ಮಕ್ಕಳಲ್ಲಿ ಅತಿ ವಿರಳವಾಗಿ ಕಂಡುಬರುವ ದವಡೆಯ ಗಡ್ಡೆಯಿಂದ (ಡೆಂಟಿಜೆರಸ್ ಒಡೊಂಟೊಜೆನಿಕ್ ಸಿಸ್ಟ್) ಬಳಲುತ್ತಿದ್ದ 11 ವರ್ಷದ ಬಾಲಕನಿಗೆ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ರೀತಿಯ ದವಡೆ ಗಡ್ಡೆಗಳು (Cysts) 20 ರಿಂದ 40 ವರ್ಷ ವಯಸ್ಸಿನ ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ, ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹೀಗಾಗಿ ಈ ಪ್ರಕರಣವು ವೈದ್ಯಕೀಯವಾಗಿ ವಿಶೇಷ ಗಮನ ಸೆಳೆದಿದೆ.
ಬಾಲಕನು ಬಲಭಾಗದ ದವಡೆಯಲ್ಲಿ ನಿರಂತರ ನೋವು ಮತ್ತು ಮುಖದ ಊತದಿಂದ ಬಳಲುತ್ತಿದ್ದನು. ಈ ಗಡ್ಡೆಯು ಕೆಳ ದವಡೆಯ ಅಗಲಕ್ಕೂ ಹರಡಿತ್ತು. ಒಂದು ವೇಳೆ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದರೆ ಅಥವಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದವಡೆಯ ಮೂಳೆ ಮುರಿಯುವ (pathological fracture) ತೀವ್ರ ಅಪಾಯವಿತ್ತು.
ವೈದ್ಯಕೀಯ ತಪಾಸಣೆಯ ವೇಳೆ ಬಲಭಾಗದ ರೆಟ್ರೊಮೋಲಾರ್ ಟ್ರಿಗೋನ್ (RMT) ಭಾಗದಲ್ಲಿ ಊತವಿರುವುದು, ಕೆನ್ನೆ ಉಬ್ಬಿರುವುದು ಮತ್ತು ದವಡೆಯ ಹಲ್ಲಿನ ಸ್ಥಾನ ಪಲ್ಲಟದಿಂದಾಗಿ ಬಾಯಿ ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗದಿರುವುದು (open bite) ಕಂಡುಬಂತು. ತಜ್ಞರು ಕೋನ್ ಬೀಮ್ ಸಿಟಿ (CBCT) ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಿದಾಗ, ಬುದ್ಧಿಹಲ್ಲಿಗೆ (ಕೆಳದವಡೆಯ ಮೂರನೇ ಹಲ್ಲು) ಹೊಂದಿಕೊಂಡಂತೆ ಡೆಂಟಿಜೆರಸ್ ಗಡ್ಡೆ (Cyst) ಬೆಳೆದಿರುವುದು ದೃಢಪಟ್ಟಿತು.
ಗಡ್ಡೆಯು ಆರು ಸೆಂಟಿಮೀಟರ್ ಉದ್ದ ಮತ್ತು ಮೂರು ಸೆಂಟಿಮೀಟರ್ ಅಗಲವಿದ್ದು, ಅದರ ಸಂಕೀರ್ಣತೆಯಿಂದಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಯೋಜಿಸಲಾಯಿತು. ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್ (ಕ್ಯಾನ್ಸರ್ ಶಸ್ತ್ರಚಿಕಿತ್ಸಕ) ಡಾ. ದೀಪಕ್ ಸಿ. ಕಿತ್ತೂರು ಅವರ ನೇತೃತ್ವದ ವೈದ್ಯಕೀಯ ತಂಡವು, ಬಾಲಕನಿಗೆ ಸಂಪೂರ್ಣ ಅರಿವಳಿಕೆ (general anaesthesia) ನೀಡಿ ದವಡೆಯ ಮೂಳೆಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು.
ಈ ಶಸ್ತ್ರಚಿಕಿತ್ಸೆಯಲ್ಲಿ ದವಡೆಯ ಮೂಲ ಆಕಾರವನ್ನು ಉಳಿಸಿಕೊಳ್ಳುವುದೇ ಅತಿದೊಡ್ಡ ಸವಾಲಾಗಿತ್ತು. ದವಡೆಯ ಮೂಳೆಯು ಬೆಂಕಿಕಡ್ಡಿಯಷ್ಟು ತೆಳುವಾಗಿ ಮತ್ತು ದುರ್ಬಲವಾಗಿದ್ದರಿಂದ ಅದು ಮುರಿದುಬೀಳುವ ಹೆಚ್ಚಿನ ಅಪಾಯವಿತ್ತು. “ಬಾಲಕನ ಮುಖದ ಮುಂದಿನ ಬೆಳವಣಿಗೆಗೆ ಯಾವುದೇ ತೊಂದರೆಯಾಗದಂತೆ ದವಡೆಯ ಬೆಳವಣಿಗೆಯ ಕೇಂದ್ರಗಳನ್ನು (growth centres) ಸುರಕ್ಷಿತವಾಗಿ ರಕ್ಷಿಸುವುದು ನಮಗೆ ಅತ್ಯಂತ ಪ್ರಮುಖವಾಗಿತ್ತು,” ಎಂದು ಡಾ. ಕಿತ್ತೂರು ತಿಳಿಸಿದರು. ಶಸ್ತ್ರಚಿಕಿತ್ಸಾ ತಂಡವು ವಹಿಸಿದ ಈ ಎಚ್ಚರಿಕೆಯ ಕ್ರಮದಿಂದಾಗಿ ಬಾಲಕನ ಮುಖದ ಸೌಂದರ್ಯ ಮತ್ತು ದವಡೆಯ ಚಲನೆಗೆ ಯಾವುದೇ ಧಕ್ಕೆಯಾಗಿಲ್ಲ.
