ಸನಾತನ ಧರ್ಮದ ಸಂರಕ್ಷಣೆ, ಧಾರ್ಮಿಕ ಆಚರಣೆಗಳ ಪಾಲನೆ ಹಾಗೂ ಸಮಾಜದಲ್ಲಿ ಒಗ್ಗಟ್ಟಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗ ನಗರದ ಕೋಟೆ ರಸ್ತೆಯ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿಯ ಸನ್ನಿಧಾನದಲ್ಲಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸನಾತನ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮವು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪ್ರತೀಕವಾಗಿದೆ. ಧಾರ್ಮಿಕ ಆಚರಣೆಗಳು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಸೇವಾ ಮನೋಭಾವ, ಸಹೋದರತ್ವ ಮತ್ತು ಒಗ್ಗಟ್ಟನ್ನು ಬೆಳೆಸುವಂತಿರಬೇಕು ಎಂದರು.
ಅನ್ನದಾನವು ಸನಾತನ ಧರ್ಮದ ಪ್ರಮುಖ ಸೇವಾ ಪರಂಪರೆಯಾಗಿದ್ದು, ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಗಣಪತಿ ಹಬ್ಬವು ಭಕ್ತಿ, ಶ್ರದ್ಧೆ ಹಾಗೂ ಸಾಮಾಜಿಕ ಜಾಗೃತಿಯ ಸಂಕೇತವಾಗಿದ್ದು, ಯುವಜನತೆ ನಮ್ಮ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸನ್ನ, ಆನಂದ್, ಓಂ ಪ್ರಕಾಶ್ ಜೈನ್, ಚಂದ್ರಶೇಖರ್, ಪ್ರವೀಣ್ ಜೈನ್, ಅನಿಲ್ ಜೈನ್, ಅಲ್ಪೇಶ್ ಜೈನ್, ಪ್ರಕಾಶ್ ಜೈನ್, ಮನೀಶ್ ಜೈನ್, ಪ್ರದೀಪ್ ಜೈನ್, ವಿನೋದ್ ಜೈನ್ ಹಾಗೂ ಸಂಪತ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
