಕ್ತಿಯನ್ನು ಆರಾಧಿಸುವ ಈ ಸಾಲು ಭಾರತೀಯ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ದೇಶಭಕ್ತಿ ಮತ್ತು ಧಾರ್ಮಿಕ ಭಾವನೆಗಳನ್ನು ರಾಜಕೀಯ ವಿವಾದಕ್ಕೆ ಬಳಸಿಕೊಳ್ಳದೆ, ಪರಸ್ಪರ ಗೌರವ ಹಾಗೂ ಸಾಮರಸ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ದೇಶದ ಏಕತೆ ಮತ್ತು ರಾಷ್ಟ್ರಪ್ರೇಮವನ್ನು ಬಲಪಡಿಸುವ ಇಂತಹ ಗೀತೆಗಳ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸದೆ, ಅವುಗಳ ಗೌರವವನ್ನು ಎತ್ತಿಹಿಡಿಯಬೇಕು ಎಂದು ಮೋಹನ್ ರೆಡ್ಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...