Friday, September 11, 2026
Friday, September 11, 2026

ಪರೀಕ್ಷಾ ಪದ್ಧತಿಗಳಲ್ಲಿ ಪಾರದರ್ಶಕತೆ & ತಂತ್ರಜ್ಞಾನದ ಬಳಸಿ ಆಯ್ಕೆ ಪ್ರಕ್ರಿಯೆಯನ್ನ ಶೀಘ್ರಪೂರ್ಣ ಮಾಡಲಾಗುವುದು- ಹೆಚ್.ಪ್ರಸನ್ನ

Date:

ಕರ್ನಾಟಕ ಲೋಕಸೇವಾ ಆಯೋಗದ ಇಂದಿನ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮತ್ತಷ್ಟು ಪಾರದರ್ಶಕ, ತಂತ್ರಜ್ಞಾನಾಧಾರಿತ ಹಾಗೂ ತ್ವರಿತಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ನೂತನ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರನ್ನು ಆಯೋಗದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಮಾದರಿಯಲ್ಲಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪರೀಕ್ಷಾ ಪದ್ಧತಿಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ 3 ರಿಂದ 5 ತಿಂಗಳೊಳಗೆ ಫಲಿತಾಂಶ ಪ್ರಕಟಿಸಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೆಚ್. ಪ್ರಸನ್ನ ಅವರು ವಿವರಿಸಿದರು.

ನೇಮಕಾತಿ ಪರೀಕ್ಷೆಗಳು ಪೂರ್ಣಗೊಂಡ ಕೂಡಲೇ ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ OMR ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಆಯೋಗದ ಅಧಿಕೃತ ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಅಭ್ಯರ್ಥಿಗಳು ತಮ್ಮ OMR ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಅನುಕೂಲವಾಗಲಿದೆ. ಅಲ್ಲದೆ, ಪರೀಕ್ಷೆ ಪೂರ್ಣಗೊಂಡ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.

ಸಭೆಯಲ್ಲಿ ಆಯೋಗದ ಸದಸ್ಯರು ವಿವಿಧ ಸಲಹೆಗಳನ್ನು ನೀಡಿದ್ದು, ನೇಮಕಾತಿ ಪ್ರಕ್ರಿಯೆಗಳನ್ನು ಸಂಪೂರ್ಣ ಪಾರದರ್ಶಕವಾಗಿ ಹಾಗೂ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಸರ್ಕಾರಿ ಉದ್ಯೋಗದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವುದೇ ವ್ಯಕ್ತಿಗಳು ನೀಡುವ ಆಮಿಷಗಳಿಗೆ ಒಳಗಾಗದೆ, ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಆಯೋಗವು ಮನವಿ ಮಾಡಿದೆ. ಯಾವುದೇ ರೀತಿಯ ಮಧ್ಯವರ್ತಿಗಳ ಅಥವಾ ಅನಧಿಕೃತ ವ್ಯಕ್ತಿಗಳ ಭರವಸೆಗಳಿಗೆ ಬಲಿಯಾಗದೆ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ಮಾಡಿಕೊಂಡು ಸರ್ಕಾರದ ನೇಮಕಾತಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಲೋಕಸೇವಾ ಆಯೋಗದ ಮಾದರಿಯ ಪಾರದರ್ಶಕತೆ, ತಂತ್ರಜ್ಞಾನ ಬಳಕೆ ಮತ್ತು ತ್ವರಿತ ನೇಮಕಾತಿ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಿ ಸರ್ಕಾರದ ಆಶಯದಂತೆ ಕಾರ್ಯನಿರ್ವಹಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...