ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಗೆ ಮಾದರಿಯಾಗಿದೆ. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕಾರದ ಆಶಯದೊಂದಿಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಕಲ್ಲುಕೊಪ್ಪ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ ಹೇಳಿದರು.
ಕಲ್ಲುಕೊಪ್ಪದಲ್ಲಿ ನಿರ್ಮಿಸಿರುವ ಶರಾವತಿ ಸಹಕಾರಿ ಭವನದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಕೇವಲ ಲಾಭ ಗಳಿಸುವ ಉದ್ದೇಶದಿಂದ ಮಾತ್ರ ಕಾರ್ಯನಿರ್ವಹಿಸಬಾರದು. ಸಹಕಾರ ಕ್ಷೇತ್ರದ ಮೂಲಕ ಜನರ ಹಿತ ಕಾಪಾಡುವ ಜವಾಬ್ದಾರಿಯೂ ಇದೆ. ಗ್ರಾಮೀಣ ಭಾಗದ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು. ಜಾತಿ, ಮತ, ಧರ್ಮ ಹಾಗೂ ಪಕ್ಷ-ಪಂಗಡಗಳನ್ನು ಮೀರಿ ಎಲ್ಲರನ್ನು ಒಗ್ಗೂಡಿಸಿಕೊಂಡು ಸಮಾಜದ ಉನ್ನತಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ಹಾಲು ಉತ್ಪಾದಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಗ್ರಾಮದ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಒಗ್ಗಟ್ಟಿನ ಪ್ರಯತ್ನದಿಂದಾಗಿ ಸಂಘವು ಉತ್ತಮವಾಗಿ ಮುನ್ನಡೆಯುತ್ತಿದೆ. ಇದೇ ರೀತಿಯ ಸಹಕಾರ ಮತ್ತು ಒಗ್ಗಟ್ಟು ಮುಂದುವರಿದರೆ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾಮಸ್ಥರು ತಮ್ಮ ವಿವಿಧ ಸಭೆ, ಸಮಾರಂಭ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಶರಾವತಿ ಸಹಕಾರಿ ಭವನವನ್ನು ನಿರ್ಮಿಸಿರುವುದು ಸಂತಸದ ಸಂಗತಿ. ಇಂತಹ ಭವನಗಳು ಗ್ರಾಮೀಣ ಪ್ರದೇಶಗಳಲ್ಲಿ ಜನರು ಒಂದೆಡೆ ಸೇರಿ ಚರ್ಚೆ ನಡೆಸಲು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ತಮ ವೇದಿಕೆಯಾಗುತ್ತವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಸಹಕಾರಿ ಭವನದಲ್ಲಿ ಇನ್ನಷ್ಟು ಜನಪರ, ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ತನ್ನ ಕಾರ್ಯಚಟುವಟಿಕೆಗಳ ಮೂಲಕ ಜಿಲ್ಲೆಯ ಇತರ ಸಹಕಾರ ಸಂಘಗಳಿಗೂ ಮಾದರಿಯಾಗುವಂತೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬಿ.ಎಂ.ಸಿ. ಕೇಂದ್ರದ ೨೦೨೫-೨೬ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಲೋಕೇಶ್ ಜಿ. ಕರಕುಚ್ಚಿ, ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ಸದಸ್ಯರು ಮತ್ತು ಹಾಲು ಉತ್ಪಾದಕರ ಸಹಕಾರದಿಂದ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರತಿದಿನ ಸರಾಸರಿ ೨,೦೦೦ ಲೀಟರ್ ಹಾಲು ಶೇಖರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
೨೦೨೫-೨೬ನೇ ಸಾಲಿನಲ್ಲಿ ಸಂಘವು ೩,೮೦,೫೯೬ ನಿವ್ವಳ ಲಾಭ ಗಳಿಸಿದೆ. ಸಂಘಕ್ಕೆ ಹಾಲು ಪೂರೈಸುವ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಪೈಸೆ ೩೦ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರು ಹಾಗೂ ಸದಸ್ಯರ ಸಹಕಾರದಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
೨೦೨೩-೨೪ನೇ ಸಾಲಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಅತಿ ಹೆಚ್ಚು ಹಾಲು ಶೇಖರಣೆ ಮಾಡಿದ ಸಂಘವಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಅತ್ಯುತ್ತಮ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಸಂಘದ ಬೈಲ್ ಸರಿಯಾದ ಓದಿ ತಿಳಿದು ವ್ಯವಹರಿಸಿ ಎಂದು ಕಿವಿ ಮಾತು ಹೇಳಿದರು.