ದವಡೆಯ ಗಡ್ಡೆಗಳು (ಮುಖ್ಯವಾಗಿ ಬೆಳೆಯದ ಹಲ್ಲುಗಳ ಸುತ್ತ ಬೆಳೆಯುವ ಡೆಂಟಿಜೆರಸ್ ಸಿಸ್ಟ್ನಂತಹವು) ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರದಿದ್ದರೂ, ಕಾಲಕ್ರಮೇಣ ಗಂಭೀರ ಸಮಸ್ಯೆಗಳು ಮತ್ತು ಸೋಂಕಿಗೆ ಕಾರಣವಾಗಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಹಲ್ಲುಗಳ ಸ್ಥಾನ ಪಲ್ಲಟ, ದವಡೆಯ ಸವೆತ ಅಥವಾ ಮುಖದ ಆಕಾರ ವಿರೂಪಗೊಳ್ಳುವಂತಹ ದೀರ್ಘಕಾಲದ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು.
ಶಸ್ತ್ರಚಿಕಿತ್ಸೆಯ ನಂತರದ ದಿನಗಳಲ್ಲಿ ಬಾಲಕನ ಆರೋಗ್ಯದಲ್ಲಿ ತ್ವರಿತ ಚೇತರಿಕೆ ಕಂಡುಬಂದಿತು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಬಾಲಕನ ಮುಖದ ಊತ ಮತ್ತು ನೋವು ಕಡಿಮೆಯಾಗಿದ್ದು, ಆರೋಗ್ಯ ಸ್ಥಿರವಾದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ದವಡೆಯ ಸಂಪೂರ್ಣ ಕಾರ್ಯಕ್ಷಮತೆಗಾಗಿ ನಿರಂತರ ವ್ಯಾಯಾಮಗಳನ್ನು ಮುಂದುವರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
“ಮಕ್ಕಳಲ್ಲೂ ಇಂತಹ ಸಂಕೀರ್ಣವಾದ ದವಡೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಸ್ಥಳೀಯವಾಗಿಯೇ ಇಂತಹ ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವ ನಮ್ಮ ಸಾಮರ್ಥ್ಯವು, ತಜ್ಞರ ಆರೈಕೆ ಮತ್ತು ಸಕಾಲಿಕ ಸ್ಕ್ಯಾನಿಂಗ್ನ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ. ಈ ಬಾಲಕ ನಮ್ಮಲ್ಲಿ ಬರುವ ಮುಂಚೆ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದ ಅಲ್ಲಿ ದವಡೆಯ ಬಲ ಭಾಗ ತೆಗೆಯಬೇಕು ಅಂತಾ ಹೇಳಿದ್ದರು ನಾವು ಕೇವಲ ಗಡ್ಡೆ ಮಾತ್ರ ತೆಗೆದು ಅವರ ಬಾಯಿಯ ಸ್ವರೂಪ ಉಳಿಸಿದ್ದೇವೆ. ” ಎಂದು ಡಾ. ದೀಪಕ್ ಕಿತ್ತೂರು ಹೇಳಿದರು.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಉತ್ತಮ ಶರ್ಮ ಅವರು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿ ಮಾತನಾಡುತ್ತಾ, “ಸಣ್ಣ ವಯಸ್ಸಿನ ಮಗುವಿನಲ್ಲಿ ಕಾಣಿಸಿಕೊಂಡ ಅಪರೂಪದ ದವಡೆ ಗಡ್ಡೆಗೆ ಯಶಸ್ವಿ ಚಿಕಿತ್ಸೆ ನೀಡಿರುವುದು ನಮ್ಮ ವೈದ್ಯರ ಅಸಾಧಾರಣ ಕೌಶಲ್ಯಕ್ಕೆ ಕನ್ನಡಿಯಾಗಿದೆ. ಅಷ್ಟೇ ಅಲ್ಲದೆ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಈಗ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜನರಿಗೂ ಸುಲಭವಾಗಿ ಲಭ್ಯವಿವೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇನ್ನು ಮುಂದೆ ಸಂಕೀರ್ಣ ಚಿಕಿತ್ಸೆಗಳಿಗಾಗಿ ರೋಗಿಗಳು ದೊಡ್ಡ ನಗರಗಳಿಗೆ ಅಲೆಯುವ ಅಗತ್ಯವಿಲ್ಲ. ನಮ್ಮ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಪರಿಣಿತ ವೈದ್ಯಕೀಯ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ,” ಎಂದು ತಿಳಿಸಿದರು.
