ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಜಿ. ಮಧುಸೂದನ್ ಅವರು ಇಂದು ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಮಧುಸೂದನ್ ಅವರನ್ನು ಸನ್ಮಾನಿಸಿದ ಮಧು ಬಂಗಾರಪ್ಪ ಅವರು, ನೂತನ ಜವಾಬ್ದಾರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಮಧುಸೂದನ್ ಅವರ ನಾಯಕತ್ವದಲ್ಲಿ ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳು ಸುಸಂಘಟಿತ ನಗರಾಭಿವೃದ್ಧಿ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಮಗ್ರ ಪ್ರಗತಿಯ ಮೂಲಕ ಹೊಸ ಎತ್ತರವನ್ನು ತಲುಪಲಿ ಎಂದು ಅವರು ಆಶಿಸಿದರು.
ಇದೇ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲವಾಗಿ ಸಂಘಟಿಸುವಂತೆ ಮಧುಸೂದನ್ ಅವರಿಗೆ ಸಲಹೆ ನೀಡಿದರು. ರಾಹುಲ್ ಗಾಂಧಿ ಅವರು ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಯುವಕರು ಹೆಚ್ಚಿನ ಶಕ್ತಿ ತುಂಬಬೇಕು. ಯುವಕರಿಗೆ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಕರ್ನಾಟಕ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಶೆಟ್ಟಿ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