ಸಂಘದ ಪ್ರಗತಿಗೆ ಸಹಕರಿಸುತ್ತಿರುವ ಎಲ್ಲ ಶೇರುದಾರರು, ಹಾಲು ಉತ್ಪಾದಕರು, ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಮುಲ್ ಅಧ್ಯಕ್ಷ ವಿದ್ಯಾಧರ್ ಮಾತನಾಡುತ್ತಾ ರೈತರು ಹೈನುಗಾರಿಕೆಯನ್ನು ಕೈಗೊಳ್ಳಲು ಅಗತ್ಯವಾದ ಸಾಲ ಹಾಗೂ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಶಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಕಲ್ಪಿಸಲಾಗುತ್ತಿದೆ. ಗ್ರಾಮಸ್ಥರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಹಸುಗಳನ್ನು ಖರೀದಿಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಒಂದು ಹಸುವಿಗೆ ಸುಮಾರು ೮೦ ಸಾವಿರದಿಂದ ೧.೨೦ ಲಕ್ಷದವರೆಗೆ ವಿಮೆ ಮಾಡಿಸುವ ವ್ಯವಸ್ಥೆಯೂ ಇದೆ. ಹೈನುಗಾರಿಕೆ ಕ್ಷೇತ್ರಕ್ಕೆ ಶಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ಮತ್ತು ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯನ್ನು ವಿಸ್ತರಿಸಬೇಕು. ಇದರಿಂದ ಕುಟುಂಬದ ಆದಾಯ ಹೆಚ್ಚಿಸುವುದರ ಜತೆಗೆ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಾಧ್ಯವಾಗುತ್ತದೆ ಎಂದರು.
ಕಲ್ಲುಕೊಪ್ಪದ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಹಾಲು ಉತ್ಪಾದಕರೂ ಸಕ್ರಿಯವಾಗಿ ಪಾಲ್ಗೊಂಡು ಸಂಘವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಕೇವಲ ಹಾಲು ಉತ್ಪಾದನೆ ಮತ್ತು ಶೇಖರಣೆಗೆ ಸೀಮಿತವಾಗದೆ, ಗ್ರಾಮಗಳ ಸಾಮಾಜಿಕ ಅಭಿವೃದ್ಧಿಗೂ ಕೊಡುಗೆ ನೀಡಬೇಕು. ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಕಾರಿ ಭವನ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಗ್ರಾಮಸ್ಥರು ಸಣ್ಣಪುಟ್ಟ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ನಡೆಸಲು ನಗರ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿಯನ್ನು ಈ ಭವನ ನಿರ್ಮಾಣದಿಂದ ತಪ್ಪಿಸಿದಂತಾಗಿದೆ. ಗ್ರಾಮದಲ್ಲಿಯೇ ಉತ್ತಮ ಸೌಲಭ್ಯ ಕಲ್ಪಿಸಿರುವುದು ಸಂಘದ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮತ್ತು ಶೇಖರಣೆ ಮಾಡುವ ಪ್ರಮುಖ ಘಟಕವಾಗಿ ರೂಪುಗೊಳ್ಳಬೇಕು. ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ಇನ್ನಷ್ಟು ಜನಸೇವಾ ಕಾರ್ಯಗಳನ್ನು ಕೈಗೊಳ್ಳುವಂತಾಗಬೇಕು ಎಂದು ಆಶಿಸಿದರು
ಸಂದರ್ಭದಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಆರ್.ಮಂಜೇಶ್, ಡಿ.ಆನಂದ್, ಹೆಚ್.ಬಿ.ದಿನೇಶ್,ಲ ಜಿ.ಎನ್.ಸುಧೀರ್, ಉಲ್ಲಾಸ್ ಮೇಸ್ತ, ಆನಂದಪ್ಪ ಬಿ. ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಶೇರುದಾರರು ಉಪಸ್ಥಿತರಿದ್ದರು.
ಕಲ್ಲುಕೊಪ್ಪ ಸಹಕಾರ ಸಂಘ ಜಿಲ್ಲೆಗೆ ಮಾದರಿ: ಆರ್.ಎಂ. ಮಂಜುನಾಥ್‌ಗೌಡ
Date:
