ಸುಗಮ ಸಂಗೀತವು ಬೆಳೆದು ಬಂದ ರೀತಿ, ಅದಕ್ಕೆ ಹಿರಿಯ ಕವಿಗಳು, ಗೀತರಚನೆಕಾರರು, ಸಂಗೀತ ನಿರ್ದೇಶಕರು ಹಾಗೂ ಗಾಯಕರ ನೀಡಿರುವ ಕೊಡುಗೆಯನ್ನು ಇಂದಿನ ಉದಯೋನ್ಮುಖ ಗಾಯಕರಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಬೆಂಗಳೂರಿನ ಬನಶಂಕರಿ 2ನೇ ಹಂತದ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸುಗಮ ಸಂಗೀತದ ಬೆಳವಣಿಗೆ ಹಾಗೂ ಉಳಿವಿಗಾಗಿ ಹೆಚ್ಚಿನ ಸಂಗೀತ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಘಟಕವು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನಿರಂತರ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಸುಗಮ ಸಂಗೀತವನ್ನು ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು. ಸುಗಮ ಸಂಗೀತದ ಇತಿಹಾಸ, ಅದರ ಬೆಳವಣಿಗೆ ಹಾಗೂ ಹಿರಿಯ ಕಲಾವಿದರ ಸಾಧನೆಗಳನ್ನು ಹೊಸ ತಲೆಮಾರಿಗೆ ತಿಳಿಸುವ ಮೂಲಕ ಕಲಾಪ್ರಕಾರದ ಪರಂಪರೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಶತಮಾನೋತ್ಸವವನ್ನು ಪ್ರತಿಯೊಂದು ಜಿಲ್ಲೆಯಲ್ಲೂ ಹಬ್ಬದ ರೀತಿಯಲ್ಲಿ ಆಚರಿಸುವ ಉದ್ದೇಶ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ಹಾಗೂ ಸದಸ್ಯರು ಭಾಗವಹಿಸಿ, ಘಟಕವು ವರ್ಷವಿಡೀ ನಡೆಸಿದ ಕಾರ್ಯಕ್ರಮಗಳ ವಿವರ ಮತ್ತು ಛಾಯಾಚಿತ್ರಗಳನ್ನು ಒಳಗೊಂಡ ಪುಸ್ತಕವನ್ನು ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಜಿ.ಕೆ. ದಿನೇಶ್, ರಾಜಕುಮಾರ್, ಪ್ರೊ. ಸತ್ಯನಾರಾಯಣ, ಬಿ.ಆರ್. ಲಕ್ಷ್ಮಣರಾವ್, ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಪ್ರಶಾಂತ್ ಉಡುಪ, ಮುರಳಿಧರ್, ಶೋಭಾ ಸತೀಶ್, ಉಮಾ ದಿಲೀಪ್, ಸೋಮಶೇಖರ್, ರಮಾ ಸುಬ್ರಮಣ್ಯ, ಹರ್ಷಿತಾ, ಮಾನಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.
