Friday, September 18, 2026
Friday, September 18, 2026

ಸೃಷ್ಟಿಶೀಲತೆಯನ್ನು ಪೂಜಿಸುವ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿ ಸಾರುತ್ತಿದೆ : ಚಂದ್ರಭೂಪಾಲ್

Date:

ಎಲ್ಲವನ್ನು ಸಾಧಿಸಿದವನು ವಿಶ್ವಕರ್ಮ ಆಗಿದ್ದು, ಸೃಷ್ಟಿಶೀಲತೆಯನ್ನು ಪೂಜಿಸುವ ಸುಂದರ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿಯು ಜಗತ್ತಿಗೆ ಸಾರುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮ ಸಂಸ್ಕೃತಿ ಮತ್ತು ಕೌಶಲ್ಯವನ್ನು ಗೌರವಿಸುವುದೇ ವಿಶ್ವಕರ್ಮ ಜಯಂತಿಯ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಕೆಲಸದಲ್ಲೂ ದೈವತ್ವವನ್ನು ಕಾಣುವವನು ವಿಶ್ವಕರ್ಮಿ. ವಿಶ್ವಕರ್ಮ ಮೊದಲ ಎಂಜಿನಿಯರ್ ಆಗಿದ್ದಾರೆ. ವಿಷ್ಣುವಿನ ಎಲ್ಲ ಆಯುಧಗಳನ್ನು ಸಿದ್ದಪಡಿಸಿದ್ದು ವಿಶ್ವಕರ್ಮರಾಗಿದ್ದು ಅವರ ಪ್ರತಿಭೆ ಅಗಾಧ. ಅವರ ದೂರದೃಷ್ಟಿ, ಕೌಶಲ್ಯ, ಚಿಂತನೆಗಳು ಎಂದಿಗೂ ಪ್ರಸ್ತುತವಾಗಿವೆ.
ವಿಶ್ವಕರ್ಮರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಇಂತಹ ಮಹಾನ್‌ಪುರುಷರ ಜೀವನದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ವಿಶೇಷ ಉಪನ್ಯಾಸ:
ಯುವಕವಿ ಹಾಗೂ ಹಗರಿಬೊಮ್ಮನಹಳ್ಳಿಯ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನ ಉಪನ್ಯಾಸಕರಾದ ಜಿ. ಬಿ. ವಿನಯರಾಜ್ ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರಿಂದ ಜಗತ್ತು ಉತ್ಪತ್ತಿಯಾಯಿತು ಎಂಬ ಮಾತಿದೆ. ಸೃಷ್ಟಿಯ ನಕಾಶೆ ತಯಾರಿಸಿದ್ದು ಪರಬ್ರಹ್ಮ ವಿಶ್ವಕರ್ಮ. ಯಜುರ್ವೇದ ಮತ್ತು ಅಥರ್ವವೇದಗಳಲ್ಲಿ ವಿಶ್ವಕರ್ಮನನ್ನು ‘ಪ್ರಜಾಪತಿ’ ಮತ್ತು ‘ವಿಶ್ವಧರ’ ಎಂದು ಕರೆಯಲಾಗಿದೆ. ಬ್ರಹ್ಮಾಂಡದ ಹುಟ್ಟಿಗಿಂತ ಮುಂಚೆ ನೀರಷ್ಟೇ ಇದ್ದಾಗ, ಮೊದಲ ಗರ್ಭವನ್ನು ರೂಪಿಸಿದವನು ವಿಶ್ವಕರ್ಮ.
ವೇದಗಳಲ್ಲಿ ‘ತ್ವಷ್ಟಾ’ ಎಂಬ ಹೆಸರಿನಿಂದಲೂ ಈತನನ್ನು ಕರೆಯಲಾಗುತ್ತದೆ. ದೇವತೆಗಳ ದಿವ್ಯ ಪಾತ್ರೆಗಳು, ಇಂದ್ರನ ವಜ್ರಾಯುಧ ಹಾಗೂ ಸಮಸ್ತ ಜೀವಿಗಳ ಆಕಾರ ಮತ್ತು ರೂಪಗಳನ್ನು ಈತನೇ ಕಡೆದು ನಿರ್ಮಿಸಿದನು ಎಂದು ಹೇಳಲಾಗುತ್ತದೆ.
ದೇವರ ಕಲ್ಪನೆ ಕೊಟ್ಟವರು, ಮೂರ್ತಿಗೆ ಶಕ್ತಿ ಕೊಟ್ಟವರು ವಿಶ್ವಕರ್ಮ. ಜಗತ್ತೇ ಮೆಚ್ಚುವ ನಮ್ಮ ದೇಶದ ಕಲಾ ಸಂಸ್ಕೃತಿಯನ್ನು ಕೊಟ್ಟವರು ವಿಶ್ವಕರ್ಮ. ಭಗವಾನ್ ವಿಶ್ವಕರ್ಮನನ್ನು ಕೇವಲ ಒಬ್ಬ ದೇವಶಿಲ್ಪಿಯಾಗಿ ಮಾತ್ರವಲ್ಲದೆ, ಇಡೀ ಬ್ರಹ್ಮಾಂಡದ ಮೂಲ ಸೃಷ್ಟಿಕರ್ತ ಎಂದು ನೋಡಲಾಗುತ್ತದೆ.
ಪ್ರತಿ ಊರಿಗೆ ವಿಶ್ವಕರ್ಮರು ಬೇಕು. ಪಂಚ ಕಸುಬು ಮಾಡುವ ವಿಶ್ವಕರ್ಮರು ವಿಶ್ವಕ್ಕೇ ಬೇಕಾಗಿದ್ದಾರೆ. ರೈತರಿಗೂ ಕೂಡ ಇವರು ಬೆನ್ನೆಲುಬಾಗಿದ್ದಾರೆ. ವಿಶ್ವಕರ್ಮರನ್ನು ಪಾಂಚಾಲರು, ಪತ್ತಾರರು ಎಂಬ ಹಲವಾರು ಹೆಸರಿಂದ ಕರೆಯಲಾಗುತ್ತದೆ. ವಿಶ್ವಕರ್ಮರು ಜಗತ್ತಿನ ಮೊದಲ ಇಂಜಿಯರ್ ಆಗಿದ್ದು, ಪ್ರತಿ ವಿಶ್ವಕರ್ಮಿಗಳು ಇಂಜಿನಿಯರ್‌ಗಳೇ ಆಗಿದ್ದಾರೆ.
ವಿಶ್ವ್ವಕರ್ಮ ಪರಂಪರೆಯ ಮೂಲದವರಾದ ಮೌನೇಶ್ವರರು ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿ, ಕಾಯಕವನ್ನು ದೈವಿಕ ಭಾವನೆಯಿಂದ ಮಾಡಬೇಕೆಂದು ಬೋಧಿಸಿದ್ದು, ಕಾಯಕವೇ ಕಾಳಮ್ಮ ಎಂದು ಅವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ.
ವಿಶ್ವಕರ್ಮ ಸಮುದಾಯದವರು ಕೆಲ ಆಂತರಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಕುಲ ಕಸುಬಿನೊಂದಿಗೆ ಮಕ್ಕಳನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರಬೇಕಿದೆ. ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸಬೇಕಿದ್ದು ಇವರಿಗೆ ಅವಕಾಶಗಳು ದೊರಕಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಸಿ ಕಚೇರಿಯ ಶಿರಸ್ತೇದಾರ್ ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಇತರೆ ಅಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...